ಪಾಂಡವಪುರ: ಹಾಲು ಉತ್ಪನ್ನ ಆಮದು ನೀತಿ ಖಂಡಿಸಿ ರಸ್ತೆತಡೆ

Update: 2019-10-17 14:16 GMT

ಪಾಂಡವಪುರ, ಅ.17: ಕೇಂದ್ರ ಸರಕಾರ ಜಾರಿಗೆ ತರಲು ಮುಂದಾಗಿರುವ ಹಾಲು ಉತ್ಪನ್ನಗಳ ಆಮದು ನೀತಿಯನ್ನು ವಿರೋಧಿಸಿ ತಾಲೂಕಿನ ಹಾಲು ಉತ್ಪಾದಕರು ಗುರುವಾರ ಶ್ರೀರಂಗಪಟ್ಟಣ-ಜೇವರ್ಗಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ಪಟ್ಟಣದ ಮುನ್‍ಮುಲ್ ಉಪ ಕಚೇರಿಯಿಂದ ಮೆರವಣಿಗೆ ಮೂಲಕ ಡಾ.ರಾಜ್‍ಕುಮಾರ್ ವೃತ್ತಕ್ಕೆ ತೆರಳಿದ ಪ್ರತಿಭಟನಾಕಾರರು, ಮಾನವ ಸರಪಳಿ ರಚಿಸಿ ಹೆದ್ದಾರಿ ತಡೆದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆಗಳನ್ನು ಕೂಗಿ  ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಪಟ್ಟಣದ ಮಿನಿ ವಿಧಾನಸೌಧಕ್ಕೆ ಮೆರವಣಿಗೆಯಲ್ಲಿ ತೆರಳಿದ ಪ್ರತಿಭಟನಾಕಾರರು, ಅಲ್ಲಿಯೂ ಕೆಲಕಾಲ ಧರಣಿ ನಡೆಸಿ ಗ್ರೇಡ್ 2 ತಹಸೀಲ್ದಾರ್ ಸುಧಾಕರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಕೇಂದ್ರ ಸರಕಾರದ ಹಾಲು ಉತ್ಪನ್ನಗಳ ಆಮದು ನೀತಿ ರೈತರಿಗೆ ಮರಣ ಶಾಸನವಾಗಿ ಪರಿಣಮಿಸಲಿದೆ. ಜತೆಗೆ ಹೈನೋದ್ಯಮಕ್ಕೂ ಭಾರಿ ಪೆಟ್ಟು ಬೀಳಲಿದೆ. ಹೀಗಾಗಿ ಕೇಂದ್ರ ಸರಕಾರ ಈ ಆಮದು ನೀತಿಯನ್ನು ರದ್ದುಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ನಮ್ಮ ದೇಶದಲ್ಲೇ ಯಥೇಚ್ಛವಾಗಿ ಹಾಲು ಶೇಖರಣೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಹೊರ ದೇಶಗಳಿಂದ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ತೆರಿಗೆ ರಹಿತವಾಗಿ ಆಮದು ಮಾಡಿಕೊಂಡು ನಮ್ಮ ದೇಶದಲ್ಲಿ ಮಾರಾಟ ಮಾಡಲು ಒಪ್ಪಂದಕ್ಕೆ ಸಹಿ ಮಾಡುವ ಹಂತದಲ್ಲಿರುವುದು ಸರಿಯಾದ ಕ್ರಮವಲ್ಲ ಎಂದು ಕಿಡಿಕಾರಿದರು.

ಕೇಂದ್ರ ಸರಕಾರ ಹಾಲಿನ ಉತ್ಪನ್ನಗಳ ತೆರಿಗೆ ರಹಿತ ಆಮದು ನೀತಿ ಜಾರಿಗೊಳಿಸಿದರೆ ತಾಲೂಕಿನ ಲಕ್ಷಾಂತರ ರೈತರು ಬೀದಿ ಪಾಲಾಗಿ ಬಹಳ ತೊಂದರೆಯಾಗಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಮನ್‍ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು, ಜೆಡಿಎಸ್ ಮುಖಂಡರಾದ ರಾಮಕೃಷ್ಣೇಗೌಡ, ಬೆಳ್ಳಾಳೆ ಯೋಗಣ್ಣ, ಚಿಕ್ಕಾಡೆ ಗಿರಿಗೌಡ, ಹೊಸಕೋಟೆ ಪುಟ್ಟಣ್ಣ, ಬೆಟ್ಟಸ್ವಾಮಿಗೌಡ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News