ಚಿಕ್ಕಮಗಳೂರು: ವಿದ್ಯುತ್ ತಂತಿ ತುಳಿದು ಕಾರ್ಮಿಕ ಮೃತ್ಯು

Update: 2019-10-17 14:22 GMT

ಚಿಕ್ಕಮಗಳೂರು, ಅ.17: ಮಳೆ ಗಾಳಿಗೆ ತುಂಡಾಗಿ ಬಿದ್ದ ವಿದ್ಯುತ್ ತಂತಿ ತುಳಿದು ಕಾರ್ಮಿಕನೊಬ್ಬ ಮೃತಪಟ್ಟಿದ್ದು, ಮೃತನ ಕುಟುಂಬಕ್ಕೆ ಮೆಸ್ಕಾಂ ಅಧಿಕಾರಿಗಳು ಸೂಕ್ತ ಪರಿಹಾರ ನೀಡದೇ ಮೃತದೇಹದ ಶವಪರೀಕ್ಷೆ ಮಾಡಲು ಬಿಡುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದು ಆಕ್ರೋಶ ವ್ಯಕ್ತಪಡಿಸಿದ ಘಟನೆ ಮೂಡಿಗೆರೆ ತಾಲೂಕಿನ ಚಕ್ಕಮಕ್ಕಿ ಗ್ರಾಮದಲ್ಲಿ ಗುರುವಾರ ಸಂಜೆ ವೇಳೆ ವರದಿಯಾಗಿದೆ.

ಮೃತ ವ್ಯಕ್ತಿಯನ್ನು ಬಣಕಲ್ ಪಟ್ಟಣದ ಇಂದಿರಾನಗರದ ನಿವಾಸಿ ಮಂಜ(27) ಎಂದು ಗುರತಿಸಲಾಗಿದೆ. ಈತ ಕೂಡಳ್ಳಿ ಮಂಜುನಾಥ್ ಎಂಬವರ ಮನೆಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದು, ಗುರುವಾರ ಸಂಜೆ ವೇಳೆ ಕೂಡಳ್ಳಿ ಮಂಜುನಾಥ್ ಅವರ ಮನೆಯ ದನಗಳನ್ನು ಹೊಡೆದುಕೊಂಡು ಬರಲು ಚಕ್ಕಮಕ್ಕಿ ಗ್ರಾಮದ ಕೆರಯತ್ತ ಮಂಜ ತೆರಳಿದಾಗ ಭಾರೀ ಮಳೆ ಗಾಳಿಯಿಂದಾಗಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ತುಳಿದು ಸ್ಥಳದಲ್ಲೇ ಮೃತಪಟ್ಟಿದ್ದಾನೆಂದು ತಿಳಿದು ಬಂದಿದೆ.

ವಿಷಯ ತಿಳಿದ ಗ್ರಾಮಸ್ಥರು ಮೆಸ್ಕಾಂ, ಪೊಲೀಸ್ ಅಧಿಕಾರಿಗಳಿಗೆ ಸುದ್ದಿಮುಟ್ಟಿಸಿದ್ದು, ಅಧಿಕಾರಿಗಳು ಸ್ಥಳಕ್ಕೆ ಬಂದು ಶವವನ್ನು ಮರಣೋತ್ತರ ಪರೀಕ್ಷೆಗೆಂದು ಕೊಂಡೊಯ್ಯಲು ಮುಂದಾದಾಗ ಅಡ್ಡಿ ಪಡಿಸಿದ ಗ್ರಾಮಸ್ಥರು, ಮೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಅಮಾಯಕ ಬಡ ಕಾರ್ಮಿಕ ಪ್ರಾಣಕಳೆದುಕೊಂಡಿದ್ದಾನೆ. ಆತನ ಕುಟುಂಬದ ಜೀವನಕ್ಕಾಗಿ ಮೆಸ್ಕಾಂ ಅಧಿಕಾರಿಗಳು ಸ್ಥಳದಲ್ಲೇ 5 ಲಕ್ಷ ರೂ. ಪರಿಹಾರ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆಂದು ತಿಳಿದು ಬಂದಿದೆ.

ಈ ವೇಳೆ ಮೆಸ್ಕಾಂ ಅಧಿಕಾರಿಗಳು ನಾಳೆಯೇ ಪರಿಹಾರ ನೀಡಲು ಕ್ರಮಕೈಗೊಳ್ಳುವ ಭರವಸೆ ನೀಡಿದ್ದರಿಂದ ಗ್ರಾಮಸ್ಥರು ಪಟ್ಟು ಸಡಿಲಿಸಿದ್ದಾರೆಂದು ತಿಳಿದು ಬಂದಿದೆ. ಘಟನೆ ಸಂಬಂಧ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಶವವನ್ನು ಕುಟುಂಬಸ್ಥರಿಗೆ ಒಪ್ಪಿಸಲಾಗಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News