ನೀತಿ ಸಂಹಿತೆ-ನಿಗಮ ಮಂಡಳಿ ನೇಮಕ ಪ್ರಶ್ನಿಸಿ ರಿಟ್ ಮಾಹಿತಿ ನೀಡಲು ಕೇಂದ್ರ ಚುನಾವಣಾ ಆಯೋಗಕ್ಕೆ ಹೈಕೋರ್ಟ್ ಆದೇಶ

Update: 2019-10-17 15:04 GMT

ಬೆಂಗಳೂರು, ಅ.17: ವಿಧಾನಸಭಾ ಕ್ಷೇತ್ರಗಳಲ್ಲಿ ಜಾರಿಗೊಳಿಸಲಾಗಿರುವ ಚುನಾವಣಾ ನೀತಿ ಸಂಹಿತೆ ಹಾಗೂ ಈ ಕ್ಷೇತ್ರಗಳಲ್ಲಿನ 8 ಮಂದಿ ಬಿಜೆಪಿ ಮುಖಂಡರನ್ನು ವಿವಿಧ ನಿಗಮ ಮಂಡಳಿಗೆ ನೇಮಕ ಮಾಡಿರುವ ರಾಜ್ಯ ಸರಕಾರದ ನಡೆಯನ್ನು ಪ್ರಶ್ನಿಸಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಲ್ಲಿಸಿದ್ದ ಅರ್ಜಿ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಕೇಂದ್ರ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಲು ಆದೇಶಿಸಿದೆ.

ಗುಂಡೂರಾವ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ಏಕದಸ್ಯ ನ್ಯಾಯಪೀಠದಲ್ಲಿ ನಡೆಯಿತು.

ಅರ್ಜಿದಾರರ ಪರ ವಾದಿಸಿದ ವಕೀಲರು, ಚುನಾವಣಾ ದಿನಾಂಕ ಘೋಷಣೆ ಆದಾಗಿನಿಂದಲೂ ನೀತಿ ಸಂಹಿತೆ ಜಾರಿಯಲ್ಲಿರಬೇಕು. ಆದರೆ, ನೀತಿ ಸಂಹಿತೆಯನ್ನು ಮುಂದೂಡಿಕೆ ಮಾಡಲಾಗಿದೆ. ಅಲ್ಲದೆ, ನೀತಿ ಸಂಹಿತೆ ಜಾರಿಯಲ್ಲಿರುವಾಗಲೇ ರಾಜ್ಯ ಸರಕಾರ ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಿದೆ ಎಂದು ಪೀಠಕ್ಕೆ ತಿಳಿಸಿದರು. ವಕೀರಲ ವಾದ ಆಲಿಸಿದ ನ್ಯಾಯಪೀಠವು ನೀತಿ ಸಂಹಿತೆ ಮುಂದೂಡಿಕೆ ಹಾಗೂ ವಿವಿಧ ನಿಗಮ ಮಂಡಳಿಗೆ ನೇಮಕ ಮಾಡಿರುವ ಬಗ್ಗೆ ಕೇಂದ್ರ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಲು ಆದೇಶಿಸಿ, ವಿಚಾರಣೆಯನ್ನು ಮುಂದೂಡಿತು.

ಮನವಿ ಏನು: ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ 2019ರ ಸೆ.27ರಂದು ಪ್ರಕಟಿಸಿರುವ ಪರಿಷ್ಕೃತ ವೇಳಾಪಟ್ಟಿ ಮತ್ತು ನೀತಿ ಸಂಹಿತೆ ನವೆಂಬರ್ 11ರಿಂದ ಜಾರಿಗೆ ಬರುವಂತೆ ಚುನಾವಣಾ ಆಯೋಗ ಹೊರಡಿಸಿರುವ ಅಧಿಸೂಚನೆ ರದ್ದುಗೊಳಿಸಬೇಕು. ಈ 15 ಕ್ಷೇತ್ರಗಳಲ್ಲಿನ 8 ಮಂದಿ ಬಿಜೆಪಿ ಮುಖಂಡರನ್ನು ವಿವಿಧ ನಿಗಮ-ಮಂಡಳಿಗಳಿಗೆ ನೇಮಕ ಮಾಡಿ ಅ.9ರಂದು ರಾಜ್ಯ ಸರಕಾರ ಹೊರಡಿಸಿರುವ ಆದೇಶ ರದ್ದುಗೊಳಿಸಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News