ಚಾಮುಂಡಿ ಬೆಟ್ಟಕ್ಕೆ ಆಣೆ ಪ್ರಮಾಣ ಮಾಡಲು ಬಂದ ಅನರ್ಹ ಶಾಸಕ ಎಚ್.ವಿಶ್ವನಾಥ್, ಶಾಸಕ ಸಾ.ರಾ.ಮಹೇಶ್

Update: 2019-10-18 12:59 GMT

ಮೈಸೂರು,ಅ.17: ಚಾಮುಂಡಿ ಬೆಟ್ಟಕ್ಕೆ ಆಣೆ ಪ್ರಮಾಣ ಮಾಡಲು ಬಂದ ಅನರ್ಹ ಶಾಸಕ ಎಚ್.ವಿಶ್ವನಾಥ್ ಹಾಗೂ ಶಾಸಕ ಸಾ.ರಾ.ಮಹೇಶ್ ಹೈಡ್ರಾಮ ನಡೆಸಿದರು.

ಅನರ್ಹ ಶಾಸಕ ಎಚ್.ವಿಶ್ವನಾಥ್ ಗುರುವಾರ ಬೆಳಿಗ್ಗೆ ಚಾಮುಂಡಿ ಬೆಟ್ಟಕ್ಕೆ ಆಗಮಿಸಿ ಶ್ರೀಚಾಮುಂಡೇಶ್ವರಿ ದರ್ಶನ ಪಡೆದು ಹೊರ ಬಂದು ನಿಂತರು. ನಂತರ ಆಗಮಿಸಿದ ಶಾಸಕ ಸಾ.ರಾ.ಮಹೇಶ್, ದೇವಸ್ಥಾನದ ಒಳಹೋಗಿ ದೇವಿ ದರ್ಶನ ಪಡೆದು ಒಳಗಡೆಯೇ ಕುಳಿತು ಬಿಟ್ಟರು.

ಸುಮಾರು ಸಮಯ ಕಾದ ವಿಶ್ವನಾಥ್, ಏಯ್ ಸಾ.ರಾ.ಮಹೇಶ ನಾನು ಮಾರಿಕೊಂಡವನಾದರೆ ನನ್ನನ್ನು ಕೊಂಡುಕೊಂಡವನು ಎಲ್ಲಿ? ಕರೆದುಕೊಂಡು ಬಾ. ದೇವಸ್ಥಾನಕ್ಕೆ ಬಂದು ಹೇಡಿಯಂಗೆ ಹೋಗಿ ಒಳಕೂರುವುದಲ್ಲ. ಮಕ್ಕಳ ಮೇಲೆಲ್ಲಾ ಆಣೆ ಪ್ರಮಾಣ ಮಾಡುತ್ತೀಯಲ್ಲ, ನಾನೆ ಬಂದಿದ್ದೇನೆ ನನ್ನ ಮುಂದೆ ಬಾ ಎಂದು ಹೇಳಿದರು.

ಒಳಗಡೆಯೇ ಕುಳಿತ ಸಾ.ರಾ.ಮಹೇಶ್ ಇಲ್ಲಿಗೆ ಬರಲಿ ನಾನು ಹೊರಹೋಗುವುದಿಲ್ಲ ಎಂದು ಹಠ ಇಡಿದರು. ಇದರಿಂದ ರೊಚ್ಚಿಗೆದ್ದ ವಿಶ್ವನಾಥ್ ಬೆಂಬಲಿಗರು ಧಿಕ್ಕಾರ ಕೂಗಿದರು. ಒಳಗಿದ್ದ ಸಾ.ರಾ. ಬೆಂಬಲಿಗರು ವಿಶ್ವನಾಥ್ ವಿರುದ್ಧ ಪ್ರತಿ ಧಿಕ್ಕಾರ ಕೂಗಿದರು.

ನಂತರ ಪೊಲೀಸರು ವಿಶ್ವನಾಥ್ ಅವರನ್ನು ಇಲ್ಲಿಂದ ತೆರಳುವಂತೆ ಮನವಿ ಮಾಡಿದರು ಅವರು ಜಗ್ಗಲಿಲ್ಲ. ನಂತರ ಅವರೆ ಅಲ್ಲಿಂದ ಹೊರಟುಹೋದರು. ಇದಾದ ನಂತರ ಸಾ.ರಾ.ಮಹೇಶ್ ದೇವಸ್ಥಾನದಿಂದ ಹೊರಗೆ ಬಂದು ಹೊರಟು ಹೋದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಡಿಸಿಪಿ ಮುತ್ತುರಾಜ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಶಾಸಕ ಸಾ.ರಾ.ಮಹೇಶ್ ಒಬ್ಬ ಹೇಡಿ, ಪಲಾಯನವಾದಿ: ಎಚ್.ವಿಶ್ವನಾಥ್

ಶಾಸಕ ಸಾ.ರಾ.ಮಹೇಶ್ ಒಬ್ಬ ಹೇಡಿ, ಪಲಾಯನವಾದಿ ಎಂದು ಅನರ್ಹ ಶಾಸಕ ಎಚ್.ವಿಶ್ವನಾಥ್ ವಾಗ್ದಾಳಿ ನಡೆಸಿದರು.

ಚಾಮುಂಡಿ ಬೆಟ್ಟದಲ್ಲಿ ಶಾಸಕ ಸಾ.ರಾ.ಮಹೇಶ್ ಗಾಗಿ ಸುಮಾರು ಅರ್ಧಗಂಟೆಗೂ ಹೆಚ್ಚು ಸಮಯ ಕಾದ ನಂತರ ಸಾ.ರಾ.ಮಹೇಶ್ ಬರದಿದ್ದಾಗ ಆಕ್ರೋಶ ವ್ಯಕ್ತಪಡಿಸಿದರು. ನನ್ನ ವಿರುದ್ಧ ಸದನದಲ್ಲಿ 25 ಕೋಟಿ ರೂ ಪಡೆದಿದ್ದಾರೆ ಎಂದು ಆರೋಪ ಮಾಡಿದ ಮೇಲೆ ನನ್ನನ್ನು ಕೊಂಡುಕೊಂಡವನನ್ನು ಕರೆದುಕೊಂಡು ಬರಬೇಕು ತಾನೆ. ಆದರೆ ಈತ ಒಬ್ಬನೇ ಬಂದು ಹೇಡಿಯಂಗೆ ದೇವಸ್ಥಾನದಲ್ಲಿ ಕುಳಿತಿದ್ದಾನೆ ಎಂದು ಏಕವಚನದಲ್ಲೇ ಹರಿಹಾಯ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News