ಆರ್ಥಿಕ ಹಿಂಜರಿತ: ನೌಕರರನ್ನು ಕೆಲಸದಿಂದ ತೆಗೆದುಹಾಕುತ್ತಿರುವ ಬೆಂಗಳೂರಿನ ಉದ್ದಿಮೆಗಳು

Update: 2019-10-17 16:25 GMT

ಬೆಂಗಳೂರು, ಆ.17: ಆರ್ಥಿಕ ಕುಸಿತದ ಬಿಸಿ ಕೇವಲ ಬೃಹತ್ ಉದ್ಯಮಗಳಿಗೆ ಮಾತ್ರವಲ್ಲ, ಹಲವು ಮಧ್ಯಮ ಮತ್ತು ಸಣ್ಣ ಉದ್ಯಮಗಳಿಗೂ ತಟ್ಟಿದೆ. ಬೆಂಗಳೂರಿನ ಹಲವು ಉದ್ದಿಮೆಗಳು ಆರ್ಥಿಕ ಕುಸಿತದ ಸಮಸ್ಯೆಗೆ ಸಿಲುಕಿ ನೌಕರರನ್ನು ಕೆಲಸದಿಂದ ತೆಗೆದು ಹಾಕುತ್ತಿವೆ ಅಥವಾ ಅವರ ವೇತನದಲ್ಲಿ ಶೇ.30ರಷ್ಟು ಕಡಿತ ಮಾಡುತ್ತಿವೆ ಎಂದು newindianexpress ವರದಿ ತಿಳಿಸಿದೆ.

ತಮ್ಮ ಉದ್ಯೋಗ ಉಳಿಸಿಕೊಳ್ಳಲು ಹಾಗೂ ವೇತನದಲ್ಲಿ ಆಗುತ್ತಿರುವ ಕಡಿತವನ್ನು ಸರಿಪಡಿಸುವಂತೆ ಕೋರಿ ಹಲವು ನೌಕರರು ರಾಜ್ಯ ಕಾರ್ಮಿಕ ಇಲಾಖೆಯ ಮೊರೆಹೊಕ್ಕಿದ್ದಾರೆ.

ವಾಹನ ಉದ್ಯಮ, ಜವಳಿ ಮತ್ತು ಉತ್ಪಾದನಾ ವಲಯಗಳು ಆರ್ಥಿಕ ಕುಸಿತದ ತೀವ್ರ ಪರಿಣಾಮಕ್ಕೆ ಒಳಗಾಗಿವೆ. ಬೆಂಗಳೂರಿನ ಪ್ರಮುಖ ಕೈಗಾರಿಕಾ ವಲಯವಾಗಿರುವ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಕೆಲವು ಕೈಗಾರಿಕೆಗಳಿಗೆ ಒಂದು ಶಿಫ್ಟ್‌ಗೆ ಸಾಲುವಷ್ಟೂ ಕೆಲಸ ದೊರಕುತ್ತಿಲ್ಲ. ನೌಕರರಿಗೆ ಕೆಲಸವಿಲ್ಲದಿದ್ದರೂ ಸಂಬಳ ಪಾವತಿಸಬೇಕಾದ ಸ್ಥಿತಿಯಿದೆ. ಒಂದು ವಾಹನ ಉದ್ಯಮದಲ್ಲಿ 1000ಕ್ಕೂ ಅಧಿಕ ನೌಕರರನ್ನು ಕೆಲಸ ಬಿಟ್ಟುಹೋಗುವಂತೆ ಸೂಚಿಸಲಾಗಿದೆ. ಹಲವೆಡೆ ಇದೇ ರೀತಿಯ ಪರಿಸ್ಥಿತಿಯಿದೆ. ಕೈಗಾರಿಕೆಗಳು ತಮಗೆ ಮಾಹಿತಿ ನೀಡುವುದಿಲ್ಲ. ಕೇವಲ ನೌಕರರಿಂದ ಮಾತ್ರ ಮಾಹಿತಿ ದೊರಕುತ್ತಿದೆ ಎಂದು ಕಾರ್ಮಿಕ ಇಲಾಖೆಯ ಮೂಲಗಳು ತಿಳಿಸಿವೆ.

 ಪೀಣ್ಯದಲ್ಲಿ ಸುಮಾರು 10,000ಕ್ಕೂ ಹೆಚ್ಚು ಮಧ್ಯಮ ಮತ್ತು ಸಣ್ಣ ಕೈಗಾರಿಕೆಗಳಿವೆ. ಈಗ ಇದರಲ್ಲಿ ಶೇ.50ರಷ್ಟು ಕೈಗಾರಿಕೆಗಳ ಮೇಲೆ ಪರಿಣಾಮ ಉಂಟಾಗಿದೆ. ಈ ಕೈಗಾರಿಕೆಗಳಿಗೆ ಸರಕು ಪೂರೈಕೆಗೆ ಯಾವುದೇ ಕೋರಿಕೆ(ಆದೇಶ) ದೊರಕದ ಕಾರಣ ಕೆಲಸ ಬಹುತೇಕ ಸ್ಥಗಿತವಾಗಿದೆ. ಈ ಕೈಗಾರಿಕೆಗಳಲ್ಲಿ ಹಿಂದೆ 8 ಗಂಟೆಗಳ ಅವಧಿಯ ಮೂರು ಶಿಫ್ಟ್‌ಗಳಲ್ಲಿ ಕೆಲಸ ಸಾಗುತ್ತಿತ್ತು ಎಂದು ಪೀಣ್ಯ ಕೈಗಾರಿಕಾ ಸಂಸ್ಥೆಯ ಮಾಜಿ ಅಧ್ಯಕ್ಷ ಮೈಲಾದ್ರಿ ರೆಡ್ಡಿ ಹೇಳಿದ್ದಾರೆ. ಈಗ ಒಂದು ಶಿಫ್ಟ್‌ನಲ್ಲಿ ಕೂಡಾ ಕೆಲಸ ಸಾಗದಂತಹ ಪರಿಸ್ಥಿತಿ ಎದುರಾಗಿದೆ.ಹಲವಾರು ಮಂದಿ ಈ ಕೈಗಾರಿಕೆಗಳನ್ನು ಅವಲಂಬಿಸಿದ್ದಾರೆ. ಇದುವರೆಗೆ ಯಾರನ್ನೂ ಕೆಲಸದಿಂದ ತೆಗೆದಿಲ್ಲ. ಆದರೆ ವೇತನ ಪಾವತಿಸಲು ಕಷ್ಟವಾಗುತ್ತಿದೆ ಎಂದವರು ಹೇಳಿದ್ದಾರೆ.

ಆದರೆ ಈಗಾಗಲೇ ಹಲವರನ್ನು ಕೆಲಸದಿಂದ ತೆಗೆದಿರುವುದಾಗಿ ಪೀಣ್ಯ ಕೈಗಾರಿಕಾ ಸಂಸ್ಥೆಯ ಇತರ ಮೂಲಗಳು ತಿಳಿಸಿವೆ. ಕೈಗಾರಿಕೆಗಳು ಇದನ್ನು ಕೆಲಸದಿಂದ ತೆಗೆಯುವುದು ಎಂದು ನೇರವಾಗಿ ಹೇಳುತ್ತಿಲ್ಲ. ಪ್ರತೀ ವರ್ಷ ಆಯುಧ ಪೂಜೆ ಅಥವಾ ದೀಪಾವಳಿಗೆ ಸಾಮಾನ್ಯವಾಗಿ ನೌಕರರಿಗೆ ಬೋನಸ್ ಅಥವಾ ಏನಾದರೊಂದು ಕೊಡುಗೆ ನೀಡಲಾಗುತ್ತದೆ. ಅಲ್ಲದೆ ಈ ಸಂದರ್ಭ ಕೆಲಸ ಜಾಸ್ತಿಯಿರುವುದರಿಂದ ನೌಕರರಿಗೆ ರಜೆ ಯನ್ನೂ ನೀಡುವುದಿಲ್ಲ. ಆದರೆ ಈ ಬಾರಿ ಹಲವರು ಬೋನಸ್ ಕೂಡಾ ನೀಡಿಲ್ಲ. ಒಂದೆರಡು ತಿಂಗಳು ಬಿಟ್ಟು ಕೆಲಸಕ್ಕೆ ಬರುವಂತೆ ಕೆಲವು ಸಂಸ್ಥೆಯವರು ನೌಕರರಿಗೆ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆರ್ಥಿಕ ಹಿಂಜರಿತ ವಾಹನ ಉತ್ಪಾದನಾ ಕ್ಷೇತ್ರ ಹಾಗೂ ಇದನ್ನು ಅವಲಂಬಿಸಿರುವ ಇತರ ಉದ್ಯಮಗಳ ಮೇಲೆ ವ್ಯಾಪಕ ಪರಿಣಾಮ ಬೀರಿದೆ. ಈ ಉದ್ಯಮಗಳು ಉತ್ಪಾದಿಸುವ ಸರಕುಗಳನ್ನು ಖರೀದಿಸುವವರೇ ಇಲ್ಲ ಎಂಬಂತಾಗಿದೆ.

ಸರಕು ಪೂರೈಸಲು ಕೋರಿಕೆ ಬರುತ್ತಿಲ್ಲ, ಆದ್ದರಿಂದ ಆದಾಯವೂ ಇಲ್ಲ. ಆದಾಯ ಇಲ್ಲದಾಗ ನೌಕರರ ವೇತನ ಪಾವತಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ನೌಕರರನ್ನು ರಜೆಯ ಮೇಲೆ ಕಳಿಸುವುದು ಅಥವಾ ವೇತನ ಕಡಿತ ಸಹಜವಾಗಿದೆ ಎಂದು ಕರ್ನಾಟಕ ಕೈಗಾರಿಕೆ ಮತ್ತು ವಾಣಿಜ್ಯ ಒಕ್ಕೂಟದ ಅಧ್ಯಕ್ಷ ಸಿಆರ್ ಜನಾರ್ದನ್ ಹೇಳಿದ್ದಾರೆ.

ತನಿಖೆಗೆ ಆದೇಶ:

ಕೆಲವು ಸಂಸ್ಥೆಗಳು ನೌಕರರ ವೇತನ ಕಡಿತದಂತಹ ಅನ್ಯಾಯದ ಕ್ರಮ ಅನುಸರಿಸುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದ್ದು ಈ ಬಗ್ಗೆ ತನಿಖೆಗೆ ಆದೇಶಿಸಿರುವುದಾಗಿ ರಾಜ್ಯದ ಕಾರ್ಮಿಕ ಸಚಿವ ಎಸ್ ಸುರೇಶ್ ಕುಮಾರ್ ಹೇಳಿದ್ದಾರೆ. ವಾಸ್ತವ ಪರಿಸ್ಥಿತಿ ಅರಿತುಕೊಳ್ಳಲು ಸಂಸ್ಥೆಯ ಮಾಲಕರು ಹಾಗೂ ಉದ್ಯೋಗಿಗಳನ್ನು ಭೇಟಿಯಾಗಿ ಚರ್ಚಿಸುವುದಾಗಿ ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News