ಅಯೋಧ್ಯೆ ಪ್ರಕರಣ: ನ್ಯಾಯವಾದಿ ಧವನ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬಿಸಿಐಗೆ ಪತ್ರ

Update: 2019-10-17 17:41 GMT

ಹೊಸದಿಲ್ಲಿ, ಅ.17: ಅಯೋಧ್ಯೆ ಪ್ರಕರಣದ ವಿಚಾರಣೆ ಸಂದರ್ಭ ಬುಧವಾರ ಮುಸ್ಲಿಂ ಕಕ್ಷಿಗಾರರನ್ನು ಪ್ರತಿನಿಧಿಸುತ್ತಿರುವ ನ್ಯಾಯವಾದಿ ರಾಜೀವ್ ಧವನ್ ರಾಮಜನ್ಮ ಭೂಮಿ ಪ್ರದೇಶ ಎನ್ನಲಾಗಿರುವ ಭೂಪ್ರದೇಶದ ನಕ್ಷೆಯನ್ನು ಹರಿದು ಹಾಕಿರುವುದು ನೀತಿಗೆಟ್ಟ ವರ್ತನೆ ಎಂದು ಖಂಡಿಸಿ ಎಐಎಚ್‌ಎಂ ಬಾರ್ ಕೌನ್ಸಿಲ್‌ಗೆ ಪತ್ರ ಬರೆದಿದೆ.

ಈ ಪ್ರಕರಣದಲ್ಲಿ ಹಿಂದು ಕಕ್ಷಿದಾರರಲ್ಲಿ ಒಬ್ಬರಾಗಿರುವ ಆಲ್ ಇಂಡಿಯಾ ಹಿಂದು ಮಹಾಸಭಾ (ಎಐಎಚ್‌ಎಂ)ದ ರಾಷ್ಟ್ರೀಯ ವಕ್ತಾರ ಪ್ರಮೋದ್ ಜೋಷಿ ಬಾರ್ ಕೌನ್ಸಿಲ್‌ಗೆ ಬರೆದಿರುವ ಪತ್ರದಲ್ಲಿ ಧವನ್ ವರ್ತನೆಯನ್ನು ಖಂಡಿಸಿದೆ. ಸುಪ್ರೀಂಕೋರ್ಟ್‌ಗೆ ಸಲ್ಲಿಸಲಾಗಿದ್ದ ನಕ್ಷೆಯನ್ನು ಹರಿದು ಹಾಕುವ ಮೂಲಕ ಹಿರಿಯ ನ್ಯಾಯವಾದಿ ಧವನ್ ಅನೈತಿಕ ವರ್ತನೆ ತೋರಿದ್ದಾರೆ. ಧವನ್ ಅವರ ಈ ಕೃತ್ಯ ಸುಪ್ರೀಂಕೋರ್ಟ್‌ಗೆ ಅಗೌರವ ತರುತ್ತದೆ. ಆದ್ದರಿಂದ ಈ ಘಟನೆಯನ್ನು ಗಮನಕ್ಕೆ ತೆಗೆದುಕೊಂಡು, ಕಾನೂನಿನ ಪ್ರಕಾರ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ಮನವಿ ಮಾಡಿಕೊಳ್ಳಲಾಗಿದೆ.

ಅಯೋಧ್ಯೆ ಪ್ರಕರಣದಲ್ಲಿ ಸುನ್ನಿ ವಕ್ಫ್ ಬೋರ್ಡ್ ಹಾಗೂ ಇತರ ಮುಸ್ಲಿಂ ಕಕ್ಷಿಗಾರರನ್ನು ಪ್ರತಿನಿಧಿಸುತ್ತಿರುವ ಧವನ್, ಬುಧವಾರ ಸುಪ್ರೀಂಕೋರ್ಟ್ ನಲ್ಲಿ ಕಲಾಪ ನಡೆಯುತ್ತಿರುವಾಗ ಅಯೋಧ್ಯೆಯಲ್ಲಿ ರಾಮಜನ್ಮಭೂಮಿ ಸ್ಥಳಕ್ಕೆ ಸಂಬಂಧಿಸಿದ್ದು ಎನ್ನಲಾದ ನಕ್ಷೆಯನ್ನು ಹರಿದು ಹಾಕಿದ್ದರು. ನಕ್ಷೆಯ ಬಗ್ಗೆ ಆಕ್ಷೇಪ ಸೂಚಿಸಿದ್ದ ಧವನ್, ಈ ನಕ್ಷೆಯನ್ನು ತಾನು ಏನು ಮಾಡಲಿ ಎಂದು ಸಾಂವಿಧಾನಿಕ ಪೀಠವನ್ನು ಪ್ರಶ್ನಿಸಿದ್ದರು. ಅದನ್ನು ಚೂರು ಚೂರಾಗಿ ಹರಿದು ಬಿಡಿ ಎಂದು ನ್ಯಾಯಪೀಠ ಉತ್ತರಿಸಿತ್ತು.

ಬಳಿಕ ನಕ್ಷೆಯನ್ನು ಹರಿದು ಹಾಕಿದ್ದ ಧವನ್, ನ್ಯಾಯಪೀಠ ತಿಳಿಸಿದ ಹಾಗೆ ತಾನು ಮಾಡಿದ್ದೇನೆ ಎಂದು ಪ್ರತಿಕ್ರಿಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News