ಪಿಎಂಸಿ ಬ್ಯಾಂಕ್ ಹಗರಣಕ್ಕೆ ಹೊಸ ಟ್ವಿಸ್ಟ್

Update: 2019-10-18 04:00 GMT

ಮುಂಬೈ: ಪಿಎಂಸಿ ಬ್ಯಾಂಕ್ ದಾಖಲೆಗಳಿಂದ 10.5 ಕೋಟಿ ರೂ. ನಾಪತ್ತೆಯಾಗಿದೆ ಎಂದು ಬ್ಯಾಂಕಿನ ಆಂತರಿಕ ತನಿಖಾ ತಂಡ ಬಹಿರಂಗಪಡಿಸುವುದರೊಂದಿಗೆ ಬಹುಕೋಟಿ ಬ್ಯಾಂಕ್ ಹಗರಣ ಮಹತ್ವದ ತಿರುವು ಪಡೆದುಕೊಂಡಿದೆ.

ಎಚ್‌ಡಿಐಎಲ್ ನೀಡಿದ ಹಲವು ಚೆಕ್ಕುಗಳು ಮತ್ತು ಅವುಗಳಿಗೆ ಸಂಬಂಧಿಸಿದ ದಾಖಲಾತಿಗಳನ್ನು ಬ್ಯಾಂಕಿಗೆ ಜಮಾ ಮಾಡಿಲ್ಲ. ಇಷ್ಟಾಗಿಯೂ ಅವರಿಗೆ ನಗದು ಹಸ್ತಾಂತರಿಸಲಾಗಿದೆ ಎಂದು ಬಹಿರಂಗಪಡಿಸಿದೆ.

10 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಚೆಕ್ಕುಗಳು ಇಲ್ಲ; ಅಂತೆಯೇ ಸುಮಾರು 50-55 ಲಕ್ಷ ರೂ.ಗಳಿಗೆ ಯಾವುದೇ ಲೆಕ್ಕಪತ್ರಗಳಿಲ್ಲ. ಬ್ಯಾಂಕ್ ಅಧಿಕಾರಿಗಳು ಹೇಳಿದ ಸಾಲ ವಂಚನೆಯ ಮೊತ್ತವಾದ 4,355 ಕೋಟಿ ರೂ. ಇದೀಗ 6500 ಕೋಟಿ ರೂ. ಮೀರಿದೆ ಎಂದು ತನಿಖಾ ವರದಿ ಸ್ಪಷ್ಟಪಡಿಸಿದೆ.

ಆರ್‌ಬಿಐ ನೇಮಕ ಮಾಡಿದ ಆಡಳಿತಾಧಿಕಾರಿಯ ಆದೇಶದ ಅನ್ವಯ ಬ್ಯಾಂಕಿನ ವಹಿವಾಟುಗಳ ಬಗ್ಗೆ ಆಂತರಿಕ ತನಿಖೆ ನಡೆಸಿದಾಗ 10.5 ಕೋಟಿ ರೂ. ನಾಪತ್ತೆಯಾಗಿರುವುದು ಗಮನಕ್ಕೆ ಬಂದಿದೆ. ನಗದು ಪಡೆಯುವ ಸಲುವಾಗಿ ಎಚ್‌ಡಿಐಎಲ್ ಹಾಗೂ ಸಮೂಹ ಕಂಪನಿಗಳು ಎರಡು ವರ್ಷಗಳಿಂದ ಚೆಕ್ಕನ್ನು ಬ್ಯಾಂಕಿನ ಮಾಜಿ ವ್ಯವಸ್ಥಾಪಕ ನಿರ್ದೇಶಕ ಜಾಯ್ ಥಾಮಸ್ ರಿಗೆ ನೀಡುತ್ತಿದ್ದವು. ಥಾಮಸ್ ಅವರಿಗೆ ನಗದು ಹಸ್ತಾಂತರಿಸುತ್ತಿದ್ದರೆ, ಅವರು ಚೆಕ್ಕನ್ನು ಬ್ಯಾಂಕಿಗೆ ಜಮೆ ಮಾಡುತ್ತಿರಲಿಲ್ಲ. ಬ್ಯಾಂಕ್ ದಾಖಲಾತಿಗಳಲ್ಲಿ ಈ ಚೆಕ್ಕುಗಳ ವಿವರ ನಮೂದಾಗಿಲ್ಲ. ಥಾಮಸ್ 50 ರಿಂದ 55 ಲಕ್ಷ ರೂ. ಜೇಬಿಗಿಳಿಸಿಕೊಂಡಿರುವ ಅನುಮಾನ ಇದೆ ಎಂದು ವರದಿ ಹೇಳಿದೆ.

ಸಾಲ ಸಮಿತಿ ಸದಸ್ಯರೊಂದಿಗೆ ಥಾಮಸ್ ಎಚ್‌ಡಿಐಎಲ್ ಮತ್ತು ಅದರ ನಿರ್ದೇಶಕ ರಾಕೇಶ್ ಹಾಗೂ ಸಾರಂಗ್ ವಧಾವಾನ್ ಅವರಿಗೆ ಸಾಲ ಮಂಜೂರು ಮಾಡಿದ್ದರು. ಎಲ್ಲ ಮೂವರನ್ನೂ ಬಂಧಿಸಲಾಗಿದೆ. ಸಾಲ ವಂಚನೆ ಮೊತ್ತ 4,355 ಕೋಟಿಯಿಂದ 6,500 ಕೋಟಿಗೆ ಹೆಚ್ಚಿದೆ ಎಂದು ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News