ಉನ್ನತ ಅಧಿಕಾರಿಗಳ ಕಿರುಕುಳ : ಬಿಎಚ್‌ಇಎಲ್ ಮಹಿಳಾ ಅಧಿಕಾರಿ ಆತ್ಮಹತ್ಯೆ

Update: 2019-10-18 04:56 GMT

ಹೈದರಾಬಾದ್: ಸರ್ಕಾರಿ ಸ್ವಾಮ್ಯದ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (ಬಿಎಚ್‌ಇಎಲ್) ಸಂಸ್ಥೆಯ ಮಹಿಳಾ ಲೆಕ್ಕಾಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂಸ್ಥೆಯ ಉನ್ನತ ಅಧಿಕಾರಿಗಳು ಹಾಗೂ ಆರು ಮಂದಿ ಸಹೋದ್ಯೋಗಿಗಳ ಕಿರುಕುಳ ಇದಕ್ಕೆ ಕಾರಣ ಎಂದು ಆಪಾದಿಸಲಾಗಿದೆ.

ಮೃತ ಮಹಿಳೆಯ ಪತಿ ನೀಡಿದ ದೂರಿನ ಮೇಲೆ ಬಿಎಚ್‌ಇಎಲ್ ಹಣಕಾಸು ವಿಭಾಗದ ಉಪ ಪ್ರಧಾನ ವ್ಯವಸ್ಥಾಪಕ ಮತ್ತು ಆರು ಮಂದಿಯ ವಿರುದ್ಧ ಆತ್ಮಹತ್ಯೆಗೆ ಪ್ರಚೆದನೆ ನೀಡಿದ ಪ್ರಕರಣ ದಾಖಲಾಗಿದೆ.

ಭೋಪಾಲ್ ಮೂಲದ ಮಹಿಳೆ ತಮ್ಮ ಮನೆಯ ಬೆಡ್‌ರೂಂನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪತಿ ಹಾಗೂ ಕುಟುಂಬ ಸದಸ್ಯರು ಬಾಗಿಲು ಮುರಿದು ಒಳಪ್ರವೇಶಿಸಿದಾಗ ಸೀಲಿಂಗ್ ಫ್ಯಾನ್‌ನಲ್ಲಿ ಶವ ನೇತಾಡುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಡಿಜಿಎಂ ಹಾಗೂ ಆರು ಮಂದಿ ಸಹೋದ್ಯೋಗಿಗಳು ನೀಡುತ್ತಿದ್ದ ಮಾನಸಿಕ ಕಿರುಕುಳ ಈ ನಿರ್ಧಾರಕ್ಕೆ ಕಾರಣ ಎಂದು ಆತ್ಮಹತ್ಯೆ ಟಿಪ್ಪಣಿಯಲ್ಲಿ ಮಹಿಳೆ ವಿವರಿಸಿದ್ದಾರೆ.

ಮೊಬೈಲ್ ಫೋನ್ ಹ್ಯಾಕ್ ಮಾಡಿ ಎಲ್ಲ ಕರೆಗಳನ್ನು ಕದ್ದಾಲಿಸಲಾಗುತ್ತಿತ್ತು ಹಾಗೂ ಬೇಹುಗಾರಿಕೆ ಮಾಡಲಾಗುತ್ತಿತ್ತು. ಇಷ್ಟು ಮಾತ್ರವಲ್ಲದೇ ಅಶ್ಲೀಲವಾಗಿ ಮಾತನಾಡಲಾಗುತ್ತಿತ್ತು. ಭೋಪಾಲ್‌ಗೆ ವರ್ಗಾವಣೆಯಾದ ಸಂದರ್ಭ ಕೆಲ ಸಹೋದ್ಯೋಗಿಗಳು ಕಿರುಕುಳ ನೀಡಿದ್ದರು ಎಂದು ಪತ್ರದಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News