ಯೋಧರಿಗೆ 5,000 ಟಿಕೆಟ್‌ಗಳ ಉಚಿತ ವಿತರಣೆ

Update: 2019-10-18 04:46 GMT

ರಾಂಚಿ, ಅ.17: ಭಾರತ ಹಾಗೂ ದಕ್ಷಿಣ ಆಫ್ರಿಕಾದ ನಡುವೆ ಶನಿವಾರ ಆರಂಭವಾಗಲಿರುವ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಸೈನಿಕರು ಸೇರಿದಂತೆ ಸಮವಸ್ತ್ರದಲ್ಲಿರುವ ಪುರುಷರಿಗೆ 5,000 ಟಿಕೆಟ್‌ಗಳನ್ನು ಉಚಿತವಾಗಿ ವಿತರಿಸಲು ಜಾರ್ಖಂಡ್ ರಾಜ್ಯ ಕ್ರಿಕೆಟ್ ಸಂಸ್ಥೆ(ಜೆಎಸ್‌ಸಿಎ)ನಿರ್ಧರಿಸಿದೆ.

‘‘ನಮ್ಮ ಸಿಆರ್‌ಪಿಎಫ್ ಯೋಧರು, ಸೈನಿಕರು ಹಾಗೂ ಎನ್‌ಸಿಸಿ ಕೆಡೆಟ್‌ಗಳಿಗೆ ಐದು ಸಾವಿರ ಟಿಕೆಟ್‌ಗಳನ್ನು ತೆಗೆದಿಡಲು ನಿರ್ಧರಿಸಿದ್ದೇವೆ. ಇದು ಸಮವಸ್ತ್ರದಲ್ಲಿ ಪುರುಷರಿಗೆ ನಾವು ನೀಡುವ ಗೌರವ. ನಾವು ವಿವಿಧ ಜಿಲ್ಲೆಗಳಲ್ಲಿರುವ ಶಾಲಾ ಮಕ್ಕಳಿಗೆ ಟಿಕೆಟ್‌ಗಳನ್ನು ವಿತರಿಸಲಿದ್ದೇ ವೆ’’ ಎಂದು ಜೆಎಸ್‌ಸಿಎ ಕಾರ್ಯದರ್ಶಿ ಸಂಜಯ್ ಸಹಾಯ್ ಪಿಟಿಐಗೆ ತಿಳಿಸಿದ್ದಾರೆ. ಭಾರತ ಪ್ರವಾಸದಲ್ಲಿ ದಕ್ಷಿಣ ಆಫ್ರಿಕಾದ ಆಟಗಾರರಿಗೆ ಎಲ್ಲವೂ ಅಂದುಕೊಂಡಂತೆ ಆಗುತ್ತಿಲ್ಲ. ಮಂಗಳವಾರ ಆಫ್ರಿಕಾ ಕ್ರಿಕೆಟಿಗರು ರಾಂಚಿ ನಗರಕ್ಕೆ ಬಂದಾಗ ಟೀಮ್ ಬಸ್ ಹೊಟೇಲ್ ಗೇಟ್‌ನ ಸಮೀಪ ಕೆಟ್ಟುಹೋಗಿತ್ತು. ಆಗ ಆಟಗಾರರು ನಡೆದುಕೊಂಡೇ ಹೊಟೇಲ್‌ಗೆ ತೆರಳಿದ್ದರು. ದಕ್ಷಿಣ ಆಫ್ರಿಕಾ ಆಟಗಾರರು ಜೆಎಸ್‌ಸಿಎ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಿಂದ ಸುಮಾರು 13 ಕಿ.ಮೀ.ದೂರದಲ್ಲಿರುವ ಹೊಟೇಲ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ವಿರಾಟ್ ಕೊಹ್ಲಿ ಬಳಗ ಸ್ಟೇಡಿಯಂನಿಂದ 9 ಕಿ.ಮೀ.ದೂರದಲ್ಲಿರುವ ಹೊಟೇಲ್‌ನಲ್ಲಿ ಬೀಡುಬಿಟ್ಟಿದೆ.

 ಸಾಮಾನ್ಯವಾಗಿ ಉಭಯ ತಂಡಗಳು ಒಂದೇ ಹೊಟೇಲ್‌ನಲ್ಲಿ ನೆಲೆಸುತ್ತವೆ.ಆದರೆ, ರಾಂಚಿಯಲ್ಲಿ ವೈದ್ಯರ ಸಮ್ಮೇಳನ ನಡೆಯುತ್ತಿರುವ ಹಿನ್ನಲೆಯಲ್ಲಿ ಈ ಬಾರಿ ಇದು ಸಾಧ್ಯವಾಗಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News