ಹರ್ಯಾಣ ಚುನಾವಣೆ: ಸೋನಿಯಾ ಗಾಂಧಿ ಅವರ ರ‍್ಯಾಲಿ ಕೊನೆ ಗಳಿಗೆಯಲ್ಲಿ ರದ್ದು

Update: 2019-10-18 05:25 GMT

ಹೊಸದಿಲ್ಲಿ, ಅ.18: ಸೋಮವಾರ ನಡೆಯಲಿರುವ ಹರ್ಯಾಣ ಅಸೆಂಬ್ಲಿ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಭಾಗವಹಿಸಬೇಕಾಗಿದ್ದ ಏಕೈಕ ರ‍್ಯಾಲಿ ಕೊನೆ ಗಳಿಗೆಯಲ್ಲಿ ರದ್ದಾಗಿದೆ. ಮಹೇಂದ್ರಗಢದಲ್ಲಿ ಸೋನಿಯಾ ಅವರ ರ‍್ಯಾಲಿ ಆರಂಭವಾಗಲು ಕೆಲವೇ ಗಂಟೆಗಳ ಮೊದಲು ಈ ಬೆಳವಣಿಗೆ ನಡೆದಿದ್ದು, ಸೋನಿಯಾ ಅವರ ಬದಲಿಗೆ ರಾಹುಲ್ ಗಾಂಧಿ ರ‍್ಯಾಲಿ ಉದ್ದೇಶಿಸಿ ಮಾತನಾಡಲಿದ್ದಾರೆ.

ಸೋನಿಯಾ ಅವರ ರ‍್ಯಾಲಿ ರದ್ದುಗೊಂಡಿರುವುದಕ್ಕೆ ಕಾರಣ ಏನೆಂದು ಕಾಂಗ್ರೆಸ್ ಪಕ್ಷ ಈ ತನಕ ಸ್ಪಷ್ಟಪಡಿಸಿಲ್ಲ. ಈ ಹಿಂದೆ ಘೋಷಿಸಲ್ಪಟ್ಟಿರುವ ಸೋನಿಯಾ ಅವರ ರ‍್ಯಾಲಿಯ ಕುರಿತ ಟ್ವೀಟನ್ನು ಅಳಿಸಿಹಾಕಲಾಗಿದೆ.

ಆಗಸ್ಟ್‌ನಲ್ಲಿ ಕಾಂಗ್ರೆಸ್ ಅಧ್ಯಕ್ಷೆಯಾಗಿ ಮತ್ತೊಮ್ಮೆ ಅಧಿಕಾರ ಸ್ವೀಕರಿಸಿದ್ದ ಸೋನಿಯಾ ಅವರ ಭಾಗವಹಿಸುವ ಮೊದಲ ಸಾರ್ವಜನಿಕ ರ‍್ಯಾಲಿ ಇದಾಗಿತ್ತು. ಡಿಸೆಂಬರ್‌ನಲ್ಲಿ 73ನೇ ವಯಸ್ಸಿಗೆ ಕಾಲಿಡಲಿರುವ ಸೋನಿಯಾ ಬಿಜೆಪಿ ಸಚಿವ ರಾಮ್ ಬಿಲಾಸ್ ಶರ್ಮಾ ವಿರುದ್ಧ ಸ್ಪರ್ಧಿಸಿರುವ ರಾವ್ ದಾನ್ ಸಿಂಗ್ ಪರ ಚುನಾವಣಾ ಪ್ರಚಾರ ನಡೆಸಬೇಕಾಗಿತ್ತು. ಅ.21ರಂದು ನಡೆಯಲಿರುವ ಮಹಾರಾಷ್ಟ್ರ ಚುನಾವಣೆಯ ಪ್ರಚಾರದಲ್ಲಿ ಸೋನಿಯಾ ಇನ್ನಷ್ಟೇ ಭಾಗವಹಿಸಬೇಕಾಗಿದೆ.

ಸೋನಿಯಾ ಅವರು ಕಳೆದ ಕೆಲವು ವರ್ಷಗಳಿಂದ ಸಾರ್ವಜನಿಕ ಕಾರ್ಯಕ್ರಮದಲ್ಲಿ ವಿರಳವಾಗಿ ಕಾಣಿಸಿಕೊಳುತ್ತಿದ್ದು, ಜೂ.12ರಂದು ರಾಯ್ ಬರೇಲಿಯಲ್ಲಿ ತನ್ನನ್ನು ಲೋಕಸಭೆ ಚುನಾವಣೆಯಲ್ಲಿ ಮರು ಆಯ್ಕೆ ಮಾಡಿದ್ದ ಮತದಾರರಿಗೆ ಕೃತಜ್ಞತೆ ಸಲ್ಲಿಸುವ ರ‍್ಯಾಲಿಯಲ್ಲಿ ಮಾತನಾಡಿದ್ದರು. ಕಳೆದ ವರ್ಷ ನ.23ರಂದು ತೆಲಂಗಾಣದಲ್ಲಿ ಕೊನೆಯ ಬಾರಿ ಅಸೆಂಬ್ಲಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News