ಅಯೋಧ್ಯೆ ವಿವಾದ: ರಾಜಿ ಪಂಚಾಯತಿಕೆಯನ್ನು ಒಪ್ಪುವುದಿಲ್ಲ ಎಂದ ಮುಸ್ಲಿಂ ಕಕ್ಷಿದಾರರು

Update: 2019-10-18 14:32 GMT

ಹೊಸದಿಲ್ಲಿ,ಅ.18: ಅಯೋಧ್ಯೆ ಪ್ರಕರಣದಿಂದ ಹಿಂದೆ ಸರಿಯಲು ಸುನ್ನಿ ವಕ್ಫ್ ಮಂಡಳಿಯು ನಿರ್ಧರಿಸಿದೆ ಎಂಬ ವರದಿಗಳಿಗೆ ಪ್ರಕರಣದಲ್ಲಿಯ ಮುಸ್ಲಿಂ ಕಕ್ಷಿದಾರರು ಆಘಾತ ವ್ಯಕ್ತಪಡಿಸಿದ್ದಾರೆ.

ಮುಖ್ಯ ಹಿಂದು ಕಕ್ಷಿದಾರರು ಮಧ್ಯಸ್ಥಿಕೆ ಪ್ರಕ್ರಿಯೆ ಮತ್ತು ಉದ್ದೇಶಿತ ಇತ್ಯರ್ಥದ ಭಾಗವಾಗಿರಲಿಲ್ಲವಾದ್ದರಿಂದ ಸುನ್ನಿ ವಕ್ಫ್ ಮಂಡಳಿಯನ್ನು ಹೊರತುಪಡಿಸಿ ಎಲ್ಲ ಮುಸ್ಲಿಂ ಕಕ್ಷಿದಾರರು ರಾಜಿ ಇತ್ಯರ್ಥವನ್ನು ತಿರಸ್ಕರಿಸಿದ್ದಾರೆ ಎಂದು ಪ್ರಕರಣದಲ್ಲಿ ಮುಸ್ಲಿಂ ಅರ್ಜಿದಾರ ಎಂ.ಸಿದ್ದಿಕ್ ಅವರ ಪರ ವಕೀಲ ಎಝಾಝ್ ಮಕ್ಬೂಲ್ ಅವರು ಶುಕ್ರವಾರ ಇಲ್ಲಿ ತಿಳಿಸಿದರು.

ಸಂಧಾನಕಾರರ ಪ್ರಸ್ತಾಪವನ್ನು,ಸಂಧಾನವು ನಡೆದಿದ್ದ ರೀತಿಯನ್ನು ನಾವು ಒಪ್ಪಿಕೊಳ್ಳುವುದಿಲ್ಲ ಎಂದು ಮಕ್ಬೂಲ್ ಸುದ್ದಿಸಂಸ್ಥೆಗೆ ತಿಳಿಸಿದರು.

ಸಂಧಾನಕಾರರ ಪ್ರಸ್ತಾಪವು ಉಭಯ ಪಕ್ಷಗಳಿಗೂ ತೃಪ್ತಿಯನ್ನು ನೀಡಲಿದೆ ಎಂದು ಸುನ್ನಿ ವಕ್ಫ್ ಮಂಡಳಿಯ ಪರ ನ್ಯಾಯವಾದಿ ಶಾಹಿದ್ ರಿಝ್ವಿ ಅವರು ಬಣ್ಣಿಸಿದ್ದರು.

ಸಂಧಾನಕಾರರ ತಂಡವು ಬುಧವಾರ ತನ್ನ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿತ್ತು.

ಸಂಧಾನ ಸಮಿತಿ ಅಥವಾ ಬಾಬರಿ ಮಸೀದಿಯ ಮೇಲೆ ಹಕ್ಕು ಮಂಡಿಸಿರುವ ನಿರ್ಮೋಹಿ ಅಖಾಡಾ ಅಥವಾ ಇತರರು ವರದಿಯನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿದ್ದಾರೆ ಎಂದು ಮಕ್ಬೂಲ್ ಪ್ರತಿಪಾದಿಸಿದರು.

 ವಿವಾದಿತ ಪ್ರದೇಶದ ಮೇಲಿನ ಹಕ್ಕನ್ನು ಬಿಟ್ಟುಕೊಡಲು ಸುನ್ನಿ ವಕ್ಫ್ ಮಂಡಳಿಯು ನಿರ್ಧರಿಸಿದೆ ಮತ್ತು ಅಲ್ಲಿ ರಾಮಮಂದಿರ ನಿರ್ಮಾಣಕ್ಕೆ ತನ್ನ ನಿರಾಕ್ಷೇಪಣೆಯನ್ನ ವ್ಯಕ್ತಪಡಿಸಿದೆ. ಮಸೀದಿಯನ್ನು ಇತರ ಯಾವುದೇ ಸ್ಥಳದಲ್ಲಿ ನಿರ್ಮಿಸುವ ಕೊಡುಗೆಯನ್ನು ಅದು ಮುಂದಿರಿಸಿದೆ ಮತ್ತು ಅಯೋಧ್ಯೆಯಲ್ಲಿ ಹಾಲಿ ಇರುವ ಮಸೀದಿಗಳನ್ನು ನವೀಕರಿಸುವಂತೆ ಕೇಂದ್ರವನ್ನು ಕೇಳಿಕೊಂಡಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News