ರವಿ ಶಾಸ್ತ್ರಿ ಕುರಿತ ಪ್ರಶ್ನೆಗೆ ಗಂಗುಲಿ ನೀಡಿದ ಉತ್ತರ ವೈರಲ್

Update: 2019-10-18 11:04 GMT

 ಹೊಸದಿಲ್ಲಿ, ಅ.18: ಬಿಸಿಸಿಐ ನೂತನ ಅಧ್ಯಕ್ಷರಾಗಿ ಸೌರವ್ ಗಂಗುಲಿ ನಿಯೋಜಿತರಾಗಿದ್ದಕ್ಕೆ ಮಾಜಿ ಆಟಗಾರರು ಹಾಗೂ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೆ ಭಾರತದ ಮುಖ್ಯ ಕೋಚ್ ರವಿ ಶಾಸ್ತ್ರಿ ಕುರಿತ ಪ್ರಶ್ನೆಗೆ ಭಾರತದ ಮಾಜಿ ನಾಯಕ ಗಂಗುಲಿ ನೀಡಿದ ಉತ್ತರ ಭಾರೀ ವೈರಲ್ ಆಗಿದೆ.

ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಬಳಿಕ ಇತ್ತೀಚೆಗೆ ತವರು ಪಟ್ಟಣ ಕೋಲ್ಕತಾಕ್ಕೆ ವಾಪಸಾಗಿದ್ದ ಗಂಗುಲಿಗೆ ವೀರೋಚಿತ ಸ್ವಾಗತ ಪಡೆದಿದ್ದರು. ಬಳಿಕ ಪತ್ರಿಕಾಗೋಷ್ಠಿಯಲ್ಲಿ ನಡೆಸಿದ್ದರು.

ಈ ವೇಳೆ ಗಂಗುಲಿ ಬಳಿ ಶಾಸ್ತ್ರಿ ಕುರಿತ ಪ್ರಶ್ನೆ ಕೇಳಲಾಗಿತ್ತು. ನೀವು ರವಿ ಶಾಸ್ತ್ರಿ ಅವರೊಂದಿಗೆ ಮಾತನಾಡಿದ್ದೀರಾ? ಎಂದು ಸುದ್ದಿಗಾರರೊಬ್ಬರು ಗಂಗುಲಿಗೆ ಕೇಳಿದರು. ಇದಕ್ಕೆ ಉತ್ತರಿಸಿದ ಗಂಗುಲಿ,‘‘ಏಕೆ? ಅವರೇನು ಮಾಡಿದ್ದಾರೆ? ಎಂದು ಪ್ರಶ್ನಿಸಿದರು.

ಶಾಸ್ತ್ರಿ ಕುರಿತು ಕೇಳಿದ ಪ್ರಶ್ನೆಗೆ ಗಂಗುಲಿ ನೀಡಿದ ಈ ಪ್ರತಿಕ್ರಿಯೆ ಭಾರೀ ವೈರಲ್ ಆಗಿದೆ. ಅಷ್ಟಕ್ಕೂ ಗಂಗುಲಿ ಹಾಗೂ ಶಾಸ್ತ್ರಿ ಅವರು ಪರಸ್ಪರ ಕಣ್ಣಿಗೆ ಕಣ್ಣಿಟ್ಟು ಮಾತನಾಡುವುದಿಲ್ಲ.

2016ರಲ್ಲಿ ಭಾರತ ಮುಖ್ಯ ಕೋಚ್ ನೇಮಕಾತಿಯ ವೇಳೆ ಈ ಇಬ್ಬರ ಸಂಬಂಧ ಹಳಸಿತ್ತು. ಆಗ ಶಾಸ್ತ್ರಿ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಗಂಗುಲಿ, ಸಚಿನ್ ತೆಂಡುಲ್ಕರ್ ಹಾಗೂ ವಿವಿಎಸ್ ಲಕ್ಷ್ಮಣ್ ಅವರನ್ನೊಳಗೊಂಡಿದ್ದ ಕ್ರಿಕೆಟ್ ಆಯ್ಕೆ ಸಮಿತಿ ಅನಿಲ್ ಕುಂಬ್ಳೆ ಅವರನ್ನು ಕೋಚ್ ಆಗಿ ಆಯ್ಕೆ ಮಾಡಿತ್ತು. ತನ್ನ ಸಂದರ್ಶನದ ವೇಳೆ ಗಂಗುಲಿ ಗೈರಾಗಿದ್ದರು ಎಂದು ಶಾಸ್ತ್ರಿ ಆರೋಪಿಸಿದ್ದರು.

ಶಾಸ್ತ್ರಿ ಆರೋಪಕ್ಕೆ ಪ್ರತಿಕ್ರಿಯಿಸಿದ್ದ ಗಂಗುಲಿ,‘‘ಕುಂಬ್ಳೆ ಅವರನ್ನು ಕೋಚ್ ಆಗಿ ಆಯ್ಕೆ ಮಾಡಿರುವುದರ ಹಿಂದೆ ನಾನಿದ್ದೆ. ಅವರ ಆಯ್ಕೆಗೆ ನನ್ನ ಸಹಮತ ಇರಲಿಲ್ಲ ಎಂದು ಎಂದು ಶಾಸ್ತ್ರಿ ಅವರು ಯೋಚಿಸಿದ್ದರೆ ಅವರು ಮೂರ್ಖರ ಸ್ವರ್ಗದಲ್ಲಿ ನೆಲೆಸಿದ್ದಾರೆ ಎಂದು ಅರ್ಥ’’ ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News