ಗಾಂಧೀಜಿ ಹತ್ಯೆಯ ಸಂಚಿನಲ್ಲಿದ್ದ ಸಾವರ್ಕರ್ ಗೆ 'ಭಾರತ ರತ್ನ' ಸರಿಯಲ್ಲ: ದಿನೇಶ್ ಗುಂಡೂರಾವ್

Update: 2019-10-18 13:16 GMT

ಬೆಂಗಳೂರು, ಅ. 18: ‘ಸಾವರ್ಕರ್ ಬ್ರಿಟಿಷರ ವಿರುದ್ಧ ಯಾವುದೇ ಹೋರಾಟವನ್ನೇನು ನಡೆಸಿಲ್ಲ. ಆದರೆ, ಗಾಂಧೀಜಿ ಹತ್ಯೆಯ ಸಂಚಿನಲ್ಲಿ ಇವರೂ ಇದ್ದರು. ಹೀಗಾಗಿ ಇಂತಹವರಿಗೆ ಭಾರತ ರತ್ನ ನೀಡುವುದು ಸರಿಯಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆಕ್ಷೇಪಿಸಿದ್ದಾರೆ.

ಶುಕ್ರವಾರ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಾವರ್ಕರ್ ಓರ್ವ ವಿವಾದಾತ್ಮಕ ವ್ಯಕ್ತಿ. ಮಹಾತ್ಮ ಗಾಂಧೀಜಿ ಹತ್ಯೆಯಲ್ಲಿನ ಇವರ ಪಾತ್ರ ಪ್ರಶ್ನಾತೀತ ಅಲ್ಲ ಎಂದು ಹೇಳಲು ಸಾಧ್ಯವಿಲ್ಲ ಎಂದು ಇದೇ ವೇಳೆ ಟೀಕಿಸಿದರು.

ಚುನಾವಣೆಯಲ್ಲಿ ಮತ ಗಳಿಕೆ ಉದ್ದೇಶಕ್ಕಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಮಹಾರಾಷ್ಟ್ರಕ್ಕೆ ನೀರು ಹರಿಸುತ್ತೇನೆಂದು ಹೇಳಿಕೆ ನೀಡಿದ್ದು ಸಲ್ಲ. ಏಕಾಏಕಿ ಇಂತಹ ಘೋಷಣೆ ಮಾಡುವುದು ಸರಿಯಲ್ಲ. ಇಂತಹ ವಿಚಾರಗಳಲ್ಲಿ ಸಮಾಲೋಚನೆ ಅಗತ್ಯ. ಆದರೆ, ಚುನಾವಣಾ ಗಿಮಿಕ್‌ಗಾಗಿ ಹೇಳಿಕೆ ನೀಡಬಾರದು ಎಂದು ಹೇಳಿದರು.

ಮಹಾದಾಯಿ ರೈತ ಹೋರಾಟದ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಖುದ್ದು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಲಿದ್ದೇನೆ. ಅವರ ಸಮಸ್ಯೆಗಳನ್ನು ಆಲಿಸಿ, ಸಮಸ್ಯೆ ಪರಿಹಾರಕ್ಕೆ ಚರ್ಚಿಸಲಾಗುವುದು ಎಂದು ದಿನೇಶ್ ಗುಂಡೂರಾವ್ ಇದೇ ವೇಳೆ ಸ್ಪಷ್ಟಣೆ ನೀಡಿದರು.

ಜಿಲ್ಲಾಧ್ಯಕ್ಷರ ನೇಮಕ ಸಂಬಂಧ ವೀಕ್ಷಕರನ್ನು ನೇಮಿಸಿ ವರದಿ ತರಿಸಿಕೊಂಡು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ದಿನೇಶ್ ಗುಂಡೂರಾವ್, ಕೋಲಾರ ಮತ್ತು ಚಿಕ್ಕಬಳ್ಳಾಪುರ ಸಮಸ್ಯೆಗಳನ್ನು ಶೀಘ್ರವೇ ಬಗೆಹರಿಸಲಾಗುವುದು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News