ಭಾರತದಲ್ಲಿ ಕ್ಷಯ ರೋಗ: ಹಸಿವಿಗೆ ಹುಟ್ಟಿದ ಅಕ್ರಮ ಕೂಸು

Update: 2019-10-19 04:46 GMT

 ಜಾಗತಿಕವಾಗಿ ಭಾರತವು ಯಾವೆಲ್ಲ ವಿಷಯಗಳಲ್ಲಿ ಎಡವುತ್ತಿದೆ ಎನ್ನುವುದನ್ನು ಬೇರೆ ಬೇರೆ ವರದಿಗಳು ಬಹಿರಂಗಪಡಿಸುತ್ತಿವೆ. ಭಾರತದ ಆರ್ಥಿಕ ಸ್ಥಿತಿ ಶೀಘ್ರದಲ್ಲೇ ಎದ್ದು ನಿಲ್ಲಲಿದೆ ಎಂದು ಸರಕಾರ ನೀಡುತ್ತಿದ್ದ ಭರವಸೆಗಳನ್ನು ನಿರಾಕರಿಸುವ ವರದಿಯೊಂದನ್ನು ಇತ್ತೀಚೆಗೆ ವಿಶ್ವಬ್ಯಾಂಕ್ ನೀಡಿತು. ಅದರ ಪ್ರಕಾರ ಭವಿಷ್ಯದಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಶೇ. 6ಕ್ಕೆ ಕುಸಿಯಲಿದೆ. ಈ ವರದಿ ಬಂದ ಕೆಲವೇ ದಿನಗಳಲ್ಲಿ, ವಿಶ್ವ ಹಸಿವು ಸೂಚ್ಯಂಕ ಹೊರಬಿತ್ತು. ಇಲ್ಲೂ ಭಾರತಕ್ಕೆ ಆಘಾತಕಾರಿ ಫಲಿತಾಂಶವೇ ದೊರಕಿದೆ.

ಒಟ್ಟು 117 ರಾಷ್ಟ್ರಗಳಿರುವ ವಿಶ್ವ ಹಸಿವು ಸೂಚ್ಯಂಕದಲ್ಲಿ ಭಾರತ 102ನೇ ಸ್ಥಾನಕ್ಕೆ ಕುಸಿದಿದೆ. ಕಳೆದ ವರ್ಷ ಭಾರತ 95ನೇ ಸ್ಥಾನದಲ್ಲಿತ್ತು. ಯುಪಿಎ ಸರಕಾರದ ಅವಧಿಯಲ್ಲಿ ಈ ದೇಶದ ಶೇ. 45 ರಷ್ಟು ಜನರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂದು ಸರಕಾರ ಒಪ್ಪಿಕೊಂಡಿತ್ತು. ಆದರೆ ಮೋದಿ ನೇತೃತ್ವದ ಎನ್‌ಡಿಎ ಸರಕಾರ ನೋಟು ನಿಷೇಧ ಮಾಡಿದ ಬಳಿಕ ದೇಶದ ಆರ್ಥಿಕ ಸ್ಥಿತಿ ಸಂಪೂರ್ಣ ಬುಡಮೇಲಾಯಿತು. ಕಟ್ಟಡ ನಿರ್ಮಾಣ ಸೇರಿದಂತೆ ಹಲವು ಉದ್ಯಮಗಳಲ್ಲಿ ಅಲ್ಲೋಲ ಕಲ್ಲೋಲ ಉಂಟಾಯಿತು. ದಿನದ ಕೂಲಿಯನ್ನು ಅವಲಂಬಿಸಿದ ನಗರ ಕಾರ್ಮಿಕರು, ಹಾಗೆಯೇ ಹಳ್ಳಿಗಳಿಂದ ವಲಸೆ ಬಂದ ದಿನಗೂಲಿ ಕಾರ್ಮಿಕರು ಕೆಲಸವಿಲ್ಲದೆ ತೀವ್ರ ಅತಂತ್ರದಲ್ಲಿದ್ದಾರೆ. ಉದ್ಯಮಗಳ ಕುಸಿತ, ಕೃಷಿ ಉದ್ದಿಮೆಗಳಲ್ಲಾದ ಏರುಪೇರುಗಳಿಂದ, ಬಡವರು ಮತ್ತು ಮಧ್ಯಮವರ್ಗಗಳ ಬದುಕು ತತ್ತರಿಸಿದೆ.

ನೋಟು ನಿಷೇಧದ ಬಳಿಕ ದೇಶದಲ್ಲಿ ಹಸಿವಿನಿಂದ ಬಳಲುವವರ ಸಂಖ್ಯೆಯೂ ಹೆಚ್ಚಿದೆ. ಇದು ಸಹಜವಾಗಿಯೇ ಅಪೌಷ್ಟಿಕತೆಯಿಂದ ನರಳುವವರ ಸಂಖ್ಯೆಯನ್ನು ಹೆಚ್ಚಿಸಿದೆ. ಇದೀಗ ಇನ್ನೊಂದು ವರದಿಯನ್ನು ವಿಶ್ವಸಂಸ್ಥೆ ಬಿಡುಗಡೆ ಮಾಡಿದೆ. ಜಾಗತಿಕವಾಗಿ ಕ್ಷಯರೋಗದಲ್ಲಿ ಭಾರತ ಅಗ್ರ ಸ್ಥಾನವನ್ನು ಪಡೆದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಗುರುವಾರ ಬಿಡುಗಡೆ ಮಾಡಿದ ತನ್ನ ವರದಿಯಲ್ಲಿ ತಿಳಿಸಿದೆ. ವಿಶ್ವದಲ್ಲಿ ಒಂದು ಕೋಟಿ ಕ್ಷಯರೋಗಿಗಳಿದ್ದು ಇದರಲ್ಲಿ ಭಾರತದ ಪಾಲು ಶೇ.27 ಎನ್ನುವುದು ನಿಜಕ್ಕೂ ಆಘಾತಕಾರಿಯಾಗಿದೆ. ಇದು ಖಂಡಿತವಾಗಿಯೂ ಭವಿಷ್ಯದಲ್ಲಿ ವಿಶ್ವಗುರು ಆಗಬಹುದಾದ ಭಾರತದ ಗುಣಲಕ್ಷಣವಲ್ಲ. ಭಾರತ 2025ರಲ್ಲಿ ಕ್ಷಯ ರೋಗ ಮುಕ್ತವಾಗಲಿದೆ ಎಂದು ಸರಕಾರ ಹೇಳುತ್ತಿದೆ. ಆದರೆ ಸದ್ಯ ಬಿಡುಗಡೆಯಾಗಿರುವ ವರದಿ ಮತ್ತು ತಳಸ್ತರದಲ್ಲಿ ಗ್ರಾಮೀಣ ಜನರ ಬದುಕನ್ನು ಗಮನಿಸಿದರೆ ಈ ಗುರಿಯನ್ನು ಸಾಧಿಸುವುದು ಅಷ್ಟು ಸುಲಭವಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಕ್ಷಯದಿಂದಾಗಿ ಅತೀಹೆಚ್ಚು ಸಾವಿನ ದರ ಮತ್ತು ರೋಗಿಗಳು ಚಿಕಿತ್ಸೆ ಮುಂದುವರಿಸುವಲ್ಲಿ ವಿಫಲವಾಗುತ್ತಿರುವುದರಿಂದ ಭಾರತ, ಇಂಡೋನೇಶಿಯ, ಮೊಝಾಂಬಿಕ್ ಮತ್ತು ಉಕ್ರೇನ್‌ನಂತಹ ದೇಶಗಳಲ್ಲಿ ಟಿಬಿ ಚಿಕಿತ್ಸೆಯ ಫಲಿತಾಂಶದ ದರ ಶೇ. 50 ಇಳಿಕೆಯಾಗಿದೆ ಎಂದು ವರದಿ ತಿಳಿಸಿದೆ. ಕಡಿಮೆ ಆದಾಯ ಹೊಂದಿರುವ ದೇಶಗಳಲ್ಲಿ ಟಿಬಿಯ ಹೊರೆ ಅಧಿಕವಾಗಿದೆ ಎಂದು ವರದಿ ಹೇಳುತ್ತದೆ.

ಟಿಬಿ ಅಥವಾ ಕ್ಷಯಗಳನ್ನು ಬರೇ ರೋಗವಾಗಿ ನಾವು ನೋಡುವುದು ಸಾಧ್ಯವಿಲ್ಲ. ಅದಕ್ಕೆ ಸಾಮಾಜಿಕ ಆಯಾಮವಿದೆ. ಇಂದು ಈ ದೇಶದಲ್ಲಿ ಕ್ಯಾನ್ಸರ್ ಅಥವಾ ಇನ್ನಿತರ ಮಾರಕ ರೋಗಗಳಿಂದ ಬಳಲುತ್ತಿರುವವರಿಗೂ ಕ್ಷಯರೋಗಗಳಲ್ಲಿ ಬಳಲುತ್ತಿರುವವರಿಗೂ ಬಹುದೊಡ್ಡ ಅಂತರವಿದೆ. ಕ್ಷಯ ರೋಗಗಳಿಂದ ಬಳಲುತ್ತಿರುವ ಶೇ. 75ರಷ್ಟು ಜನರು ಕಾರ್ಮಿಕರು. ಅವರೆಲ್ಲ ಬಡವರ್ಗಕ್ಕೆ ಸೇರಿದವರು. ನಗರಗಳಲ್ಲಿ ಬದುಕುತ್ತಿರುವವರಲ್ಲೂ ಕ್ಷಯರೋಗಕ್ಕೆ ಪೀಡಿತರಾಗುವವರು ಜೋಪಡಾಪಟ್ಟಿಯಲ್ಲೇ ಹೆಚ್ಚಿದ್ದಾರೆ. ಧೂಳು, ಮಾಲಿನ್ಯ, ನೀರು ಇವೆಲ್ಲದರ ಜೊತೆಗೆ ಈ ರೋಗ ಹುಡುಕಿಕೊಂಡು ಬರುವುದೇ ಅಪೌಷ್ಟಿಕ ಜನರನ್ನು. ಕ್ಷಯ ರೋಗಕ್ಕೂ ಹಸಿವಿಗೂ ನೇರ ಸಂಬಂಧವಿದೆ.

ಕ್ಷಯ ರೋಗ ಆಕ್ರಮಿಸುವುದು ಅಪೌಷ್ಟಿಕ ದೇಹವನ್ನು. ಇದೇ ಸಂದರ್ಭದಲ್ಲಿ ಕ್ಷಯರೋಗ ಬರೇ ಔಷಧಿಗಳಿಂದಷ್ಟೇ ಗುಣವಾಗುವುದಿಲ್ಲ. ಅದು ಪೌಷ್ಟಿಕವಾದ, ಪ್ರೊಟೀನ್‌ಯುಕ್ತ ಆಹಾರವನ್ನು ಬೇಡುತ್ತದೆ. ಆದರೆ ಈ ದೇಶದಲ್ಲಿ ಆಹಾರ ವರ್ಷದಿಂದ ವರ್ಷಕ್ಕೆ ದುಬಾರಿಯಾಗುತ್ತಾ ಹೋಗುತ್ತಿದೆ. ಒಂದೆಡೆ ಹಸಿವಿನ ಕಾರಣದಿಂದ ದೇಶ ವಿಶ್ವದಲ್ಲೇ ಕುಖ್ಯಾತವಾಗುತ್ತಿರುವ ಹೊತ್ತಿನಲ್ಲಿ, ಈ ದೇಶ ಆಹಾರದ ಹೆಸರಿನಲ್ಲೇ ರಾಜಕೀಯ ನಡೆಸುತ್ತಿದೆ. ವಿದೇಶಗಳಿಗೆ ಅತಿ ದೊಡ್ಡ ಪ್ರಮಾಣದಲ್ಲಿ ಗೋಮಾಂಸವನ್ನು ರಫ್ತು ಮಾಡುವ ದೇಶ ನಮ್ಮದು. ಆದರೆ ಭಾರತದೊಳಗೆ ಗೋಮಾಂಸಾಹಾರ ಜನರ ಕೈಗೆಟಕದಂತೆ ವಿವಿಧ ರೀತಿಯಲ್ಲಿ ತಡೆಯುವ ಪ್ರಯತ್ನ ನಡೆಯುತ್ತಿದೆ. ಒಂದು ಕಾಲದಲ್ಲಿ ಗೋಮಾಂಸವೆನ್ನುವುದು ಬಡವರ ಪೌಷ್ಟಿಕ ಆಹಾರವಾಗಿತ್ತು. ಅಂದರೆ ಕುರಿ, ಕೋಳಿ, ಮೀನಿಗಿಂತ ಅತಿ ಕಡಿಮೆ ದರದಲ್ಲಿ ಗೋಮಾಂಸ ದೊರಕುವುದರಿಂದ, ಬಡವರಿಗೆ ವರದಾನವಾಗಿತ್ತು. ಆದರೆ ಇಂದು ಗೋಮಾಂಸದ ಹೆಸರಿನಲ್ಲಿ ನಡೆಯುತ್ತಿರುವ ರಾಜಕಾರಣಗಳಿಂದಾಗಿ ಇರುವ ಆಹಾರವೂ ಜನರ ಕೈತಪ್ಪಿದಂತಾಗಿದೆ. ಇದಕ್ಕೆ ಪರ್ಯಾವಾಗಿ ಆ ಜನರಿಗೆ ನೀಡುವುದಕ್ಕೆ ಸರಕಾರದ ಬಳಿ ಏನೂ ಇಲ್ಲ. ಶೇ. 2ರಷ್ಟಿರುವ ವೈದಿಕ ಸಮುದಾಯದ ಧಾರ್ಮಿಕ ನಂಬಿಕೆಗಾಗಿ ಈ ದೇಶದ ಬಹುಸಂಖ್ಯಾತರ ಆಹಾರವನ್ನು ಕಸಿದುಕೊಳ್ಳುತ್ತಿರುವುದು ವಿಪರ್ಯಾಸವೇ ಸರಿ. ಈ ಹಿಂದೆ ಬಡ ಕಾರ್ಮಿಕರು ಕ್ಷಯರೋಗ ಪೀಡಿತರಾದರೆ ಅವರು ಗೋಮಾಂಸವನ್ನು ನೆಚ್ಚಿಕೊಳ್ಳುತ್ತಿದ್ದರು.ಇಂದು ಪೌಷ್ಟಿಕ ಆಹಾರಗಳಿಲ್ಲದೆ, ಬರೇ ಔಷಧಗಳಿಂದ ಕ್ಷಯರೋಗವನ್ನು ಓಡಿಸುವ ಪ್ರಯತ್ನ ನಡೆಯುತ್ತಿದೆ.

ಆದುದರಿಂದಲೇ ಈ ಪ್ರಯತ್ನ ವಿಫಲವಾಗುತ್ತಿದೆ. ಹಸಿವು ನಿವಾರಣೆ ಮತ್ತು ಕ್ಷಯ ರೋಗ ನಿವಾರಣೆ ಎರಡೂ ಜೊತೆ ಜೊತೆಯಾಗಿ ನಡೆಯಬೇಕಾಗಿದೆ. ಭಾರತದಂತಹ ಬಡ ದೇಶದಲ್ಲಿ, ತಮ್ಮ ಆಹಾರವನ್ನು ತಾವೇ ನಿರ್ಧರಿಸುವ ಹಕ್ಕನ್ನು ಹಸಿದವರಿಗೆ ಬಿಟ್ಟು ಬಿಡಬೇಕು. ಒಬ್ಬರ ಭಾವನೆಗಳಿಗೆ ಧಕ್ಕೆಯಾಗುತ್ತದೆಯೆಂದು ಇನ್ನೊಬ್ಬರ ತಟ್ಟೆಯ ಆಹಾರವನ್ನು ಕಸಿಯುವುದು ಅವರ ಬದುಕುವ ಹಕ್ಕನ್ನೇ ನಿರಾಕರಿಸಿದಂತೆ.

ಇತ್ತೀಚೆಗೆ ನೊಬೆಲ್ ಗೌರವ ಪಡೆದ ಭಾರತೀಯ ಮೂಲದ ಅಭಿಜಿತ್ ಬ್ಯಾನರ್ಜಿಯವರ ಆರ್ಥಿಕ ಸಿದ್ಧಾಂತ ಇದೇ ತಳಹದಿಯ ಮೇಲೆ ನಿಂತಿದೆ. ಅದು ಈ ದೇಶದ ಹಸಿದವರ ಪರವಾಗಿದೆ. ಆದರೆ ನಮ್ಮ ಕೇಂದ್ರ ಸಚಿವರೊಬ್ಬರು ಬ್ಯಾನರ್ಜಿಯ ಆರ್ಥಿಕ ಸಿದ್ಧಾಂತಗಳನ್ನು ಜನರು ತಿರಸ್ಕರಿಸಿದ್ದಾರೆ ಎಂದು ಹೇಳುತ್ತಿದ್ದಾರೆ. ಸಿದ್ಧಾಂತವನ್ನು ತಿರಸ್ಕರಿಸಿರುವುದು ಜನರಲ್ಲ, ಸರಕಾರ. ಅದರ ಪರಿಣಾಮವಾಗಿ ದೇಶ ಹಸಿವು ಮತ್ತು ಕ್ಷಯರೋಗಗಳಿಗಾಗಿ ಸುದ್ದಿಯಾಗುತ್ತಿದೆ ಮತ್ತು ಈ ದೇಶಕ್ಕೆ ಬ್ಯಾನರ್ಜಿಯಂತಹ ಆರ್ಥಿಕ ತಜ್ಞರ ಅಗತ್ಯವನ್ನು ಹೇಳುತ್ತಿದೆ. ಅಂಬಾನಿ, ಅದಾನಿ ಕೇಂದ್ರಿತವಾಗಿರುವ ಆರ್ಥಿಕ ನೀತಿಗಳಿಂದ ಹಸಿವನ್ನು ಮತ್ತು ಕ್ಷಯರೋಗಗಳನ್ನು ಎದುರಿಸಲು ಸಾಧ್ಯವಿಲ್ಲ ಎನ್ನುವುದನ್ನು ಈಗಾಗಲೇ ದೇಶ ಕಂಡುಕೊಂಡಿರುವಾಗ, ಬ್ಯಾನರ್ಜಿಯ ಆರ್ಥಿಕ ಸಿದ್ಧಾಂತಗಳನ್ನು ದೇಶ ತಿರಸ್ಕರಿಸಿದೆ ಎಂದು ಸಚಿವರು ಹೇಗೆ ಹೇಳಿಕೆ ನೀಡುತ್ತಾರೆ? ಒಂದು ವೇಳೆ ಸರಕಾರ ಸದ್ಯ ಅನುಸರಿಸುತ್ತಿರುವ ಆರ್ಥಿಕ ನೀತಿಯೇ ಸರಿಯೆಂದಾದರೆ, ದೇಶ ಯಾಕೆ ಅಸ್ತವ್ಯಸ್ತವಾಗಿ ಕೂತಿದೆ? ತನ್ನ ಆರ್ಥಿಕ ನೀತಿಯನ್ನು ಸರಕಾರ ಬದಲಿಸಿಕೊಳ್ಳದೋ ಹೋದರೆ ಹಸಿವು ಮತ್ತು ಕ್ಷಯ ಎರಡನ್ನೂ ಎದುರಿಸುವಲ್ಲಿ ವಿಫಲವಾಗುವುದು ಖಂಡಿತ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News