ಹುಷಾರ್.. ಕುಡಿಯುವ ಹಾಲಿನಲ್ಲೂ ವಿಷ ಇದೆ!

Update: 2019-10-19 03:37 GMT

ಹೊಸದಿಲ್ಲಿ, ಅ.19: ದೇಶದಲ್ಲಿ ಕಲಬೆರಕೆ ಹಾಲು ಮಾರಾಟ, ಸಾಮಾನ್ಯ ಆರೋಗ್ಯಕ್ಕೆ ಸವಾಲಾಗಿ ಪರಿಣಮಿಸಿದ್ದು, ಪರೀಕ್ಷೆಗೆ ಒಳಪಡಿಸಿದ ಹಾಲಿನ ಮಾದರಿಯಲ್ಲಿ ಶೇಕಡ 6ರಷ್ಟರಲ್ಲಿ ಅಫ್ಲಟಾಕ್ಸಿನ್ ಎಂ1 ಎಂಬ ಕ್ಯಾನ್ಸರ್‌ಕಾರಕ ಕಣಗಳು ಇರುವುದು ಆತಂಕಕ್ಕೆ ಕಾರಣವಾಗಿದೆ. ಇದು ಲಿವರ್‌ಗೆ ವಿಷಕಾರಿಯಾದ ಸೂಕ್ಷ್ಮ ಕಲ್ಮಶವಾಗಿದೆ ಎಂದು ಭಾರತದ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಹೊರತಂದಿರುವ ರಾಷ್ಟ್ರೀಯ ಹಾಲು ಸುರಕ್ಷಾ ಮತ್ತು ಗುಣಮಟ್ಟ ಸಮೀಕ್ಷೆ-2018 ಹೇಳಿದೆ.

ಭಾರತದ 103 ನಗರಗಳಲ್ಲಿ 6,432 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಕನಿಷ್ಠ 50 ಸಾವಿರ ಮಂದಿ ಕುಡಿಯಲು ಯೋಗ್ಯವಲ್ಲದ ಹಾಲನ್ನು ಸೇವಿಸುತ್ತಿರುವುದು ದೃಢಪಟ್ಟಿದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಸಂಸ್ಕರಿತ ಹಾಲಿನ ಪೈಕಿ ಬಹುತೇಕ ಮಾದರಿಗಳು ಸುರಕ್ಷಾ ಪರೀಕ್ಷೆಯಲ್ಲಿ ವಿಫಲವಾಗಿವೆ.
"ಸಾಮಾನ್ಯವಾಗಿ ದೇಶಾದ್ಯಂತ ಮಾರಾಟವಾಗುವ ದ್ರವ ಹಾಲು ಕುಡಿಯಲು ಯೋಗ್ಯ. ಆದರೆ ಪರೀಕ್ಷೆಗೆ ಗುರಿಪಡಿಸಿದ ಶೇಕಡ 7ರಷ್ಟು ಹಾಲಿನಲ್ಲಿ ಮಾನವ ಆರೋಗ್ಯಕ್ಕೆ ಹಾನಿಕಾರಕವಾದ ಅಂಶಗಳು ಪತ್ತೆಯಾಗಿವೆ. ಕೇವಲ 12 ಮಾದರಿಗಳಲ್ಲಿ ಡಿಟರ್ಜೆಂಟ್, ಯೂರಿಯಾ ಮತ್ತಿತರ ಅಂಶವನ್ನು ಪತ್ತೆ ಮಾಡಲಾಗಿದೆ. ಆದ್ದರಿಂದ ಡೇರಿ ಹಾಲು ಕುಡಿಯಲು ಯೋಗ್ಯವಲ್ಲ; ಕಲುಷಿತ ಎಂಬ ಭಾವನೆ ತಪ್ಪು" ಎಂದು ಎಫ್‌ಎಸ್‌ಎಸ್‌ಎಐ ಸಿಇಓ ಪವನ್ ಅಗರ್‌ವಾಲ್ ಹೇಳಿದ್ದಾರೆ.

ಕಲುಷಿತ ಹಾಲು ಮಾರಾಟವಾಗುವ ಅಗ್ರ ರಾಜ್ಯಗಳೆಂದರೆ ತಮಿಳುನಾಡು, ದೆಹಲಿ ಮತ್ತು ಕೇರಳ. ಹಾಲಿನಲ್ಲಿ ಗರಿಷ್ಠ ಅಫ್ಲೆಟಾಕ್ಸಿನ್ ಪ್ರಮಾಣ 0.5 ಪಿಪಿಎಂ ಇರಬಹುದು. ಆದರೆ ತಮಿಳುನಾಡಿನಲ್ಲಿ ಪರೀಕ್ಷೆಗೆ ಗುರಿಪಡಿಸಿದ 551 ಮಾದರಿಗಳ ಪೈಕಿ 88, ದೆಹಲಿಯಲ್ಲಿ 262ರ ಪೈಕಿ 38 ಮತ್ತು ಕೇರಳದಲ್ಲಿ 187 ಮಾದರಿಗಳ ಪೈಕಿ 37ರಲ್ಲಿ ಸುರಕ್ಷಿತ ಪ್ರಮಾಣಕ್ಕಿಂತ ಅಧಿಕ ಅಫ್ಲೆಟಾಕ್ಸಿನ್ ಇರುವುದು ಪತ್ತೆಯಾಗಿದೆ.

"ಇದಕ್ಕೆ ಪಶು ಆಹಾರ ಮತ್ತು ಹುಲ್ಲು ಕೂಡಾ ಕಾರಣವಿರಬಹುದು. ಹಾಲು ಮಾರುವವರು, ಸ್ಥಳೀಯ ಡೇರಿ ಫಾರಂಗಳು ಮಾರಾಟ ಮಾಡುತ್ತಿರುವ ಹಾಲಿನಲ್ಲಿ ಗುಣಮಟ್ಟದ ಕೊರತೆ ಎದ್ದು ಕಾಣುತ್ತದೆ ಹಾಗೂ ನೀರು ಬೆರೆಸಲಾಗುತ್ತದೆ. ಆದರೆ ಅದು ಆರೋಗ್ಯಕ್ಕೆ ಹಾನಿ ಮಾಡುವುದಿಲ್ಲ. ಆದ್ದರಿಂದ ಪಶು ಆಹಾರವನ್ನು ನಿಯಂತ್ರಿಸುವ ಬಗ್ಗೆ ಚಿಂತನೆ ನಡೆದಿದೆ" ಎಂದು ಅಗರ್‌ವಾಲ್ ಹೇಳಿದ್ದಾರೆ. ಆ್ಯಂಟಿಬಯಾಟಿಕ್ ಮತ್ತು ಕೀಟನಾಶಕ ಹೊರತಾಗಿ ದ್ರವ ಹಾಲಿನಲ್ಲಿ ಅಫ್ಲೆಟಾಕ್ಸಿನ್ ಪರೀಕ್ಷೆ ನಡೆಸಿರುವುದು ಇದೇ ಮೊದಲು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News