​ಕಲ್ನಾರು ಪತ್ತೆ: ಅಮೆರಿಕ ಮಾರುಕಟ್ಟೆಯಿಂದ ಬೇಬಿಪೌಡರ್ ವಾಪಸ್ ಪಡೆದ ಜಾನ್ಸನ್ & ಜಾನ್ಸನ್

Update: 2019-10-19 03:46 GMT

ವಾಷಿಂಗ್ಟನ್, ಅ.19: ಬಹುರಾಷ್ಟ್ರೀಯ ಸಂಸ್ಥೆಯಾದ ಜಾನ್ಸನ್ & ಜಾನ್ಸನ್ ಉತ್ಪಾದಿಸುವ ಬೇಬಿಪೌಡರ್‌ನಲ್ಲಿ ಕಲ್ನಾರು ಅಂಶ ಪತ್ತೆಯಾದ ಹಿನ್ನೆಲೆಯಲ್ಲಿ ಕಂಪೆನಿ, ವಿವಾದಿತ ಉತ್ಪನ್ನವನ್ನು ಮಾರುಕಟ್ಟೆಯಿಂದ ವಾಪಸ್ ಪಡೆದಿದೆ.

ಬೇಬಿಪೌಡರ್‌ನಲ್ಲಿ ಕ್ಯಾನ್ಸರ್‌ಕಾರಕ ಕಲ್ನಾರು ಅಂಶವಿದೆ ಎಂಬ ವಾದವನ್ನು ಹಲವು ತಿಂಗಳುಗಳಿಂದ ನಿರಾಕರಿಸುತ್ತಾ ಬಂದ ಕಂಪೆನಿ ಅಮೆರಿಕದ ಫುಡ್ & ಡ್ರಗ್ ಅಡ್ಮಿನಿಸ್ಟ್ರೇಷನ್ ಸೂಚನೆಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿದೆ. ಆನ್‌ಲೈನ್ ಮಾರಾಟಗಾರರ ಬಳಿ ಖರೀದಿಸಿದ ಬೇಬಿಪೌಡರ್ ಬಾಟಲಿಯನ್ನು ಪರೀಕ್ಷೆಗೆ ಗುರಿಪಡಿಸಿದಾಗ ಈ ಮಾದರಿಯಲ್ಲಿ ಕ್ರಿಸೊಟೈಲ್ ಕಲ್ನಾರು ಅಂಶ ಪತ್ತೆಯಾಗಿದೆ ಎಂದು ಜಾನ್ಸನ್ ಆ್ಯಂಡ್ ಜಾನ್ಸನ್ ಒಪ್ಪಿಕೊಂಡಿದೆ ಎಂದು ದಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಚಿಲ್ಲರೆ ಮಾರಾಟಗಾರರೊಬ್ಬರು ಮಾರಾಟ ಮಾಡಿದ 33 ಸಾವಿರ ಬಾಟಲಿಗಳಷ್ಟು ಬೇಬಿಪೌಡರ್ ಮಾರುಕಟ್ಟೆಯಿಂದ ವಾಪಸ್ ಪಡೆಯಲಾಗಿದೆ ಎಂದು ಜೆ & ಜೆ ವಕ್ತಾರರು ಹೇಳಿದ್ದಾರೆ. ಕಂಪೆನಿ ಮಾರುಕಟ್ಟೆಯಿಂದ ಈ ವಿವಾದಿತ ಉತ್ಪನ್ನ ಹಿಂಪಡೆದಿರುವುದು ಇದೇ ಮೊದಲು. ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಉತ್ಪನ್ನವನ್ನು ಮಾರುಕಟ್ಟೆಯಿಂದ ವಾಪಸ್ ಪಡೆಯಲಾಗಿದೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.

"ಕಳೆದ 40 ವರ್ಷಗಳಲ್ಲಿ ಪದೇಪದೇ ನಡೆಸಿದ ಪರೀಕ್ಷೆಗಳಲ್ಲಿ ನಮ್ಮ ಉತ್ಪನ್ನಗಳಲ್ಲಿ ಕಲ್ನಾರು ಅಂಶ ಪತ್ತೆಯಾಗಿಲ್ಲ. ಈಗ ಆಗಿರುವ ಕಲಬೆರಕೆ ಬಗ್ಗೆ ತನಿಖೆ ನಡೆಸಲು 30 ಅಥವಾ ಹೆಚ್ಚು ದಿನಗಳು ಬೇಕಾಗಬಹುದು ಎಂದು ಸಂಸ್ಥೆ ಹೇಳಿದೆ. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಕಂಪೆನಿಯ ಷೇರುಗಳ ಮೌಲ್ಯ ಶುಕ್ರವಾರ ಶೇಕಡ 4.6ರಷ್ಟು ಕುಸಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News