ನನ್ನ ಪುತ್ರನ ಹತ್ಯೆಗೆ ಬಿಜೆಪಿ ನಾಯಕನೇ ಕಾರಣ: ಹಿಂದೂ ಸಮಾಜ ಪಕ್ಷದ ನಾಯಕ ಕಮಲೇಶ್ ತಿವಾರಿ ತಾಯಿ

Update: 2019-10-19 06:52 GMT

ಲಕ್ನೋ, ಅ.19: ಅಪರಿಚಿತ ದುಷ್ಕರ್ಮಿಗಳಿಂದ ತನ್ನ ಕಚೇರಿಯಲ್ಲೇ ಹತ್ಯೆಗೀಡಾದ ಹಿಂದೂ ಸಮಾಜ ಪಕ್ಷದ ರಾಷ್ಟ್ರೀಯ ಅಧ್ಯಕ್ಷ  ಕಮಲೇಶ್ ತಿವಾರಿ ಕೊಲೆ ಪ್ರಕರಣಕ್ಕೊಂದು ಹೊಸ ತಿರುವು ದೊರಕಿದ್ದು, ತನ್ನ ಪುತ್ರನ ಸಾವಿಗೆ  ಬಿಜೆಪಿ ನಾಯಕ ಶಿವಕುಮಾರ್ ಗುಪ್ತಾ ಕಾರಣ ಎಂದು ತಿವಾರಿಯ ತಾಯಿ ಆರೋಪಿಸಿದ್ದಾರೆ ಎಂದು www.news18.com  ವರದಿ ಮಾಡಿದೆ.

ಮರಣೋತ್ತರ ಪರೀಕ್ಷೆ ನಂತರ  ತಿವಾರಿಯ ಮೃತದೇಹವನ್ನು ಅವರ ಹುಟ್ಟೂರಾದ ಸೀತಾಪುರಕ್ಕೆ ತಂದ ನಂತರ  ಆಕೆ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

"ಲಕ್ನೋದಲ್ಲಿದ್ದಾಗ ಎಲ್ಲರೂ ನನಗೇನು ಬೇಕೆಂದು ಕೇಳಿದರು. ನನ್ನ ಪುತ್ರನ ಕಳೇಬರ ಬೇಕೆಂದು ನಾನು ಉತ್ತರಿಸಿದ್ದೆ. ನನ್ನ ಹತ್ಯೆಯಾದರೂ ಚಿಂತೆಯಿಲ್ಲ, ಪುತ್ರನ ಹತ್ಯೆಗೆ ಕಾರಣರಾದ ಯಾರನ್ನೂ ನಾನು ಬಿಡುವುದಿಲ್ಲ. ಗುಪ್ತಾನಿಗೆ ಕರೆ ಕಳುಹಿಸಿ ಆತನನ್ನು ಪ್ರಶ್ನಿಸುವಂತೆ ನಾನು ಪೊಲೀಸರಿಗೆ ಮನವಿ ಮಾಡಿದ್ದೆ. ಆದರೆ ನನ್ನ ಮಾತನ್ನು ಯಾರೂ ಕೇಳಿಲ್ಲ'' ಎಂದು ತಿವಾರಿ ತಾಯಿ ಹೇಳಿದರು.

"ಶಿವಕುಮಾರ್ ಗುಪ್ತಾ ತತ್ತೇರಿ ನಿವಾಸಿಯಾಗಿದ್ದು ಆತನ ವಿರುದ್ಧ 500ಕ್ಕೂ ಅಧಿಕ ಪ್ರಕರಣಗಳಿವೆ. ಆತ ಸ್ಥಳೀಯ ದೇವಸ್ಥಾನದ ಅಧ್ಯಕ್ಷ ಹುದ್ದೆ ಪಡೆದುಕೊಂಡಿದ್ದಾನೆ, ಕಟ್ಟಡ ನಿರ್ಮಾಣ ಕುರಿತಾದ ವಿವಾದದ ಹಿನ್ನೆಲೆಯಲ್ಲಿ ಆತ ನನ್ನ ಪುತ್ರನನ್ನು ಕೊಂದಿದ್ದಾನೆ'' ಎಂದು ತಿವಾರಿ ತಾಯಿ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News