"ಕಾಡಿನಲ್ಲಿ ಕುಡಿಯಲು ನೀರಿಲ್ಲದೆ ಒದ್ದೆ ಅಂಗಿಯನ್ನು ಹಿಂಡಿ ಬೆವರನ್ನೇ ಕುಡಿದೆವು"

Update: 2019-10-19 07:55 GMT
Photo: PTI

ಹೊಸದಿಲ್ಲಿ, ಅ.19: ಮೆಕ್ಸಿಕೋದಿಂದ ಗಡೀಪಾರುಗೊಂಡು ಶುಕ್ರವಾರ ಚಾರ್ಟರ್ಡ್ ವಿಮಾನದ ಮೂಲಕ ಹೊಸದಿಲ್ಲಿಗೆ ಆಗಮಿಸಿದ 311 ಮಂದಿ ತಮ್ಮ ಭಯಾನಕ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ತಾವು ಅನಾರೋಗ್ಯ, ಹಸಿವು ಜತೆಗೆ ದಿನಗಟ್ಟಲೆ  ಅನ್ನಾಹಾರವಿಲ್ಲದೆ ಕಾಡಿನ ಹಾದಿಯಲ್ಲಿ ಸಾಗಿದ್ದು ಹಾಗೂ ಆ ಸಂದರ್ಭ ನೀರಿಲ್ಲದೆ ತಮ್ಮ ಬೆವರಿನಿಂದ ಒದ್ದೆಯಾದ ಅಂಗಿಯನ್ನೇ ಹಿಂಡಿ  ಬೆವರನ್ನೇ ಕುಡಿದ ಕರುಣಾಜನಕ ಕಥೆಯನ್ನೂ ಅವರಲ್ಲಿ ಕೆಲವರು ವಿವರಿಸಿದ್ದಾರೆ. ಮೆಕ್ಸಿಕೋಗೆ ಅಕ್ರಮವಾಗಿ ಪ್ರವೇಶಿಸಿ ಅಲ್ಲಿಂದ ಅಮೆರಿಕಾ ಪ್ರವೇಶಿಸಲು ಯತ್ನಿಸಿದ್ದಕ್ಕೆ ಈ 311 ಮಂದಿ ಗಡೀಪಾರುಗೊಂಡಿದ್ದರು.

ಗಡೀಪಾರುಗೊಂಡ ಹೆಚ್ಚಿನವರು ಪಂಜಾಬ್ ಮತ್ತು ಹರ್ಯಾಣ ಮೂಲದವರಾಗಿದ್ದಾರೆ ಹಾಗೂ ಕೃಷಿ ಹಿನ್ನೆಲೆಯವರು. ಹೆಚ್ಚಿನವರು ನಿರುದ್ಯೋಗಿಗಳಾಗಿದ್ದರಿಂದ ಮೆಕ್ಸಿಕೋದಿಂದ ಅಮೆರಿಕಾಗೆ ಹಲವರು ಹೇಗೆ ಪ್ರಯಾಣಿಸುತ್ತಾರೆಂಬ ಕುರಿತಾದ ಯುಟ್ಯೂಬ್ ವೀಡಿಯೋಗಳನ್ನು ನೋಡಿ ತಾವು ಕೂಡ ಹಾಗೆಯೇ ಉತ್ತಮ ಜೀವನ ನಡೆಸಬಹುದೆಂಬ ಕನಸಿನೊಂದಿಗೆ ವೀಸಾ ಏಜಂಟರಿಗೆ ತಲಾ 15 ರಿಂದ 20 ಲಕ್ಷ ರೂ. ನೀಡಿದ್ದರು.

ಏಜಂಟರಿಗೆ ಹಣ ನೀಡಿದ ಬಳಿಕ ಅವರಿಗೆ ದಿಲ್ಲಿಯಿಂದ ತೆರಳಲು ವಿಮಾನದ ಟಿಕೆಟ್ ನೀಡಲಾಗಿತ್ತು. ದಿಲ್ಲಿಯಿಂದ ಇಕ್ವೆಡೋರ್ ತಲುಪಿದ ನಂತರ ಅವರನ್ನು ರಸ್ತೆ ಯಾ ವಿಮಾನ ಮೂಲಕ ಕೊಲಂಬಿಯಾ, ಬ್ರೆಜಿಲ್, ಪೆರು, ಪನಾಮ, ಕೊಸ್ಟರಿಕ, ನಿಕರಾಗುವ, ಹೊಂಡುರಾಸ್, ಗ್ವಾಟೆಮಾಲ ಹಾಗೂ ಅಂತಿಮವಾಗಿ ಮೆಕ್ಸಿಕೋಗೆ ಕರೆ ತರಲಾಗಿತ್ತು. ಅಲ್ಲಿ ಹಲವು ವಾರಗಳ ಕಾಲ ಅಗ್ಗದ ಹೋಟೆಲುಗಳಲ್ಲಿ ಅವರನ್ನಿರಿಸಲಾಗಿತ್ತಲ್ಲದೆ ಹಲವಾರು ಇಮಿಗ್ರೇಶನ್ ತಪಾಸಣೆಗೆ  ಅವರು ಒಳಪಡಿಸಲಾಗಿತ್ತೆಂದು ವಿವರಿಸಿದ್ದಾರೆ.

ಹಲವು ಸಂದರ್ಭ ಬಂದೂಕುಗಳನ್ನು ಹಿಡಿದುಕೊಂಡ ಐದಾರು ಮಂದಿ ತಮ್ಮ ಜತೆ  ಬರುತ್ತಿದ್ದರು ಎಂದು ಗಡೀಪಾರುಗೊಂಡ ಒಬ್ಬ ಯುವಕ ವಿವರಿಸಿದ್ದಾನೆ.

ಅವರು ಪನಾಮ ತಲುಪಿದ ನಂತರ ಐದರಿಂದ ಏಳು ದಿನಗಳ ಕಾಲ ದಟ್ಟಾರಣ್ಯದ ಮೂಲಕ ಸಾಗಲು ಹೇಳಲಾಯಿತು. ಹಾದಿ ತಿಳಿಯಲೆಂದು ಎಲ್ಲಾ ಕಡೆ ಪ್ಲಾಸ್ಟಿಕ್ ಚೀಲಗಳನ್ನಿರಿಸಿ ಗುರುತು ಹಾಕಲಾಗಿತ್ತು. "ನಮ್ಮಲ್ಲಿ ನೀರು ಕೂಡ ಇರಲಿಲ್ಲ. ನಾವು ನಮ್ಮ ಶರ್ಟುಗಳನ್ನು ಹಿಂಡಿ ಬೆವರನ್ನೇ ಕುಡಿದೆವು, ಆಹಾರವಿರಲಿಲ್ಲ, ನಮ್ಮಲ್ಲಿ ಹಲವರು ಅನಾರೋಗ್ಯಪೀಡಿತರಾಗಿದ್ದರು'' ಎಂದು ಕುರುಕ್ಷೇತ್ರ ವಿವಿಯ ಪದವೀಧರ ಸೋನು ಹೇಳುತ್ತಾನೆ.

ಅವರೆಲ್ಲ ಮೆಕ್ಸಿಕೋಗೆ ಬಂದ ನಂತರ ಅವರನ್ನು ಬಂಧಿಸಿ ದಿಗ್ಬಂಧನ ಶಿಬಿರಗಳಲ್ಲಿರಿಸಲಾಗಿತ್ತು. ಅಲ್ಲಿ ನೀಡಲಾಗುತ್ತಿದ್ದ ಆಹಾರ  ತೀರಾ ಕಡಿಮೆಯಾಗಿತ್ತು. ಇಲ್ಲಿ 25ರಿಂದ 30 ದಿನಗಳ ವಾಸದ ನಂತರ ಅವರನ್ನೆಲ್ಲಾ ಗಡೀಪಾರುಗೊಳಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News