ದ್ವೇಷದ ರಾಜಕಾರಣ ಬಹಳ ದಿನ ನಡೆಯದು: ಮಾಜಿ ಸಂಸದ ಕೆ.ಎಚ್.ಮುನಿಯಪ್ಪ

Update: 2019-10-19 12:24 GMT

ಬೆಂಗಳೂರು, ಅ. 19: ‘ದ್ವೇಷದ ರಾಜಕಾರಣ ಬಹಳಷ್ಟು ದಿನ ನಡೆಯುವುದಿಲ್ಲ’ ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಹಿರಿಯ ಮುಖಂಡ ಕೆ.ಎಚ್.ಮುನಿಯಪ್ಪ ಇಂದಿಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಇತ್ತೀಚೆಗೆ ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಬಂದ ಕೆಲ ಮುಖಂಡರು ಕೆಪಿಸಿಸಿ ಅಧ್ಯಕ್ಷರು ಮತ್ತು ಎಐಸಿಸಿ ಕಾರ್ಯದರ್ಶಿ ವಿರುದ್ಧ ಮಾತನಾಡಿದ್ದಾರೆ. ಉಳಿದವರು ಯಾರೂ ಪಕ್ಷ ಮತ್ತು ಮುಖಂಡರ ವಿರುದ್ಧ ಮಾತನಾಡಿಲ್ಲ. ಹೀಗಾಗಿ ಕೋಲಾರ ಜಿಲ್ಲಾ ಕಾಂಗ್ರೆಸ್ ಮುಖಂಡರ ವಿರುದ್ಧ ಕ್ರಮ ಸಲ್ಲ ಎಂದರು.

ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರೊಂದಿಗೆ ಚರ್ಚಿಸಿದ್ದೇನೆ. ಆದರೆ, ಅವರು ಪಕ್ಷದ ವಿರುದ್ಧ ಮಾತನಾಡಿದ್ದಾರೆಂದು ಅಮಾನತ್ತು ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಒಂದು ವೇಳೆ ದಂಡನೆಗೆ ಒಳಗಾದವರು ತಪ್ಪೊಪ್ಪಿಗೆ ಪತ್ರ ನೀಡಿದರೆ ಅಮಾನತು ಆದೇಶ ಹಿಂಪಡೆಯಲಾಗುವುದು ಎಂದು ತಿಳಿಸಿದ್ದಾರೆಂದು ಮುನಿಯಪ್ಪ ಹೇಳಿದರು.

ಮಾಜಿ ಸಿಎಂ ಸಿದ್ದರಾಮಯ್ಯ ಹಿರಿಯ ಮುಖಂಡರನ್ನು ಒಗ್ಗೂಡಿಸಿಕೊಂಡು ಹೋಗುತ್ತಾರೆಂಬ ವಿಚಾರ ನನಗೆ ಗೊತ್ತಿಲ್ಲ. ಅದು ಅವರ ವಿವೇಚನೆಗೆ ಬಿಟ್ಟ ವಿಷಯ. ಕಾಂಗ್ರೆಸ್ ಸಿದ್ದರಾಮಯ್ಯರನ್ನು ಸಿಎಂ ಮಾಡಿದ್ದು, ಇದೀಗ ವಿಪಕ್ಷ ನಾಯಕನನ್ನಾಗಿ ಮಾಡಿದೆ. ಹೀಗಾಗಿ ಅವರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು ಎಂದು ಹೇಳಿದರು.

ಬಂಧನ ಅಕ್ರಮ: ಡಾ.ಜಿ.ಪರಮೇಶ್ವರ್ ಮತ್ತು ಡಿ.ಕೆ.ಶಿವಕುಮಾರ್ ಅವರ ಮೇಲಿನ ಆದಾಯ ತೆರಿಗೆ ಇಲಾಖೆ ದಾಳಿ ಸಂಪೂರ್ಣ ದ್ವೇಷದ ರಾಜಕಾರಣ. ಇದು ಹೆಚ್ಚು ದಿನ ನಡೆಯದು. ಶಿವಕುಮಾರ್ ಅವರ ಬಂಧನ ಸಂಪೂರ್ಣ ಅಕ್ರಮ ಎಂದು ಮುನಿಯಪ್ಪ ಕಿಡಿಕಾರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News