ರಾಜೀವ್‌ ಗಾಂಧಿಗೆ ಭಾರತ ರತ್ನ ಕೊಟ್ಟ ಕಾಂಗ್ರೆಸ್, ಸಾವರ್ಕರ್ ಬಗ್ಗೆ ಮಾತನಾಡುವುದು ಸರಿಯಲ್ಲ

Update: 2019-10-19 13:31 GMT

ಹುಬ್ಬಳ್ಳಿ, ಅ.19: ಕಾಂಗ್ರೆಸ್‌ನವರು ರಾಜೀವ್‌ ಗಾಂಧಿಗೆ ಯಾವ ಅರ್ಹತೆಯ ಆಧಾರದ ಮೇಲೆ ದೇಶದ ಅತ್ಯುನ್ನತ ಪದವಿಯಾದ ಭಾರತರತ್ನ ನೀಡಿದರು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರಶ್ನಿಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜೀವ್ ಗಾಂಧಿಗೆ ಮೊದಲು ಭಾರತ ರತ್ನ ಕೊಟ್ಟ ಅನಂತರ ಸಂವಿಧಾನ ಶಿಲ್ಪಿಡಾ.ಬಿ.ಆರ್. ಅಂಬೇಡ್ಕರ್‌ಗೆ ನೀಡಿದರು. ಆಗ ಯಾವ ಆಧಾರದ ಮೇಲೆ ರಾಜೀವ್‌ ಗಾಂಧಿಗೆ ನೀಡಿದರು ಎಂದು ಪ್ರಶ್ನಿಸಿದರು.

ರಾಜೀವ್‌ ಗಾಂಧಿಯ ತಾತ ಜವಾಹರಲಾಲ್ ನೆಹರೂ ಮತ್ತು ತಾಯಿ ಇಂದಿರಾಗಾಂಧಿ ಪ್ರಧಾನಿಯಾಗಿದ್ದೇ ರಾಜೀವ್ ಅವರಿಗೆ ಪ್ರಧಾನಿ ಹುದ್ದೆ ಒಲಿಯಲು ಕಾರಣ. ದೇಶಕ್ಕೆ ಯಾವುದೇ ಕೊಡುಗೆ ನೀಡದಿದ್ದರೂ ಅವರಿಗೆ ಭಾರತ ರತ್ನ ಕೊಟ್ಟ ಕಾಂಗ್ರೆಸ್, ಇದೀಗ ಸಾವರ್ಕರ್ ಹೆಸರು ಪ್ರಸ್ತಾಪಿಸಿದ್ದಕ್ಕೆ ಅವಹೇಳನಕಾರಿಯಾಗಿ ಮಾತನಾಡುತ್ತಿರುವುದು ಸರಿಯಲ್ಲ ಎಂದರು.

ಅರ್ಹತೆ ಇರುವವರಿಗೆ ಭಾರತ ರತ್ನ ನೀಡದ ಕಾಂಗ್ರೆಸ್ ಸರಕಾರ ಈಗೇನಾದರೂ ಇದ್ದಿದ್ದರೆ ದಾವುದ್ ಮೆಮನ್‌ಗೂ ಕೊಡುತ್ತಿದ್ದರು. ಸಿದ್ದರಾಮಯ್ಯ ಹಿಂದೆ ವಿರೋಧ ಪಕ್ಷದಲ್ಲಿದ್ದಾಗ ಇದನ್ನು ಪ್ರಶ್ನಿಸುವ ಧೈರ್ಯ ಯಾಕೆ ತೋರಲಿಲ್ಲ ಎಂದ ಅವರು, ಸಿದ್ದರಾಮಯ್ಯ ಇತಿಹಾಸವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದರು.

ರೈತರ ಧರಣಿ ಬಗ್ಗೆ ಮಾಹಿತಿ ಇಲ್ಲ: ಮಹದಾಯಿಗೆ ಅಧಿಸೂಚನೆ ಹೊರಡಿಸುವ ಸಂಬಂಧ, ರಾಜ್ಯ ಹಾಗೂ ಕೇಂದ್ರ ಸರಕಾರಗಳು ಪ್ರಯತ್ನ ನಡೆಸುತ್ತಿವೆ. ಬೆಂಗಳೂರಿನಲ್ಲಿ ಮಹದಾಯಿ ಅಧಿಸೂಚನೆಗೆ ಆಗ್ರಹಿಸಿ ರೈತರು ನಡೆಸುತ್ತಿರುವ ಧರಣಿ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ನುಡಿದರು.

ಅನ್ನದಾಸೋಹಿ ಶಿವಕುಮಾರ ಸ್ವಾಮೀಜಿಗೆ ಭಾರತ ರತ್ನ ನೀಡುವ ಬಗ್ಗೆ ಸಂದರ್ಭ ಬಂದಾಗ ನಾವು ಸೂಕ್ತ ತೀರ್ಮಾನ ಕೈಗೊಳ್ಳುತ್ತೇವೆ.

-ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News