ದಾವಣಗೆರೆ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಎಐಟಿಯುಸಿ ಧರಣಿ

Update: 2019-10-19 18:31 GMT

ದಾವಣಗೆರೆ, ಅ.19: ಕಾರ್ಮಿಕ ರಾಜ್ಯ ವಿಮಾ ಆಸ್ಪತ್ರೆಗೆ ಅಗತ್ಯವಾಗಿ ಬೇಕಾಗಿರುವ ವೈದ್ಯಕೀಯ ಉಪಕರಣಗಳನ್ನು ಪೂರೈಕೆ ಮಾಡುವುದು, ಖಾಲಿ ಇರುವ ತಜ್ಞ ವೈದ್ಯರ ನೇಮಕಾತಿ, ವಿವಿಧ ಕಾರ್ಮಿಕರಿಗೆ ಸಹಾಯ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ನಿಟುವಳ್ಳಿ ರಸ್ತೆಯಲ್ಲಿರುವ ಇಎಸ್‍ಐ ಆಸ್ಪತ್ರೆ ಮುಂಭಾಗ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಹಾಗೂ ಶ್ರೀ ಆಂಜನೇಯ ಮಿಲ್ ಎಂಪ್ಲಾಯಿಸ್ ಯೂನಿಯನ್ ನೇತೃತ್ವದಲ್ಲಿ ಕಾರ್ಮಿಕರು ಧರಣಿ ನಡೆಸಿದರು.

ನಗರದ ಆಶೋಕ ರಸ್ತೆಯಲ್ಲಿನ ಕಾಂ.ಪಂಪಾಪತಿ ಭವನದಿಂದ ಹೊರಟ ಪ್ರತಿಭಟನಾ ಮೆರವಣಿಗೆ ಜಯದೇವ ವೃತ್ತದ ಮುಖಾಂತರ ನಿಟುವಳ್ಳಿ ರಸ್ತೆಯಲ್ಲಿ ಸಾಗಿ ನಿಟುವಳ್ಳಿಯಲ್ಲಿರುವ ಕಾರ್ಮಿಕರ ರಾಜ್ಯ ವಿಮಾ ಆಸ್ಪತ್ರೆವರೆಗೆ ತೆರಳಿ ನಂತರ ಆಸ್ಪತ್ರೆ ಮುಂಭಾಗದಲ್ಲಿ ಧರಣಿ ನಡೆಸಲಾಯಿತು.

ಈ ವೇಳೆ ಮಾತನಾಡಿದ ಕಾರ್ಮಿಕ ಮುಖಂಡ ಆವರಗೆರೆ ಹೆಚ್.ಜಿ.ಉಮೇಶ್, ದಾವಣಗೆರೆ, ಶಿವಮೊಗ್ಗ, ಹಾವೇರಿ, ಚಿತ್ರದುರ್ಗ ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳಲ್ಲಿ ಕಾರ್ಮಿಕ ವರ್ಗ ವಿವಿಧ ಕಾಯಿಲೆಗಳ ಚಿಕಿತ್ಸೆಗಾಗಿ ದಾವಣಗೆರೆಯ ನಿಟುವಳ್ಳಿಯಲ್ಲಿನ ಕಾರ್ಮಿಕರ ರಾಜ್ಯ ವಿಮಾ ಆಸ್ಪತ್ರೆಗೆ ಬಂದು ದಾಖಲಾಗುತ್ತಾರೆ. ಮಾತ್ರವಲ್ಲ ಸಾವಿರಾರು ಕಾರ್ಮಿಕರು ಹೊರ ರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಇಎಸ್‍ಐ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯರು ಇಲ್ಲಿನ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ರೋಗಿಗಳಿಗೆ ಉತ್ತಮ ಸೇವೆ ನೀಡುತ್ತಿಲ್ಲ. ಬದಲಿಗೆ ಮಾತ್ರೆ, ಔಷಧಿ ತರಲು, ಸ್ಕ್ಯಾನ್, ರಕ್ತ ಪರೀಕ್ಷೆ, ಎಂಆರ್‍ಐ, ಎಕೋ, ಎಕ್ಸರೇ ಸೇರಿದಂತೆ ಇತರೆ ಪರೀಕ್ಷೆಗೆ ಖಾಸಗಿಯಾಗಿ ಮಾಡಿಸಿಕೊಂಡು ಬರಲು ಹೇಳುತ್ತಾರೆ ಎಂದು ದೂರಿದರು.

ಇದಲ್ಲದೇ ಸ್ಥಳೀಯವಾಗಿ ಸೌಲಭ್ಯವಿಲ್ಲದ ಕಾಯಿಲೆಗಳಿಗೆ ಹೆಚ್ಚಿನ ಚಿಕಿತ್ಸೆ ಪಡೆಯಲು ಇಎಸ್‍ಐ ಇಲಾಖೆಗೆ ಹೊಂದಾಣಿಕೆಯಾಗಿರುವ ಖಾಸಗಿ ಆಸ್ಪತ್ರೆಗೆ ತಲಾನದಾನ ಪತ್ರ ನೀಡಿ ಕಳುಹಿಸುತ್ತಿದ್ದಾರೆ. ಈ ರೀತಿ ಚಿಕಿತ್ಸೆಗೆ ದಾಖಲಾದ ರೋಗಿಗಳಿಗೆ ಚಿಕಿತ್ಸೆ ನೀಡುವ ಖಾಸಗಿಯವರು ಹೆಚ್ಚಿನ ದರದಲ್ಲಿ ಇಲಾಖೆಯಿಂದ ಹಣ ಪಡೆದುಕೊಳ್ಳುತ್ತಿದ್ದಾರೆ. ಇದರಿಂದಾಗಿ ಕಾರ್ಮಿಕರ ರಾಜ್ಯ ವಿಮಾ ಯೋಜನೆಗೆ ಮಾತ್ರವಲ್ಲದೇ ಕಾರ್ಮಿಕರ ಹಣಕ್ಕೆ ಅನ್ಯಾಯ ಮಾಡಿದಂತಾಗುತ್ತಿದೆ. ಕಾರಣ ಯೋಜನೆ ಪ್ರಾದೇಶಿಕ ನಿರ್ದೇಶಕರು ಈ ಬಗ್ಗೆ ಗಮನ ಹರಿಸುವಂತೆ ಒತ್ತಾಯಿಸಿದರು.

ಕಳೆದ ಹಲವಾರು ವರ್ಷಗಳಿಂದ ಆಸ್ಪತ್ರೆ ಅಭಿವೃದ್ದಿ ಸಮಿತಿಗೆ ಸ್ಥಳೀಯ ಕಾರ್ಮಿಕ ಸದಸ್ಯರನ್ನು ನೇಮಕ ಮಾಡಿಕೊಂಡಿಲ್ಲ. ಅಲ್ಲದೆ, ಹಲವಾರು ವರ್ಷಗಳಿಂದ ಸಭೆಯನ್ನೇ ಕರೆದಿಲ್ಲ. ಪರಿಸ್ಥಿತಿ ಈ ರೀತಿಯಿಂದ ಕಾರ್ಮಿಕರ ಸಮಸ್ಯೆ ಕೇಳುವವರಿಲ್ಲದಂತಾಗಿದೆ. ಕಾರಣ ಈ ಕೂಡಲೇ ಸ್ಥಳೀಯ ಕಾರ್ಮಿಕರನ್ನು ಸದಸ್ಯರನ್ನಾಗಿ ನೇಮಿಸಬೇಕು. ಸಭೆ ಕರೆಯಬೇಕು ಎಂದು ಆಗ್ರಹಿಸಿದರು.

ಇದಲ್ಲದೇ ತಜ್ಞ ವೈದ್ಯರಾದ ಜನರಲ್ ಸರ್ಜರಿ, ಕಣ್ಣಿನ ತಜ್ಞರು, ಎಕ್ಸರೇ ತಜ್ಞರು, ಮಕ್ಕಳ ತಜ್ಞರು, ನುರಿತ ತಜ್ಞರು, ಅರವಳಿಕೆ ತಜ್ಞರು, ರಕ್ತ ಪರೀಕ್ಷಾ ಪ್ರಯೋಗಾಲಯದ ತಜ್ಞರನ್ನು ನೇಮಿಸಬೇಕು. ಡಯಾಲಿಸಿಸ್, ಅಲ್ಟ್ರಾಸೌಂಡ್, ಡಿಜಿಟಲ್ ಎಕ್ಸರೇ ಇಲ್ಲದ ಕಾರಣ ವಿವಿಧ ಕಡೆಗಳಿಂದ ಬರುವ ರೋಗಿಗಳಿಗೆ ತೊಂದರೆಯಾಗುತ್ತಿದೆ. ಕಾರಣ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು, ಪ್ರಾದೇಶಿಕ ನಿರ್ದೇಶಕರು ಈ ಬಗ್ಗೆ ಗಮನ ಹರಿಸಬೇಕು. ವೈದ್ಯಕೀಯ ಸೌಲಭ್ಯ ಒದಗಿಸಬೇಕು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಉಗ್ರ ಚಳುವಳಿ ನಡೆಸಲಾಗುವುದು. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳೇ ಹೊಣೆಗಾರರಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ದಾವಣಗೆರೆ ಜಿಲ್ಲಾ ಎಐಟಿಯುಸಿ ಹಾಗೂ ಶ್ರೀ ಆಂಜನೇಯ ಮಿಲ್ ಎಂಪ್ಲಾಯಿಸ್ ಯೂನಿಯನ್ ಎಸ್.ಜಯಪ್ಪ, ಶಿವಕುಮಾರ್, ಕೃಷ್ಣಮೂರ್ತಿ, ಎಲ್.ರಮೇಶ್, ಚಿತ್ರಪ್ಪ, ಅಬ್ದುಲ್ ಅಜೀಜ್, ಶೇಷಮ್ಮ, ಕೃಷ್ಣಮೂರ್ತಿ, ಭೈರಮ್ಮ, ಮಂಜಮ್ಮ ಸೇರಿದಂತೆ ಕಾರ್ಮಿಕರು, ಮಹಿಳೆಯರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News