ಬೆಳೆ ಸಮೀಕ್ಷೆಯನ್ನು ತ್ವರಿತಗತಿಯಲ್ಲಿ ಕೈಗೊಳ್ಳಿ: ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸೂಚನೆ

Update: 2019-10-19 18:37 GMT

ಚಿಕ್ಕಮಗಳೂರು, ಅ.19: ಜಿಲ್ಲೆಯಲ್ಲಿ ಅತಿವೃಷ್ಟಿ ಸಮೀಕ್ಷೆ ಸಮರ್ಪಕವಾಗಿ ಕೈಗೊಂಡಿಲ್ಲ ಎಂಬ ಆರೋಪಗಳು ಕೇಳಿ ಬಂದಿದೆ. ಆದ್ದರಿಂದ 2ನೇ ಹಂತದ ಬೆಳೆ ಸಮೀಕ್ಷೆಯನ್ನು ಎಲ್ಲ ತಾಲೂಕುಗಳಲ್ಲೂ ಸಮರ್ಪಕವಾಗಿ, ತ್ವರಿತಗತಿಯಲ್ಲಿ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ರಾಜೀವ್ ಚಾವ್ಲಾ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನೆರೆ ಪರಿಹಾರ ಮತ್ತು ಪುನರ್ವಸತಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಬೆಳೆ ಸಮೀಕ್ಷೆ ಕಾರ್ಯವು ಶೇ.50ರಷ್ಟು ಮಾತ್ರ ಮುಕ್ತಾಯಗೊಂಡಿದೆ. ಮೂಡಿಗೆರೆ, ಎನ್.ಆರ್.ಪುರ ತಾಲೂಕುಗಳಲ್ಲಿ ಮಂದಗತಿಯಲ್ಲಿ ನಡೆಯುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಇರುವ ಸಮಸ್ಯೆಗಳನ್ನು ತಿಳಿದು ಜಿಲ್ಲಾಧಿಕಾರಿಗಳ ಮೂಲಕ ಸರ್ವೆ ಇಲಾಖೆಯ ಮುಖ್ಯ ಅಧಿಕಾರಿಗಳಿಗೆ ಪತ್ರಗಳನ್ನು ರವಾನಿಸಬೇಕು ಎಂದು ಡಿ.ಡಿ.ಎಲ್.ಆರ್ ಅಧಿಕಾರಿಗೆ ಸೂಚಿಸಿದರು.

ಬೆಳೆ ಸಮೀಕ್ಷೆ ಸರ್ವೆ ಮಾಡುವಂತಹ ಪಿ.ಆರ್.ಒಗಳು ಬೆಳೆ ಸಮೀಕ್ಷೆ ಮಾಡುವಂತಹ ಸಂದರ್ಭದಲ್ಲಿ ಎಚ್ಚರ ವಹಿಸಿ ಮಾಡುವಂತೆ ಗ್ರಾಮ ಲೆಕ್ಕಿಗರಿಗೆ ತಿಳಿಸಬೇಕು ಎಂದ ಅವರು, ಬೆಳೆ ಸಮೀಕ್ಷೆ ದತ್ತಾಂಶವನ್ನು ಎಲ್ಲಾ ಗ್ರಾಮ ಲೆಕ್ಕಿಗರು ದೃಢೀಕರಿಸುವಾಗ ಕೇಸ್ ಒನ್ ಐಪಿ ಅಡ್ರೆಸ್‍ನಲ್ಲಿಯೇ ಮಾಡುವಂತೆ ತಹಶೀಲ್ದಾರರು ಗ್ರಾಮ ಲೆಕ್ಕಿಗರಿಗೆ ಆದೇಶ ಹೊರಡಿಸಬೇಕು ಎಂದು ಸೂಚಿಸಿದರು. ಹಲವು ಜಿಲ್ಲೆಗಳಲ್ಲಿ ಬೆಳೆ ಸಮೀಕ್ಷೆ ಮಾಡುವಂತಹ ಸಂದರ್ಭದಲ್ಲಿ ಪಿ.ಆರ್.ಒಗಳು ತಪ್ಪಾಗಿ ಬೆಳೆಗಳನ್ನು ನಮೂದಿಸಿ ಹಲವು ತೊಂದರೆಗಳಿಗೆ ಎಡೆ ಮಾಡಿಕೊಟ್ಟಿದ್ದು, ಜಿಲ್ಲೆಯಲ್ಲಿ ಇಂತಹ ಪರಿಸ್ಥಿತಿ ನಿರ್ಮಾಣವಾಗದಂತೆ ಬೆಳೆ ಸಮೀಕ್ಷೆ ಮಾಡಲು ಸೂಚಿಸುವುದರ ಜೊತೆಗೆ ರೈತರಿಗೆ ಮುಂದೆ ಬೆಳೆ ವಿಮೆ ಸಿಗುವಂತೆ ಎಚ್ಚರ ವಹಿಸಿ ಸಮೀಕ್ಷೆ ಮಾಡಬೇಕು ಎಂದರು.

ಸರಕಾರ ಜಿಲ್ಲೆಯ ನೆರೆ ಪೀಡಿತ ಸಂತ್ರಸ್ತರ ಮನೆಯ ಹಾನಿ ಪರಿಹಾರಕ್ಕಾಗಿ ಜಿಲ್ಲೆಗೆ ಆಗಸ್ಟ್ ನಿಂದ 5 ಕೋಟಿ ರೂ. ರಸ್ತೆ ಹಾಗೂ ಸೇತುವೆಗಳ ತುರ್ತು ದುರಸ್ತಿ ಪುನಃಶ್ಚೇತನ ಕಾಮಗಾರಿಗಳಿಗೆ 31.12 ಕೋಟಿ, ರೂ. ಮೂಲಭೂತ ಸೌಲಭ್ಯಗಳಾದ ಆಸ್ಪತ್ರೆ, ಶಾಲೆ, ಕಾಲೇಜು, ಅಂಗನವಾಡಿ, ಸಾರ್ವಜನಿಕ ಕಟ್ಟಡಗಳ ದುರಸ್ತಿ, ಪುರ್ನಶ್ಚೇತನ ಕಾಮಗಾರಿಗಳಿಗೆ 20 ಕೋಟಿ ರೂ. ಹಾಗೂ ಮನೆಗಳ ಹಾನಿ ಪರಿಹಾರಕ್ಕಾಗಿ 25 ಕೋಟಿ ರೂ. ಸೇರಿದಂತೆ ಒಟ್ಟು ರೂ. 81.12 ಕೋಟಿ ರೂ. ಜಿಲ್ಲೆಗೆ ಬಿಡುಗಡೆಯಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ನೆರೆಯಿಂದ ಮನೆ ಹಾನಿಗೆ ಸಂಬಂಧಿಸಿದ ಸಂತ್ರಸ್ತರಿಗೆ ನೇರವಾಗಿ ಅವರ ಖಾತೆಗೆ ಅಗತ್ಯ ಸಾಮಾಗ್ರಿಗಳ ಬಳಕೆಗಾಗಿ 1,125 ನಿರಾಶ್ರಿತರಿಗೆ 10,000 ರೂ. ನಂತೆ 112.50 ಲಕ್ಷ ರೂ. ಅನ್ನು ಪರಿಹಾರವಾಗಿ ನೀಡಲಾಗಿದ್ದು, ಚಿಕ್ಕಮಗಳೂರು, ಮೂಡಿಗೆರೆ, ಎನ್.ಆರ್.ಪುರ ತಾಲೂಕಿನ 1098 ನೆರೆ ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳ ಕಿಟ್‍ಗಳನ್ನು ನೀಡಲಾಗಿದೆ ಎಂದು ರಾಜೀವ್ ಚಾವ್ಲಾ ಎಂದರು.

ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದರೂ ಕಡೂರು ತಾಲೂಕಿನ 23 ಗ್ರಾಮಗಳಿಗೆ ಹಾಗೂ ಚಿಕ್ಕಮಗಳೂರು ತಾಲೂಕಿನ 14 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರಿನ ಸರಬರಾಜು ಮಾಡಲಾಗುತ್ತಿದೆ. ಆದ್ದರಿಂದ ತಹಶೀಲ್ದಾರರು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಈ ಗ್ರಾಮಗಳಿಗೆ ಭೇಟಿ ನೀಡಿ ನೀರು ಸರಬರಾಜು ಮಾಡುವುದು ಅವಶ್ಯಕವಾಗಿದೆಯೇ ಎನ್ನುವುದನ್ನು ಪರಿಶೀಲಿಸಿ ಅಗತ್ಯವಿಲ್ಲದಕಡೆ ನೀರು ಸರಬರಾಜು ಮಾಡುವುದು ಸ್ಥಗಿತಗೊಳಿಸಬೇಕು ಎಂದು ಅಧಿಕಾರಿಗಳಿಗೆ ಇದೇ ವೇಳೆ ಅವರು ಸೂಚಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಅಪರ ಜಿಲ್ಲಾಧಿಕಾರಿ ಡಾ.ಕುಮಾರ್, ಚಿಕ್ಕಮಗಳೂರು ಉಪ ವಿಭಾಗಾಧಿಕಾರಿ ಶಿವಕುಮಾರ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ರಾಜಗೋಪಾಲ್ ಸೇರಿದಂತೆ ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.

ಸಕಾಲ ಅನುಷ್ಠಾನಕ್ಕೆ ನಿರ್ಲಕ್ಷ್ಯ ವಹಿಸಿದರೆ ನೋಟಿಸ್: ಸಕಾಲ ಯೋಜನೆಯಲ್ಲಿ ಸ್ವೀಕೃತವಾಗುವ ಅರ್ಜಿಗಳ ವಿಲೇವಾರಿಯಲ್ಲಿ ಚಿಕ್ಕಮಗಳೂರು ಜಿಲ್ಲೆಯು ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ ಎಂದು ಹರ್ಷ ವ್ಯಕ್ತಡಿಸಿದ ರಾಜೀವ್ ಚಾವ್ಲಾ, ಸಕಾಲ ಯೋಜನೆಯಡಿ ಬರುವ ಅರ್ಜಿಗಳನ್ನು ಸಕಾಲ ಪೋರ್ಟಲ್‍ನಲ್ಲಿಯೇ ನೊಂದಣಿ ಮಾಡಿಕೊಳ್ಳಬೇಕು. ಸಕಾಲ ಪೋರ್ಟಲ್‍ನಲ್ಲಿಯೇ ಅರ್ಜಿಗಳು ನೊಂದಣಿ ಮಾಡಿಕೊಳ್ಳದೇ ಬೇರೆ (ಬೈಪಾಸ್) ಮಾರ್ಗದಲ್ಲಿ ನೋಂದಾಯಿಸುತ್ತಿರುವುದರಿಂದ ಯೋಜನೆಯ ಪ್ರಗತಿಯಲ್ಲಿ ಜಿಲ್ಲೆ ಹಿಂದುಳಿಯಲು ಪ್ರಮುಖ ಕಾರಣವಾಗುತ್ತದೆ. ಆದ್ದರಿಂದ ಎಲ್ಲಾ ಗ್ರಾಮ ಪಂಚಾಯತ್ ಸಕಾಲ ಯೋಜನೆಯ ಮಾಹಿತಿಯ ನೋಟಿಸ್‍ನ್ನು ಪ್ರತಿಯೊಂದು ಸರಕಾರಿ ಕಚೇರಿಗಳ ನೋಟಿಸ್ ಬೋರ್ಡ್‍ಗಳಲ್ಲಿ ಅಂಟಿಸಬೇಕು. ವಿವಿಧ ಇಲಾಖೆಯ ಅಧಿಕಾರಿಗಳನ್ನು ಸಕಾಲ ಯೋಜನೆಯ ಅನುಷ್ಠಾನಕ್ಕಾಗಿ ನೇಮಿಸಲಾಗಿದೆ. ಅವರಕಾರ್ಯ ಸಾಧನೆ ಶೂನ್ಯವಾಗಿದ್ದು, ಯೋಜನೆಯಡಿ ನೋಂದಾಯಿತ ಅಧಿಕಾರಿಗಳು ಸೂಕ್ತವಾಗಿ ಕಾರ್ಯನಿರ್ವಹಿಸಬೇಕು. ತಪ್ಪಿದ್ದಲ್ಲಿ ಸಕಾಲ ಪೋರ್ಟಲ್ ಮೂಲಕ ಶೋಕಾಸ್ ನೋಟಿಸ್ ನೀಡಲಾಗುತ್ತದೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News