ಪ್ರವಾಹ ಸಂತ್ರಸ್ತರ ಬಗ್ಗೆ ಹೇಳಿಕೆ: ಪಕ್ಷದ ನೊಟೀಸ್ ಗೆ ಉತ್ತರಿಸಿ ಬಿಜೆಪಿ ಶಾಸಕ ಯತ್ನಾಳ್ ಹೇಳಿದ್ದೇನು ?

Update: 2019-10-20 14:37 GMT

ವಿಜಯಪುರ, ಅ.20: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸಲಹೆ ಮೇರೆಗೆ ಪಕ್ಷ ನನಗೆ ನೀಡಿದ್ದ ನೋಟಿಸ್‌ಗೆ ಐದು ದಿನಗಳ ಹಿಂದೆಯೇ ಉತ್ತರಿಸಿದ್ದೇನೆ. ಮುಂದಿನದು ಪಕ್ಷಕ್ಕೆ ಬಿಟ್ಟದ್ದು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ಪಷ್ಟಪಡಿಸಿದ್ದಾರೆ. 

ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಕೇಂದ್ರ ಶಿಸ್ತು ಸಮಿತಿ ನೀಡಿದ್ದ ನೋಟಿಸ್‌ಗೆ ಐದು ದಿನಗಳ ಹಿಂದೆ ಉತ್ತರ ನೀಡಿದ್ದೇನೆ. ನದಿಗಳ ಪ್ರವಾಹದಿಂದ ಬದುಕು ಕಳೆದುಕೊಂಡಿದ್ದ ಸಂತ್ರಸ್ತರ ನೋವಿಗೆ ಧ್ವನಿಯಾಗಿದ್ದೇನೆಯೇ ಹೊರತು ಪಕ್ಷಕ್ಕೆ ಮುಜುಗರ ಅಥವಾ ಹಾನಿಯಾಗುವಂಥ ಯಾವುದೇ ಹೇಳಿಕೆ ನೀಡಿಲ್ಲ ಎಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದೇನೆ ಎಂದರು.

ಈ ವಿಷಯದಲ್ಲಿ ಪೇಜಾವರ ಶ್ರೀಗಳು, ಶ್ರೀಶೈಲ ಜಗದ್ಗುರುಗಳು, ಕೂಡಲಸಂಗಮ ಶ್ರೀಗಳು, ಮೂರುಸಾವಿರ ಮಠದ ಶ್ರೀಗಳು ನನ್ನೊಂದಿಗೆ ಮಾತನಾಡಿ, ನೀವು ಕರ್ನಾಟಕದ ಜನತೆಯ ಅದರಲ್ಲೂ ಪ್ರವಾಹ ಸಂತ್ರಸ್ತರ ಧ್ವನಿಯಾಗಿದ್ದೀರಿ, ನಾವು ನಿಮ್ಮ ಜೊತೆಗೆ ಇದ್ದೇವೆ ಎಂದು ಭರವಸೆ ನೀಡಿದ್ದಾರೆ ಎಂದು ಯತ್ನಾಳ್ ವಿವರಿಸಿದರು.

ಹಿಂದೆ ಅಟಲ್ ಬಿಹಾರಿ ವಾಜಪೇಯಿ ಸರಕಾರ ಇದ್ದಾಗ, ಆಲಮಟ್ಟಿ ವಿಚಾರವಾಗಿ ಧ್ವನಿ ಎತ್ತಿದ್ದೆ ಆಗಲೂ ಕೆಲವರು ಸಹ ಪಕ್ಷ ವಿರೋಧಿ ಎಂದು ಗುಲ್ಲೆಬ್ಬಿಸಿದ್ದರು. ಆದರೆ, ಅಟಲ್ ಬಿಹಾರಿ ವಾಜಪೇಯಿ ಅವರು ನನ್ನ ನಡೆಯನ್ನು ಪ್ರಶಂಸಿದ್ದರು. ಜೊತೆಗೆ ಮುಂದಿನ ಮೂರೇ ತಿಂಗಳಲ್ಲಿ ನನ್ನನ್ನು ಕೇಂದ್ರದ ಮಂತ್ರಿ ಮಾಡಿದ್ದರು ಎಂದು ಸ್ಮರಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News