ಸಾವರ್ಕರ್ ಬಗ್ಗೆ ಸತ್ಯ ಹೇಳಿದ್ದಕ್ಕೆ ಬಿಜೆಪಿಯವರಿಗೆ ತಡೆಯಲಾಗುತ್ತಿಲ್ಲ: ಸಿದ್ದರಾಮಯ್ಯ

Update: 2019-10-20 15:22 GMT

ಮೈಸೂರು,ಅ.20: ಗಾಂಧಿ ಕೊಲೆ ಪ್ರಕರಣದಲ್ಲಿ ಸಾವರ್ಕರ್ ಆರೋಪಿಯಾಗಿದ್ದರು ಎಂಬ ಸತ್ಯವನ್ನು ಹೇಳಿದ್ದಕ್ಕೆ ಬಿಜೆಪಿಯವರಿಗೆ ತಡೆದುಕೊಳ್ಳಲು ಆಗುತ್ತಿಲ್ಲ ಎಂದು ಮಾಜಿ ಸಿಎಂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದರು.

ರವಿವಾರ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಸತ್ಯ ಹೇಳಿದ್ದಕ್ಕೆ ಎಲ್ಲರೂ ನನ್ನ ಮೇಲೆ ಮುಗಿಬಿದ್ದಿದ್ದಾರೆ. ಗಾಂಧಿ ಕೊಲೆ ಆರೋಪಿಗೆ ಭಾರತ ರತ್ನ ಬೇಡ ಎಂದು ಹೇಳಿದ್ದೆ. ಅದಕ್ಕೆ ಎಲ್ಲರೂ ನನ್ನ ಮೇಲೆ ತಿರುಗಿ ಬಿದ್ದಿದ್ದಾರೆ. ನಾನೇನು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದರು.

ಸಿದ್ದಗಂಗಾ ಶ್ರೀಗೆ ಭಾರತ ರತ್ನ ಕೊಡಬೇಕೆಂದು ನಾವೆಲ್ಲರೂ ಒತ್ತಾಯ ಮಾಡಿದ್ದೆವು. ಆದರೆ ಸಾವರ್ಕರ್ ಅವರಿಗೆ ಕೊಡಲು ಮುಂದಾಗಿದ್ದಾರೆ. ಅವರೊಬ್ಬ ಹಿಂದೂ ಹೆಸರಿನಲ್ಲಿ ಕೋಮುವಾದ ಸೃಷ್ಟಿ ಮಾಡಿದ ವ್ಯಕ್ತಿ. ಹಾಗೆಯೇ, ಗಾಂಧಿ ಕೊಲೆಯ ಪ್ರಮುಖ ಆರೋಪಿ. ನಂತರ ಸುಪ್ರೀಂ ಕೋರ್ಟ್‍ನಲ್ಲಿ ಆರೋಪ ಮುಕ್ತಗೊಂಡಿದ್ದಾರೆ. ಆದರೂ ಅವರಿಗೆ ಕೊಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಸಚಿವ ಸಿ.ಟಿ.ರವಿ ಒಬ್ಬ ಯಕಶ್ಚಿತ್ ರಾಜಕಾರಣಿ. ಅವನ ಬಗ್ಗೆ ಮಾತನಾಡುವುದಿಲ್ಲ. ನಾನು ಹಿಂದೂಗಳಿಗೆ ಭಾರತ ರತ್ನ ಕೊಡಬೇಡಿ ಎಂದು ಹೇಳಿಲ್ಲ. ನಾನೂ ಒಬ್ಬ ಹಿಂದೂನೆ. ಆದರೆ ಹಿಂದೂ ಹೆಸರಿನಲ್ಲಿ ಕೋಮುವಾದ ಬಿತ್ತುವವರಿಗೆ ಭಾರತ ರತ್ನ ಬೇಡ ಎಂದು ಹೇಳಿದ್ದೆ ಎಂದರು.

ನಾನು ಮುಖ್ಯಮಂತ್ರಿಯಾಗಿದ್ದಾಗ ಎಲ್ಲಾ ಮಾಧ್ಯಮದವರಿಗೂ ಮುಕ್ತ ಅವಕಾಶ ನೀಡಿದ್ದೆ. ಆದರೆ ಈಗ ಅವರು ಸುಳ್ಳು ಹೇಳೊದು ಯಾರಿಗೂ ಗೊತ್ತಾಗಬಾರದು ಅಂತ ಮಾಧ್ಯಮದವರನ್ನು ಹೊರಗೆ ಹಾಕಿದ್ದಾರೆ. ಆ ಸ್ಪೀಕರ್ ಗೆ ಹೇಳಿ ನಿಮ್ಮನ್ನೆಲ್ಲ ಹೊರಗೆ ಹಾಕಿಸಿದ್ದಾರೆ. ಅವರು ನಿಮ್ಮನ್ನು ಹೊರಗೆ ಹಾಕಿಸಿದರೂ ನಿಮಗೆ ಕೋಪ ಬಂದಿಲ್ಲ. ಈಗಲೂ ಅವರ ಪರವಾಗಿ ತೋರಿಸುತ್ತೀರಿ ಎಂದು ಹೇಳಿದರು.

ನಾನು ಮತ್ತೆ ಮುಖ್ಯಮಂತ್ರಿ ಆಗುತ್ತೇನೆ ಎಂದು ಕನಸು ಕಾಣುವವನಲ್ಲ. ರಾಜಕೀಯ ಹೇಗೆ ಹೋಗುತ್ತೊ ಹಾಗೆ ಹೋಗುತ್ತೇನೆ. ಜನ ಆಶೀರ್ವಾದ ಮಾಡಿದರೆ ಮತ್ತೆ ಅಧಿಕಾರಕ್ಕೆ ಬರುತ್ತೇನೆ. ಇಲ್ಲದಿದ್ದರೆ ಮನೆಯಲ್ಲೇ ಕೂರುತ್ತೇನೆ. ಮಾಧ್ಯಮದವರ ಜೊತೆ ಮಾತನಾಡುತ್ತಾ ಆರಾಮಾಗಿ ಇರುತ್ತೇನೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News