‘ಹಿಲರಿ ಕ್ಲಿಂಟನ್‌ಗೆ ಹುಚ್ಚು ಹಿಡಿದಿದೆ’ ಎಂದ ಟ್ರಂಪ್ !

Update: 2019-10-20 16:14 GMT

ವಾಶಿಂಗ್ಟನ್, ಅ.20: ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಡೆಮಾಕ್ರಾಟಿಕ್ ಪಕ್ಷದ ಸ್ಪರ್ಧಾಕಾಂಕ್ಷಿಯಾದ ತುಳಸಿ ಗಬ್ಬಾರ್ಡ್ ಹಾಗೂ ಗ್ರೀನ್ ಪಾರ್ಟಿಯ ಮಾಜಿ ಅಭ್ಯರ್ಥಿ ಜಿಲ್ ಸ್ಟೈನ್ ಅವರನ್ನು ರಶ್ಯದ ಆಸ್ತಿಗಳೆಂದು ಆಪಾದಿಸಿರುವ ಹಿಲರಿ ಕ್ಲಿಂಟನ್‌ಗೆ ಹುಚ್ಚು ಹಿಡಿದಿದೆಯೆಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಟುವಾಗಿ ಟೀಕಿಸಿದ್ದಾರೆ.

ಪೊಡ್‌ ಕಾಸ್ಟ್‌ಗೆ ಗುರುವಾರ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಹಿಲರಿ ಕ್ಲಿಂಟನ್, 2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಅವರ ವಿಜಯವನ್ನು ಖಾತರಿಪಡಿಸುವುದಕ್ಕಾಗಿ ಡೆಮಾಕ್ರಾಟಿಕ್ ಪಕ್ಷದ ಮತವನ್ನು ಒಡೆಯಲು ಮೂರನೆ ಅಭ್ಯರ್ಥಿಯಾಗಿ ಗ್ರೀನ್‌ ಪಾರ್ಟಿಯ ಸ್ಟೈನ್ ಅವರನ್ನು ರಶ್ಯವು ತಯಾರುಗೊಳಿಸಿತ್ತು . ಈಗ 2020ರ ಅಧ್ಯಕ್ಷೀಯ ಚುನಾವಣೆಯಲ್ಲಿಯೂ ಅದು, ಇದೇ ತಂತ್ರವನ್ನು ಅನುಸರಿಸುತ್ತಿದೆ. ಡೆಮಾಕ್ರಾಟಿಕ್ ಪಕ್ಷದ ಮತಗಳನ್ನು ಹಂಚಿಹೋಗುವಂತೆ ಮಾಡಲು ಅದು ತುಳಸಿ ಗಬ್ಬಾರ್ಡ್ ಅವರಿಗೆ ಡೆಮಾಕ್ರಾಟಿಕ್ ಟಿಕೆಟ್ ದೊರಕುವಂತೆ ಮಾಡಲು ಪ್ರಯತ್ನಿಸುತ್ತಿದೆ. ಹಾಗೂ ಆ ಮೂಲಕ ರಿಪಬ್ಲಿಕ್ ಪಕ್ಷದ ಟ್ರಂಪ್ ಅವರ ಪುನಾರಾಯ್ಕೆಯಾಗುವಂತೆ ನೋಡಿಕೊಳ್ಳುತ್ತಿದೆ ಎಂದು ಹೇಳಿದ್ದರು. ಹಿಲರಿ ಅವರ ಆರೋಪಕ್ಕೆ ಕಟುವಾಗಿ ಪ್ರತಿಕ್ರಿಯಿಸಿರುವ ಟ್ರಂಪ್ ‘ಹಿಲರಿ ಅವರಿಗೆ ಹುಚ್ಚು ಹಿಡಿದಿದೆ; ಎಂದು ಟ್ವೀಟ್ ಮಾಡಿದ್ದಾರೆ.

‘‘ಕುಟಿಲತನದ ಹಿಲರಿ ಮತ್ತೊಮ್ಮೆ ಆರೋಪ ಮಾಡಿದ್ದಾರೆ. ಕಾಂಗ್ರೆಸ್ ಸಂಸದೆ ತುಳಸಿ ಗಬ್ಬಾರ್ಡ್ ರಶ್ಯಕ್ಕೆ ಅಚ್ಚುಮೆಚ್ಚು ಹಾಗೂ ಜಿಲ್ ಸ್ಟೈನ್ ರಶ್ಯದ ಆಸ್ತಿ ಎಂದು ಎಂದು ಆಕೆ ಕರೆದಿದ್ದಾರೆ. ನೀವು ಕೇಳಿರುವ ಹಾಗೆ, ಆಕೆಯು ನನ್ನನ್ನು ಕೂಡಾ ರಶ್ಯದ ಅತಿ ದೊಡ್ಡ ಪ್ರೇಮಿಯೆಂದು ಕರೆದಿದ್ದರು. (ವಾಸ್ತವಿಕವಾಗಿ, ನಾನು ರಶ್ಯನ್ ಜನತೆಯನ್ನು ಮೆಚ್ಚುತ್ತೇನೆ, ನಾನು ಎಲ್ಲಾ ಜನರನ್ನು ಇಷ್ಟಪಡುತ್ತೇನೆ)’’ ಎಂದು ಟ್ರಂಪ್ ಟ್ವೀಟಿಸಿದ್ದಾರೆ.

38 ವರ್ಷದ ತುಳಸಿ ಗಬ್ಬಾರ್ಡ್ ಅಮೆರಿಕ ಕಾಂಗ್ರೆಸ್‌ನ ಪ್ರಪ್ರಥಮ ಹಿಂದೂ ಸಂಸದೆಯಾಗಿದ್ದಾರೆ. ತಾನು 2020ರ ಅಮೆರಿಕ ಅಧ್ಯಕ್ಷೀಯ ಚುನಾಣೆಗೆ ಸ್ಪರ್ಧಿಸುವುದಾಗಿ ಆಕೆ ಘೋಷಿಸಿದ್ದರು. ತನ್ನನ್ನು ರಶ್ಯ ಬೆಂಬಲಿತಳು ಎಂದು ಆಪಾದಿಸಿ ಹಿಲರಿ ಕ್ಲಿಂಟನ್ ಅವರನ್ನು ತುಳಸಿ ಗಬ್ಬಾರ್ಡ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

‘‘ಭಲೇ!, ಧನ್ಯವಾದಗಳು ಹಿಲರಿ ಕ್ಲಿಂಟನ್ ಅವರಿಗೆ, ಯುದ್ಧದಾಹಿಗಳ ರಾಣಿ, ಹಾಗೂ ದೀರ್ಘ ಡೆಮಾಕ್ರಾಟಿಕ್ ಪಕ್ಷವನ್ನು ರೋಗಗ್ರಸ್ತಗಳಿಸಿರುವ ಭ್ರಷ್ಟಾಚಾರ ಹಾಗೂ ವ್ಯಕ್ತಿತ್ವ ಆರಾಧನೆಯ ಪ್ರತೀಕವಾಗಿರುವ ನೀವು ಕೊನೆಗೂ ಪರದೆ ಹಿಂದಿನಿಂದ ಹೊರಬಂದಿರುವಿರಿ’’ ಎಂದು ತುಳಸಿ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News