ಎಚ್.ವಿಶ್ವನಾಥ್ ಜೊತೆ ವೈಮನಸ್ಸಿಗೆ ಕಾರಣವೇನು?: ನೆನಪುಗಳನ್ನು ಬಿಚ್ಚಿಟ್ಟು ಸಿದ್ದರಾಮಯ್ಯ ಹೇಳಿದ್ದು ಹೀಗೆ...

Update: 2019-10-20 16:44 GMT

ಮೈಸೂರು,ಅ.20: ಅನರ್ಹ ಶಾಸಕ ಎಚ್.ವಿಶ್ವನಾಥ್ ಒಬ್ಬ ಸುಳ್ಳುಗಾರ, ನನ್ನ ಜೊತೆಯಲ್ಲೆ ಇದ್ದು ನನ್ನ ವಿರುದ್ಧವೇ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದು ರಾಜ್ಯದ ಅತ್ಯಂತ ಭ್ರಷ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಹೇಳಿದ್ದರು. ಇದರಿಂದ ನನ್ನ ಮನಸ್ಸಿಗೆ ತುಂಬಾ ಬೇಸರವಾಗಿ ಅವರ ಜೊತೆ ಮಾತು ಬಿಟ್ಟೆ ಎಂದು ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಮ್ಮ ಸಮುದಾಯದ ಮುಖಂಡರ ಬಳಿ ನೋವನ್ನು ತೋಡಿಕೊಂಡರು.

ನಗರದ ವಿಜಯನಗರದಲ್ಲಿರುವ ವಾಲ್ಮೀಕಿ ಭವನದಲ್ಲಿ ರವಿವಾರ ಹುಣಸೂರು ತಾಲೂಕಿನ ಕುರುಬ ಸಮಾಜದ ಮುಖಂಡರ ಸಭೆ ನಡೆಸಿ ವಿಶ್ವನಾಥ್ ರೊಂದಿಗಿನ ವೈಮನಸ್ಸನ್ನು ಬಿಚ್ಚಿಟ್ಟರು. ನಾನು ವಿಶ್ವನಾಥ್‍ಗಾಗಿ ಹಲವಾರು ಬಾರಿ ಸಹಿಸಿಕೊಂಡು ಬಂದೆ. ಮಂಚನಹಳ್ಳಿ ಮಹದೇವನಿಗೆ ನೀಡಬೇಕಾದ ವಿಧಾನಸಭಾ ಟಿಕೆಟ್‍ಅನ್ನು ವಿಶ್ವನಾಥ್ ಅವರಿಗೆ ನೀಡಿದೆ. ಚುನಾವಣೆಯಲ್ಲಿ ಸೋತರು. ನಂತರ ಲೋಕಸಭಾ ಚುನಾವಣೆಯಲ್ಲಿ ಮಂಚನಹಳ್ಳಿ ಮಹದೇವನಿಗೆ ಎಂಪಿ ಟಿಕೆಟ್ ನೀಡಬೇಕಾಗಿತ್ತು. ಆಗ ಕಾಡಿ ಬೇಡಿ ಟಿಕೆಟ್ ಬೇಕೆಂದು ಹಠಕ್ಕೆ ಬಿದ್ದರು. ಆಗಲೂ ಹೋಗಲಿ ಎಂದು ಟಿಕೆಟ್ ನೀಡಿ ಗೆಲ್ಲಿಸಿಕೊಂಡು ಬರಲಾಯಿತು. ನಂತರ 2014ರ ಲೋಕಸಭೆ ಚುನಾವಣೆಯಲ್ಲಿ ಸೋತರು. ಆಗ ಮತ್ತೆ ನನ್ನ ಬಳಿ ಬಂದು ಎಂಎಲ್‍ಸಿ ಮಾಡಿ ಎಂದು ದುಂಬಾಲು ಬಿದ್ದರು. ಆಗ ಅವರಿಗೆ ಬುದ್ಧಿ ಹೇಳಿ ಕಳುಹಿಸಿದೆ ಎಂದು ಹಳೆಯ ಘಟಾನಾವಳಿಗಳನ್ನು ನೆನಪಿಸಿದರು.

ಇದಾದ ನಂತರ ಜೊತೆಯಲ್ಲೇ ಇದ್ದ ಎಚ್.ವಿಶ್ವನಾಥ್, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದು ರಾಜ್ಯದಲ್ಲಿ ಅತ್ಯಂತ ಭ್ರಷ್ಟ ಆಡಳಿತವನ್ನು ಸಿದ್ದರಾಮಯ್ಯ ನಡೆಸುತ್ತಿದ್ದಾರೆ ಎಂದು ಹೇಳಿದರು. ಇದರಿಂದ ನನಗೆ ತುಂಬಾ ನೋವಾಯಿತು. ಅಂದಿನಿಂದ ಅವರ ಜೊತೆ ಮಾತು ಬಿಟ್ಟೆ ಎಂದು ಹೇಳಿದರು.

ಕಾಂಗ್ರೆಸ್‍ನಿಂದ ಹೊರ ಹೋದ ಎಚ್.ವಿಶ್ವನಾಥ್ ಜೆಡಿಎಸ್‍ ಗೂ ಮೋಸ ಮಾಡಿದರು. ಅವನೊಬ್ಬ ಸುಳ್ಳುಗಾರ, ಉಪ ಚುನಾವಣೆಯಲ್ಲಿ ನೀವು ತಕ್ಕ ಪಾಠ ಕಲಿಸಿ ಕಾಂಗ್ರೆಸ್ ಅಭ್ಯರ್ಥಿ ಎಚ್.ಪಿ.ಮಂಜುನಾಥ್ ರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.

ಇದೇ ವೇಳೆ ಸಿದ್ದರಾಮಯ್ಯ ಅವರ ಪುತ್ರ ವರುಣಾ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ ಹಲವರು ಜೊತೆಯಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News