ಮಾರ್ಕೋನಹಳ್ಳಿ ಯೋಜನೆಗೆ ಕುಣಿಗಲ್ 'ಕೈ' ಶಾಸಕರ ಅಡ್ಡಿ: ಶಾಸಕ ಕೆ.ಸುರೇಶ್‍ ಗೌಡ ಆರೋಪ

Update: 2019-10-20 18:35 GMT

ನಾಗಮಂಗಲ, ಅ.20: ಮಾರ್ಕೊನಹಳ್ಳಿ ಜಲಾಶಯದಿಂದ ನಿರೀಕ್ಷಿತ ಬಹುಗ್ರಾಮ ಕುಡಿಯುವ ನೀರು ಯೋಜನೆ ಕಾಮಗಾರಿ ನಿಲ್ಲಿಸುವಂತೆ ಕುಣಿಗಲ್ ಕ್ಷೇತ್ರದ ಶಾಸಕರು ರಾಜಕೀಯ ಪಿತೂರಿಯಿಂದ ಅಡ್ಡಿಪಡಿಸುತ್ತಿದ್ದಾರೆಂದು ನಾಗಮಂಗಲ ಜೆಡಿಎಸ್ ಶಾಸಕ ಸುರೇಶ್‍ ಗೌಡ ಆರೋಪಿಸಿದ್ದಾರೆ.

ಪಟ್ಟಣದ ಪ್ರವಾಸಿಮಂದಿರದಲ್ಲಿ ಶನಿವಾರ ರಾತ್ರಿ ದಿಢೀರ್ ಸುದ್ದಿಗೋಷ್ಟಿ ನಡೆಸಿದ ಶಾಸಕರು, ನಾಗಮಂಗಲ ತಾಲೂಕಿಗೆ ಮಾರ್ಕೋನಹಳ್ಳಿ ಜಲಾಶಯದಿಂದ  ಕುಡಿಯಯವ ನೀರು ತರಬೇಕೆಂದು ಆಶಯ ವ್ಯಕ್ತಪಡಿಸಿ ಯೋಜನೆ ರೂಪಿಸುವಂತೆ ಕೋರಿದ್ದವರು ಆದಿಚುಂಚನಗಿರಿ ಮಠದ ಪೀಠಾದ್ಯಕ್ಷರಾಗಿದ್ದ ಶ್ರೀ ಭಾಲಗಂಗಾಧರನಾಥಸ್ವಾಮಿಜಿಗಳು ಎಂದರು.

ಶ್ರೀಮಠವೂ ಸೇರಿದಂತೆ ತಾಲೂಕಿನ ದೇವಲಾಪುರ, ಬೆಳ್ಳೂರು ಹೋಬಳಿಯ 129 ಹಳ್ಳಿಗಳಿಗೆ ಈ ಯೋಜನೆಯಿಂದ ನೀರು ಸಿಗುವಂತಾಗುತ್ತದೆ. ಬಿಜೆಪಿ ಸರಕಾರದ ಸಿಎಂ ಆಗಿದ್ದ ಸದಾನಂದಗೌಡರು ಈ ಯೋಜನೆಗೆ ಕೊನೆಯ ಕ್ಯಾಬಿನೆಟ್‍ನಲ್ಲಿ ಅನುಮೋದನೆ ಕೊಟ್ಟಿದ್ದರು. ನಂತರ 2012ರಲ್ಲಿ ಸಿಎಂ ಆಗಿದ್ದ ಜಗದೀಶ್ ಶೆಟ್ಟರ್ ಹಾಗೂ ಸಿದ್ದರಾಮಯ್ಯನವರು ಸುಮಾರು 168 ಕೋಟಿ ವೆಚ್ಚದ ಕಾಮಗಾರಿಗೆ ಗುದ್ದಲಿ ಪೂಜೆಯನ್ನೂ ಮಾಡಿದ್ದರು ಎಂದು ಅವರು ತಿಳಿಸಿದರು.

ಚಲುವರಾಯಸ್ವಾಮಿ ವಿರುದ್ಧ ಪಿತೂರಿ ಆರೋಪ:
ನಮ್ಮ ತಾಲೂಕಿನ ಸರ್ವೆ ನಂಬರ್ ನಲ್ಲೆ ಕಾಮಗಾರಿ ಈಗಾಗಲೆ ಪ್ರಾರಂಭವಾಗಿದ್ದು, ಜಾಕ್‍ವೆಲ್ ಕೆಲಸ ಬಾಕಿ ಇದೆ. ಇದನ್ನು ಪಕ್ಕದ ಕುಣಿಗಲ್ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಾ.ರಂಗನಾಥ್‍ರವರು ನಮ್ಮ ಕ್ಷೇತ್ರದ ಮತ್ತೋರ್ವರಿಗೆ ರಾಜಕೀಯವಾಗಿ ಸಹಾಯ ಮಾಡಲು ಪಿತೂರಿಯಿಂದ ಕಾಮಗಾರಿ ಸ್ಥಗಿತ ಮಾಡಿಸಲು ಹೇಳಿದ್ದಾರೆ ಎಂದು ಅವರು ಆಪಾದಿಸಿದರು.

ಚುಂಚನಗಿರಿ ಮಠಕ್ಕೂ ನೀರು ಬೇಕಾಗುತ್ತದೆ. ಹಾಗಾಗಿ ಕುಡಿಯುವ ನೀರಿಗೆ ತೊಂದರೆ ಮಾಡಬೇಡಿ ಎಂದು ಮನವಿ ಮಾಡಿದ್ದರೂ ನಮ್ಮ ಕ್ಷೇತ್ರದವರೊಬ್ಬರ ಮಾತು ಕೇಳಿಕೊಂಡು ರಾಜಕೀಯ ಲೆಕ್ಕಾಚಾರಕ್ಕಾಗಿ ಅಡ್ಡಿಪಡಿಸಿದ್ದಾರೆ ಎಂದು ಮಾಜಿ ಸಚಿವ ಕಾಂಗ್ರೇಸ್‍ನ ಚಲುವರಾಯಸ್ವಾಮಿ ವಿರುದ್ಧ ಸುರೇಶ್‍ ಗೌಡ ಆಕ್ರೋಶ ವ್ಯಕ್ತಪಡಿಸಿದರು.

ಕಾಮಗಾರಿ ಸುತ್ತಮುತ್ತ 144 ಸೆಕ್ಷನ್ ಜಾರಿ
ಕಾನೂನು ಬದ್ದವಾಗಿಯೇ ಹೆಚ್‍ಎಲ್‍ಬಿಸಿ ಅಧಿಕಾರಿಗಳ ಒಪ್ಪಿಗೆ ಮೇರೆಗೆ ಸರಕಾರದ ಅನುಮೋದನೆ ಸಿಕ್ಕಿದೆ. ಕಾಮಗಾರಿ ಬಹುತೇಕ ನಾಗಮಂಗಲ ಕ್ಷೇತ್ರ ವ್ಯಾಪ್ತಿಯಲ್ಲೆ ನಡೆಯುತ್ತಿದ್ದು, ಅಂತಿಮ ಹಂತಕ್ಕೆ ಬಂದಿದೆ. ಇದರಿಂದ ಕುಣಿಗಲ್ ಕ್ಷೇತ್ರದ ಮೇಲೆ ಯಾವೊಂದು ಪರಿಣಾಮವೂ ಬೀರಲ್ಲ. ಆದರೂ ಬಾಕಿ ಇರುವ ಜಾಕ್‍ವೆಲ್ ಕಾಮಗಾರಿಗೆ ತಡೆಯೊಡ್ಡಿದ್ದಾರೆ. ಈ ಸಂಬಂಧ ಮಂಡ್ಯ ಜಿಲ್ಲಾಧಿಕಾರಿ ವೆಂಕಟೇಶ್‍ರವರು ಕಾಮಗಾರಿ ನಡೆಯುವ ಸುತ್ತಮುತ್ತ 144 ಸೆಕ್ಷನ್ ಜಾರಿ ಮಾಡಿದ್ದಾರೆ. ಈ ಸಂಬಂಧ ಸೂಕ್ತ ಕ್ರಮ ವಹಿಸಲಿದ್ದಾರೆ. ರಾಜಕೀಯ ದುರುದ್ದೇಶಕ್ಕೆ ಇಂತಹ ಅತ್ಯವಶ್ಯಕ ಕಾಮಗಾರಿಗೆ ಅಡ್ಡಿಪಡಿಸಬಾರದು ಎಂದು ಕಿಡಿಕಾರಿದರು.

ಸೋಮವಾರ ಅಧಿಕಾರಿಗಳ ಸಭೆ?
ಈ ಪ್ರಕರಣ ವಿಚಾರವಾಗಿ ಸಂಬಂಧಪಟ್ಟ ಇಲಾಖೆ ಇಂಜಿನಿಯರ್‍ಗಳು ಹಾಗೂ ತಹಶೀಲ್ದಾರ್, ಜಿಲ್ಲಾಧಿಕಾರಿಗಳ ಸಭೆ ಸೋಮವಾರ ಮದ್ಯಾಹ್ನ 3 ಗಂಟೆಗೆ ನಡೆಯಲಿದ್ದು, ಅಲ್ಲಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News