ಪತ್ರಕರ್ತ ನಾಗೇಶ್ ಹೆಬ್ಬಾರ್ ನಿಧನ

Update: 2019-10-20 18:39 GMT

ಮೂಡಿಗೆರೆ, ಅ.20: ಪತ್ರಕರ್ತ ನಾಗೇಶ್ ಹೆಬ್ಬಾರ್ (45) ಅನಾರೋಗ್ಯದಿಂದ ಮಂಗಳೂರು ಆಸ್ಪತ್ರೆಯಲ್ಲಿ ಶನಿವಾರ ಸಂಜೆ ನಿಧನರಾದರು. 

ಕಳೆದ 20 ವರ್ಷದಿಂದ ತಾಲೂಕಿನಲ್ಲಿ ಸ್ಥಳೀಯ ಮತ್ತು ರಾಜ್ಯಮಟ್ಟದ ಪತ್ರಿಕೆಗಳಲ್ಲಿ ವರದಿಗಾರರಾಗಿ ಕಾರ್ಯ ನಿರ್ವಹಿಸಿದ್ದರು. ಕಳೆದ ತಿಂಗಳು ಕಣ್ಣಿನ ದೃಷ್ಟಿ ದೋಷದಿಂದ ಖಿನ್ನರಾಗಿದ್ದರು. ಅ.13ರಂದು ಕಣ್ಣಿನ ಶಸ್ತ್ರ ಚಿಕಿತ್ಸೆಗಾಗಿ ಅವರ ಕುಟುಂಬದವರು ಚಿಕ್ಕಮಗಳೂರಿನ ಕಣ್ಣಿನ ಆಸ್ಪತ್ರೆಗೆ ದಾಖಲಿಸಿದ್ದರು.

ಅಂದು ಸಂಚೆ ಕಣ್ಣಿನ ಶಸ್ತ್ರ ಚಿಕಿತ್ಸೆಗೆಂದು ಕೊಠಡಿಗೆ ಕರೆದೊಯ್ಯುತ್ತಿದ್ದಾಗ ಏಕಾಏಕಿ ಕುಸಿದು ಬಿದಿದ್ದಾರೆ. ಕೂಡಲೇ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ತಪಾಸಣೆ ವೇಳೆ ಮೂತ್ರಪಿಂಡ ಹಾಗೂ ಹೃದಯದ ತೊಂದರೆ ಇರುವುದಾಗಿ ವೈದ್ಯರು ತಿಳಿಸಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಅ.14ರಂದು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ತೀವ್ರ ನಿಗಾಘಟಕದಲ್ಲಿ ತುರ್ತು ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆ ಪಲಕಾರಿಯಾಗದೇ ಅ.19ರಂದು ಸಂಜೆ ಕೊನೆಯುಸಿರೆಳೆದರು. 

ನಾಗೇಶ್ ಹೆಬ್ಬಾರ್ ಅವರ ಮೃತ ದೇಹವನ್ನು ಭಾನುವಾರ ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಬಳಿಕ ಬೀಜವಳ್ಳಿಯ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಿತು. ನಾಗೇಶ್ ಹೆಬ್ಬಾರ್ ಅವರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ, ತಾಯಿ ಹಾಗೂ ಇಬ್ಬರು ಸಹೋದರರನ್ನು ಅಗಲಿದ್ದಾರೆ. 

ನಾಗೇಶ್ ಹೆಬ್ಬಾರ್ ನಿಧನಕ್ಕೆ ಮಂಗಳೂರು ಶಾಸಕ ಯು.ಟಿ.ಖಾದರ್, ಶಾಸಕ ಎಂ.ಪಿ.ಕುಮಾರಸ್ವಾಮಿ, ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್, ತಾ.ಪಂ. ಸದಸ್ಯ ಸುಂದರ್ ಕುಮಾರ್, ಪ.ಪಂ. ಸದಸ್ಯರಾದ ಕೆ.ವೆಂಕಟೇಶ್, ಗೀತಾ, ಎಂ.ಎ.ಹಂಝಾ, ಮನೋಜ್ ಕುಮಾರ್, ಬಿಎಸ್‍ಪಿ ಕ್ಷೇತ್ರ ಸಮಿತಿ ಅಧ್ಯಕ್ಷ ಲೋಕವಳ್ಳಿ ರಮೇಶ್, ಜಿಲ್ಲಾ ಮುಖಂಡರಾದ ಯು.ಬಿ.ಮಂಜಯ್ಯ, ಪಿ.ಕೆ.ಮಂಜುನಾಥ್, ಬಕ್ಕಿ ಮಂಜು, ಜಿಲ್ಲಾ ಹಾಗೂ ತಾಲೂಕು ಪತ್ರಕರ್ತರ ಸಂಘ, ತುಳುಕೂಟ, ಜೇಸಿಐ ಸಂಸ್ಥೆ ಸೇರಿದಂತೆ ವಿವಿಧ ಮುಖಂಡರು ಸಂತಾಪ ಸೂಚಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News