ಶಿವಮೊಗ್ಗದಲ್ಲಿ ಭಾರೀ ಮಳೆ: ಅ.22ರವರೆಗೆ 'ಆರೆಂಜ್ ಅಲರ್ಟ್'

Update: 2019-10-20 18:44 GMT
ಸಾಂದರ್ಭಿಕ ಚಿತ್ರ

ಶಿವಮೊಗ್ಗ, ಅ. 20: ಶಿವಮೊಗ್ಗ ನಗರ ಹಾಗೂ ತಾಲೂಕಿನಲ್ಲಿ ಗುಡುಗು ಸಹಿತ ಧಾರಾಕಾರ ಮಳೆ ಮುಂದುವರಿದಿದೆ. ಶನಿವಾರ ರಾತ್ರಿ ಹಾಗೂ ಭಾನುವಾರ ಸಂಜೆ ಬಿದ್ದ ಭಾರೀ ವರ್ಷಧಾರೆಯಿಂದ ರಾಜಕಾಲುವೆ-ಚರಂಡಿಗಳು ಉಕ್ಕಿ ಹರಿದವು. ಹಲವೆಡೆ ತಗ್ಗು ಪ್ರದೇಶಗಳು ಜಲಾವೃತವಾಗಿದ್ದವು. ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತಾಯಿತು. 

ಟಿ.ವಿ.ಗಳಿಗೆ ಹಾನಿ: ಶನಿವಾರ ರಾತ್ರಿ ಸಿಡಿಲಿಗೆ ಎಲೆಕ್ಟ್ರಾನಿಕ್ ಉಪಕರಣಗಳು ಹಾನಿಯಾದ ವರದಿಗಳು ಬಂದಿವೆ. ಮಹಾನಗರ ಪಾಲಿಕೆ 5 ನೇ ವಾರ್ಡ್‍ನ ಗಾಡಿಕೊಪ್ಪದಲ್ಲಿ ಗುಡುಗಿನ ಕಾರಣದಿಂದ ಸುಮಾರು 50ಕ್ಕೂ ಅಧಿಕ ಟಿ.ವಿ.ಗಳು ಹಾಳಾಗಿವೆ. ಲಕ್ಷಾಂತರ ರೂ. ನಷ್ಟ ಸಂಭವಿಸಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. 

ನಗರದ ಬಾಪೂಜಿ ನಗರ-ಟ್ಯಾಂಕ್ ಮೊಹಲ್ಲಾ ಬಡಾವಣೆಯಲ್ಲಿ ರಾಜಕಾಲುವೆ ಉಕ್ಕಿ ಹರಿದು, ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿತ್ತು. ರಸ್ತೆಗಳು ಜಲಾವೃತವಾಗಿದ್ದವು. ಮಹಾನಗರ ಪಾಲಿಕೆ ಆಡಳಿತ ಸಮಸ್ಯೆ ಪರಿಹಾರಕ್ಕೆ ಯಾವುದೇ ಕ್ರಮಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆಂದು ಸ್ಥಳೀಯರು ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ನಗರದ ಹೊರವಲಯ ಅಬ್ಬಲಗೆರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಸವನಗಂಗೂರು ಕೆರೆ ಮತ್ತೊಮ್ಮೆ ಕೋಡಿ ಬಿದ್ದು, ಭಾರೀ ಪ್ರಮಾಣದ ನೀರು ಹರಿದ ಪರಿಣಾಮ ತಗ್ಗು ಪ್ರದೇಶದಲ್ಲಿರುವ ಕೆಹೆಚ್‍ಬಿ ಪ್ರೆಸ್ ಕಾಲೋನಿ ಸಂಪೂರ್ಣ ಜಲಾವೃತವಾಗಿತ್ತು. ಚರಂಡಿಗಳು ಉಕ್ಕಿ ಹರಿದು, ರಸ್ತೆಯ ಮೇಲೆ ನೀರು ಹರಿಯಿತು. ಯುಜಿಡಿ ಟ್ಯಾಂಕ್‍ನಲ್ಲಿ ನೀರು ತುಂಬಿಕೊಂಡು, ಕೆಲ ಮನೆಗಳ ಯುಜಿಡಿ ವ್ಯವಸ್ಥೆ ಅಸ್ತವ್ಯಸ್ತವಾಗಿತ್ತು. 

ವರ್ಷಧಾರೆ: ಜಿಲ್ಲೆಯಾದ್ಯಂತ ವರ್ಷಧಾರೆಯ ಅಬ್ಬರ ಮುಂದುವರಿದಿದೆ. ಕಟಾವು ಹಂತಕ್ಕೆ ಬಂದಿರುವ ಮೆಕ್ಕೆಜೋಳ, ಶೇಂಗಾ ಮತ್ತೀತರ ಬೆಳೆಗೆ ಭಾರೀ ಪ್ರಮಾಣದ ಧಕ್ಕೆಯಾಗಿದೆ. ಲಿಂಗನಮಕ್ಕಿ ಜಲಾಶಯದ ಒಳಹರಿವಿನಲ್ಲಿ ಏರಿಕೆ ಕಂಡುಬಂದಿರುವುದಿರಂದ ನೀರನ್ನು ಹೊರಬಿಡಲಾಗುತ್ತಿದೆ. ಇದರಿಂದ ವಿಶ್ವವಿಖ್ಯಾತ ಜೋಗ ಜಲಪಾತ ಮತ್ತೆ ಮೈದುಂಬಿ ಹರಿಯಲಾರಂಭಿಸಿದೆ. 

ಹವಮಾನ ಇಲಾಖೆಯು ಅ. 20 ರಿಂದ 22 ರವರೆಗೆ ಶಿವಮೊಗ್ಗ ಜಿಲ್ಲೆ ಸೇರಿದಂತೆ ದಕ್ಷಿಣ ಒಳನಾಡಿನ ಹಲವೆಡೆ 'ಆರೆಂಜ್ ಅಲರ್ಟ್' ಘೋಷಿಸಿದೆ. ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ. ಈ ನಡುವೆ ಭಾನುವಾರ ಸಂಜೆ ಕೂಡ ಶಿವಮೊಗ್ಗ ನಗರದಲ್ಲಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಭಾರೀ ವರ್ಷಧಾರೆಯಾಯಿತು. 

ಸೂಕ್ತ ಪರಿಹಾರ ಕೊಡಿ: ಬಿಜೆಪಿ ಮುಖಂಡ ಚೆನ್ನಬಸಪ್ಪ
ಮಹಾನಗರ ಪಾಲಿಕೆ 5 ನೇ ವಾರ್ಡ್‍ನ ಗಾಡಿಕೊಪ್ಪದಲ್ಲಿ ಗುಡುಗು-ಸಿಡಿಲಿನ ಹೊಡೆತಕ್ಕೆ ಸುಮಾರು 50 ಕ್ಕೂ ಅಧಿಕ ಟಿ.ವಿ.ಗಳು ಹಾನಿಗೀಡಾಗಿವೆ. ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಟಿ.ವಿ. ಹಾನಿಗೀಡಾದ ಕುಟುಂಬಗಳಲ್ಲಿ, ಬಹುತೇಕರು ಬಡ ವರ್ಗಕ್ಕೆ ಸೇರಿದವರಾಗಿದ್ದಾರೆ. ಇಂತಹವರಿಗೆ ಸೂಕ್ತ ಪರಿಹಾರ ಕಲ್ಪಿಸಲು ಜಿಲ್ಲಾಡಳಿತ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಗಾಡಿಕೊಪ್ಪದ ಬಿಜೆಪಿ ಪಕ್ಷದ ವಾರ್ಡ್ ಅಧ್ಯಕ್ಷ ಚೆನ್ನಬಸಪ್ಪರವರು ಮನವಿ ಮಾಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News