ಉತ್ತರಪ್ರದೇಶದ 11 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಉಪ ಚುನಾವಣೆ

Update: 2019-10-21 05:31 GMT

ಲಕ್ನೋ, ಅ.21: ಉತ್ತರಪ್ರದೇಶದ 11 ವಿಧಾನಸಭಾ ಕ್ಷೇತ್ರಗಳಿಗೆ ಬಿಗಿ ಭದ್ರತೆಯ ಮಧ್ಯೆ ಸೋಮವಾರ ಉಪಚುನಾವಣೆ ಆರಂಭವಾಗಿದೆ. ತನ್ನ ರಾಜಕೀಯ ಎದುರಾಳಿಗಳ ಕಳಪೆ ಪ್ರಚಾರದ ಲಾಭ ಎತ್ತಲು ಬಿಜೆಪಿ ಎದುರು ನೋಡುತ್ತಿದೆ.

 11 ಕ್ಷೇತ್ರಗಳ ಪೈಕಿ 8ರಲ್ಲಿ ಬಿಜೆಪಿ ಅಭ್ಯರ್ಥಿಗಳು ಪ್ರತಿನಿಧಿಸುತ್ತಿದ್ದರು. ಒಂದರಲ್ಲಿ ಅಪ್ನಾದಳ ಪಕ್ಷ, ತಲಾ ಒಂದರಲ್ಲಿ ಸಮಾಜವಾದಿ ಪಕ್ಷ ಹಾಗೂ ಬಹುಜನ ಸಮಾಜವಾದಿ ಪಕ್ಷದ ಅಭ್ಯರ್ಥಿಗಳಿದ್ದರು.

ಸಮಾಜವಾದಿಪಕ್ಷ ಎಲ್ಲ 11 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದು, ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ರಾಂಪುರ ಅಸೆಂಬ್ಲಿ ಕ್ಷೇತ್ರದಲ್ಲಿ ಮಾತ್ರ ಪ್ರಚಾರ ನಡೆಸಿದ್ದಾರೆ. ಮಯಾವತಿಯ ಬಿಎಸ್ಪಿ ಪಕ್ಷ ಸಮಾಜವಾದಿಪಕ್ಷದೊಂದಿಗೆ ಮೈತ್ರಿಮಾಡಿಕೊಳ್ಳದೇ ಎಲ್ಲ ಕ್ಷೇತ್ರಗಳಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುತ್ತಿದೆ. ಮಾಜಿ ಮುಖ್ಯಮಂತ್ರಿ ಮಾಯಾವತಿ ಒಂದೂ ಕ್ಷೇತ್ರದಲ್ಲಿಯೂ ಪ್ರಚಾರ ನಡೆಸಿಲ್ಲ.

 ಉತ್ತರಪ್ರದೇಶದಲ್ಲಿ ಹೊಸ ರಾಜ್ಯಾಧ್ಯಕ್ಷರನ್ನಾಗಿ ಅಜಯ್ ಕುಮಾರ್ ಲಲ್ಲೂ ಅವರನ್ನು ನೇಮಿಸಿರುವ ಕಾಂಗ್ರೆಸ್ ತನ್ನ ಹೊಸ ಪದಾಧಿಕಾರಿಗಳ ಮೂಲಕ ಚುನಾವಣೆಗೆ ತಯಾರಿ ನಡೆಸಿದ್ದು, ಎಲ್ಲ 11 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ. ಬಿಜೆಪಿಯ ಪ್ರಚಾರಕ್ಕೆ ಮುಖ್ಯಮಂತ್ರಿ ಆದಿತ್ಯನಾಥ್ ನೇತೃತ್ವವಹಿಸಿದ್ದು,ತಮ್ಮ ಪ್ರಚಾರ ರ್ಯಾಲಿಗಳಲ್ಲಿ ಜಮ್ಮು-ಕಾಶ್ಮೀರಕ್ಕೆ ನೀಡಲಾಗಿರುವ ವಿಶೇಷ ಸ್ಥಾನಮಾನ ರದ್ದುಪಡಿಸಿರುವುದು ಸೇರಿದಂತೆ  ರಾಷ್ಟ್ರೀಯ ವಿಚಾರಗಳನ್ನೇ ಹೆಚ್ಚಾಗಿ ಪ್ರಸ್ತಾವಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News