ನಿಗಮ-ಮಂಡಳಿ ನೇಮಕದಲ್ಲಿ ಕ್ರೈಸ್ತರ ನಿರ್ಲಕ್ಷ್ಯ, ಸಮುದಾಯ ಹೊರಗಿಡುವ ಹುನ್ನಾರ: ಐವಾನ್ ಡಿಸೋಜಾ

Update: 2019-10-21 12:46 GMT

ಬೆಂಗಳೂರು, ಅ. 21: ಹದಿನಾರು ಅಕಾಡೆಮಿ ಮತ್ತು ಪ್ರಾಧಿಕಾರಗಳಿಗೆ ಸರಕಾರ ಅಧ್ಯಕ್ಷರು ಮತ್ತು ಸದಸ್ಯರು ಸೇರಿ 250 ಮಂದಿ ನೇಮಕ ಮಾಡಿದ್ದು, ರಾಜ್ಯದಲ್ಲಿ ಶೇ.4ರಷ್ಟಿರುವ ಕ್ರೈಸ್ತ ಸಮುದಾಯದ ಒಬ್ಬ ಸದಸ್ಯರನ್ನು ನೇಮಿಸಿಲ್ಲ. ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ ‘ಕ್ರೈಸ್ತರನ್ನು ಹೊರಗಿಡುವ ಹುನ್ನಾರ’ ನಡೆಯುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜಾ ಸಂಶಯ ವ್ಯಕ್ತಪಡಿಸಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡಕ್ಕೆ ನಿಘಂಟು ನೀಡಿದ್ದು ಕ್ರೈಸ್ತ ಸಮುದಾಯದ ಹಿರಿಮೆ. ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ, ಪತ್ರಿಕೋದ್ಯಮಕ್ಕೆ ಕ್ರೈಸ್ತರ ಕೊಡುಗೆ ಅನನ್ಯ. ಆದರೆ, ಸರಕಾರ 250 ಮಂದಿ ಸದಸ್ಯರ ಪೈಕಿ ಕ್ರೈಸ್ತ ಸಮುದಾಯದ ಓರ್ವ ವ್ಯಕ್ತಿಯನ್ನೂ ಗುರುತಿಸದಿರುವುದು ಸಲ್ಲ ಎಂದು ಆಕ್ಷೇಪಿಸಿದರು.

1994ರಲ್ಲಿ ಪ್ರಾರಂಭವಾದ ಕೊಂಕಣಿ ಸಾಹಿತ್ಯ ಅಕಾಡಮಿಯಲ್ಲಿ ಅತ್ಯಂತ ಹೆಚ್ಚು ಕೊಂಕಣಿ ಕ್ರೈಸ್ತರು ಅಧ್ಯಕ್ಷರು ಮತ್ತು ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ರಾಜ್ಯದ 11 ಧರ್ಮ ಪ್ರಾಂತ್ಯಗಳ ಪೈಕಿ ಮಂಗಳೂರು, ಉಡುಪಿ, ಕಾರವಾರ ಮತ್ತು ಬೆಳಗಾವಿ ನಾಲ್ಕೂ ಪ್ರಾಂತ್ಯಗಳಲ್ಲಿ ಕೊಂಕಣಿ ಅಧಿಕೃತ ಭಾಷೆ. ಬೆಂಗಳೂರು, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಅತಿಹೆಚ್ಚು ಕೊಂಕಣಿ ಕ್ರೈಸ್ತ ಸಮುದಾಯದವರಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಿಂದ ಬಂದಿರುವ ಸಂಸ್ಕೃತಿ ಸಚಿವ ಸಿ.ಟಿ.ರವಿ, ತಮ್ಮ ಜಿಲ್ಲೆಯಲ್ಲೆ ಒಬ್ಬ ಕ್ರೈಸ್ತ ಸಮುದಾಯವರನ್ನು ಗುರುತಿಸುವಲ್ಲಿ ಸೋತಿದ್ದಾರೆ. ರಾಜ್ಯ ಸರಕಾರ ಕ್ರೈಸ್ತ ಸಮುದಾಯದ ನಿರ್ಲಕ್ಷ್ಯ ಧೋರಣೆ ಸರಿಯಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ರಾಜೀನಾಮೆ: ಬ್ಯಾರಿ ಸಾಹಿತ್ಯ ಅಕಾಡೆಮಿಯ ಹನ್ನೊಂದು ಮಂದಿ ಸದಸ್ಯರ ಪೈಕಿ ಏಳು ಮಂದಿ ನೇಮಕ ಮಾಡಿದ್ದು ಆ ಪೈಕಿ ನಾಲ್ವರಿಗೆ ಬ್ಯಾರಿ ಭಾಷೆ ಬರುವುದಿಲ್ಲ. ಸಾಹಿತ್ಯ, ಸಂಸ್ಕೃತಿ ಕಟ್ಟುವ ನಿಗಮ-ಮಂಡಳಿಗಳ ನೇಮಕದಲ್ಲಿ ರಾಜಕಾರಣ ನುಸುಳಬಾರದು ಎಂದು ಅವರು ಸಲಹೆ ನೀಡಿದರು.

ಅಭಿವೃದ್ಧಿ ನಿಗಮ ಪ್ರಾರಂಭಿಸಿ: 2019-20ನೆ ಸಾಲಿನ ಬಜೆಟ್‌ನಲ್ಲಿ ಕ್ರೈಸ್ತ ಸಮುದಾಯದ ಅಭಿವೃದ್ಧಿ ನಿಗಮ ರಚಿಸಲು 200ಕೋಟಿ ರೂ.ಘೋಷಣೆ ಮಾಡಿದ್ದು, 165ಕೋಟಿ ರೂ.ಬಿಡುಗಡೆ ಮಾಡಿದೆ. ಆದರೆ, ಈವರೆಗೂ ನಿಗಮ ಪ್ರಾರಂಭಿಸಿಲ್ಲ. ಅಲ್ಲದೆ, ಚರ್ಚ್‌ಗಳ ಅಭಿವೃದ್ಧಿ-ದುರಸ್ತಿ, ಸಮುದಾಯದ ಸ್ಮಶಾನಗಳ ಅಭಿವೃದ್ಧಿ ಕಾರ್ಯಕ್ಕೆ ಕ್ರೈಸ್ತ ಸಮುದಾಯದ ಅಭಿವೃದ್ಧಿ ಸಮಿತಿಯನ್ನು ಇನ್ನೂ ರಚಿಸಿಲ್ಲ. ಹೀಗಾಗಿ 15 ದಿನಗಳ ಒಳಗೆ ನಿಗಮ-ಅಭಿವೃದ್ಧಿ ಸಮಿತಿ ರಚನೆಗೆ ಕ್ರಮ ಕೈಗೊಳ್ಳಬೇಕು. ಸಮುದಾಯಕ್ಕೆ ಮೀಸಲಿಟ್ಟ ಅನುದಾನವನ್ನು ಬಿಡುಗಡೆ ಮಾಡಬೇಕು ಎಂದು ಅವರು ಆಗ್ರಹಿಸಿದರು. ಗೋಷ್ಠಿಯಲ್ಲಿ ದಲಿತ ಕ್ರೈಸ್ತರ ಒಕ್ಕೂಟ ವೈ.ಮರಿಸ್ವಾಮಿ ಹಾಜರಿದ್ದರು.

ಧರಣಿ ಸತ್ಯಾಗ್ರಹದ ಎಚ್ಚರಿಕೆ: ಇನ್ನು ಹದಿನೈದು ದಿನಗಳಲ್ಲಿ ಕೊಂಕಣಿ ಕ್ರೈಸ್ತ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸದಿದ್ದರೆ ಸಮುದಾಯದ ಹಿರಿಯರ ಜೊತೆಗೂಡಿ ವಿಧಾನಸೌಧದ ಗಾಂಧಿ ಪುತ್ಥಳಿ ಬಳಿ ಧರಣಿ ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದು ಐವಾನ್ ಡಿಸೋಜಾ ಇದೇ ವೇಳೆ ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News