ದಾವಣಗೆರೆಯಲ್ಲಿ ಧಾರಾಕಾರ ಮಳೆ: ಮನೆಗಳಿಗೆ ನುಗ್ಗಿದ ನೀರು, ಬೆಳೆ ನಷ್ಟ

Update: 2019-10-21 18:39 GMT

ದಾವಣಗೆರೆ, ಅ.21: ಭಾನುವಾರ ರಾತ್ರಿಯಿಡಿ ಸುರಿದ ಮಳೆಗೆ ನಗರ ಸೇರಿದಂತೆ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಅಲ್ಲದೇ, ಕೈಗೆ ಬಂದ ಫಸಲು ನಷ್ಟವಾಗಿದೆ. 

ಶಂಕರ ವಿಹಾರ ಬಡಾವಣೆ ಎಸ್.ಎ.ರವೀಂದ್ರನಾಥ ಬಡಾವಣೆ, ಎಸ್.ಎಂ.ಕೃಷ್ಣ ನಗರ, ಅಜಾದನಗರ, ಬಾಷಾ ನಗರ, ಮಂಡಕ್ಕಿ ಭಟ್ಟಿ, ಯಲ್ಲಮ್ಮ ನಗರ, ಸುತ್ತಮುತ್ತಲು ಪ್ರದೇಶಗಳಿಗೆ ನೀರು ನುಗ್ಗಿದೆ. ಆಗ್ನಿ ಶಾಮಕ ದಳದ ಸಿಬ್ಬಂದಿಗಳು ಸಾರ್ವಜನಿಕರ ಸಹಾಯದಿಂದ ನೀರು ಹೊರ ಹಾಕಿದರು. 

ಹೊನ್ನಾಳಿ, ಚನ್ನಗಿರಿ ತಾಲೂಕಿನ ದೊಡ್ಡ ಘಟ್ಟ, ಚಿರಡೋಣಿ ಗ್ರಾಮದ ಸೇರಿದಂತೆ ಹಲವಾರು ಗ್ರಾಮಗಳ ಜಮೀನಿನಲ್ಲಿರುವ ಅಡಕೆ, ಮೆಕ್ಕೆಜೋಳ ,ಭತ್ತದ ಬೆಳೆ ಸಂಪೂರ್ಣ ನೀರಿನಲ್ಲಿ ಮುಳುಗಿದೆ. ಇದರಿಂದಾಗಿ ರೈತರ ಕೈಗೆ ಬಂದ ಫಸಲು ಸಂಪೂರ್ಣವಾಗಿ ಹಾಳಾಗಿವೆ. 

ಜಿಲ್ಲಾಧಿಕಾರಿ ಭೇಟಿ: ಮಳೆಯಿಂದಾಗಿ ಹಾನಿಗೊಳಗಾದ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿಯವರು ಭೇಟಿ ನೀಡಿ ಅಲ್ಲಿನ ಜನರ ಸಮಸ್ಯೆಯನ್ನು ಆಲಿಸಿದರು. 

ಈ ವೇಳೆ ಬಾಲಕಿಯೊಬ್ಬರು ಡಿಸಿ ಅವರ ಬಳಿ ಹೋಗಿ ತಮ್ಮ ಮನೆಯಲ್ಲಿ ನೀರು ನುಗ್ಗಿದ್ದು ಮನೆಗೆ ಆಗಮಿಸಿ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಜಲಾವೃತ ಪ್ರದೇಶಗಳಲ್ಲಿ ಪರಿಶೀಲಿಸಿ ಶೀಘ್ರ ಪರಿಹಾರ ಕೊಡಿಸುವ ಭರವಸೆ ನೀಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News