ಇನ್ನು ಕಾಲೇಜು, ವಿವಿ ಸೇರ್ಪಡೆಗೂ ಪ್ರವೇಶ ಪರೀಕ್ಷೆ

Update: 2019-10-22 03:41 GMT
ಸಚಿವ ರಮೇಶ್ ಪೊಖ್ರಿಯಾಲ್

ಹೊಸದಿಲ್ಲಿ, ಅ.22: ದೇಶಾದ್ಯಂತ ಕಾಲೇಜು ಹಾಗೂ ವಿಶ್ವವಿದ್ಯಾನಿಲಯಗಳಿಗೆ ಪ್ರವೇಶ ಪಡೆಯಲು ನಿರ್ದಿಷ್ಟ ವಿಷಯವಾರು ಯೋಗ್ಯತಾ ಪರೀಕ್ಷೆಯನ್ನು ನಡೆಸಲು ಹೊಸ ಶಿಕ್ಷಣ ನೀತಿ ಪ್ರಸ್ತಾವಿಸಿದೆ. ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಈ ಪರೀಕ್ಷೆ ಆಯೋಜಿಸಲಿದೆ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ಸಚಿವ ರಮೇಶ್ ಪೊಖ್ರಿಯಾಲ್ ಹೇಳಿದ್ದಾರೆ.

ಯೋಗ್ಯತಾ ಪರೀಕ್ಷೆ ಹಾಗೂ ವಿಷಯವಾರು ಪರೀಕ್ಷೆಗಳನ್ನು ವರ್ಷದಲ್ಲಿ ಹಲವು ಬಾರಿ ನಡೆಸಲು ರಾಷ್ಟ್ರೀಯ ಶಿಕ್ಷಣ ನೀತಿ-2020ರಲ್ಲಿ ಪ್ರಸ್ತಾವಿಸಲಾಗಿದೆ. ಈಗಾಗಲೇ ಈ ಸಂಬಂಧ ಎರಡು ಲಕ್ಷಕ್ಕೂ ಹೆಚ್ಚು ಸಲಹೆಗಳನ್ನು ವಿಶ್ಲೇಷಿಸಲಾಗಿದ್ದು, ರಾಷ್ಟ್ರೀಯ ಶಿಕ್ಷಣ ನೀತಿಯ ಕರಡನ್ನು ಶೀಘ್ರದಲ್ಲೇ ಅಂತಿಮಪಡಿಸಲಾಗುವುದು ಎಂದು ಅವರು ವಿವರಿಸಿದ್ದಾರೆ.

"ಹೊಸ ಶಿಕ್ಷಣ ನೀತಿಯನ್ನು ಅಂತಿಮಪಡಿಸುವ ಕಾರ್ಯ ಅಂತಿಮ ಹಂತದಲ್ಲಿದೆ. ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಸಲಹೆಗಳನ್ನು ವಿಶ್ಲೇಷಿಸಲು ಬೆಂಗಳೂರಿನಲ್ಲಿ ಕಚೇರಿ ಆರಂಭಿಸಲಾಗಿದ್ದು, ಸಿಬಿಎಸ್‌ಇ ಮುಖ್ಯಸ್ಥೆ ಅನಿತಾ ಕರ್ವಾಲ್ ನೇತೃತ್ವದ ಸಮಿತಿ, ಶಾಲಾ ಶಿಕ್ಷಣಕ್ಕೆ ಸಂಬಂಧಿಸಿದಂತೆ ಈಗಾಗಲೇ ವರದಿ ಅಂತಿಮಪಡಿಸಿದೆ. ಐದು ದಿನಗಳ ಹಿಂದೆ ಎಲ್ಲ ಶಿಕ್ಷಣ ಕಾರ್ಯದರ್ಶಿಗಳನ್ನು ಮತ್ತು ಸಿಬಿಎಸ್‌ಇ ತಂಡವನ್ನು ಭೇಟಿ ಮಾಡಿ ವಿಶ್ಲೇಷಣೆಗಳ ಬಗ್ಗೆ ಚರ್ಚಿಸಲಾಗಿದೆ" ಎಂದು ಟೈಮ್ಸ್ ಆಫ್ ಇಂಡಿಯಾ ಜತೆ ಮಾತನಾಡಿದ ಸಚಿವರು ಸ್ಪಷ್ಟಪಡಿಸಿದರು.

ಸಾಮಾನ್ಯ ಪರೀಕ್ಷೆ ವಿದ್ಯಾರ್ಥಿಗಳ ಮೇಲಿನ ಹೊರೆಯನ್ನು ಕಡಿಮೆ ಮಾಡುವ ನಿರೀಕ್ಷೆ ಇದೆ ಎಂದು ಅವರು ಅಭಿಪ್ರಾಯಪಟ್ಟರು. ಸಂಪೂರ್ಣ ಪ್ರಗತಿಪರ ಮತ್ತು ಭಾರತ ಕೇಂದ್ರಿತ ಶಿಕ್ಷಣ ನೀತಿ ಜಾರಿಗೆ ಬರಲಿದೆ. ಪ್ರಧಾನಿಯವರ ಒಪ್ಪಿಗೆ ಪಡೆದು ಶೀಘ್ರವೇ ಅದನ್ನು ಘೋಷಿಸಲಿದ್ದೇವೆ ಎಂದು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News