ಪ್ರಧಾನಿ ಮೋದಿ ಭೇಟಿಯಾದ ನೊಬೆಲ್ ಪುರಸ್ಕೃತ ಅಭಿಜಿತ್ ಬ್ಯಾನರ್ಜಿ

Update: 2019-10-22 14:35 GMT

ಹೊಸದಿಲ್ಲಿ, ಅ. 22: ನೊಬೆಲ್ ಪ್ರಶಸ್ತಿ ವಿಜೇತ ಅಭಿಜಿತ್ ಬ್ಯಾನರ್ಜಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಂಗಳವಾರ ಲೋಕ್ ಕಲ್ಯಾಣ್ ಮಾರ್ಗ್ ರೆಸಿಡೆನ್ಸಿಯಲ್ಲಿರುವ ಪ್ರಧಾನಿ ನಿವಾಸದಲ್ಲಿ ಭೇಟಿಯಾಗಿದ್ದಾರೆ. ಈ ಸಂದರ್ಭ ಪ್ರಧಾನಿ ಮೋದಿ ಹಾಗೂ ಬ್ಯಾನರ್ಜಿ ವಿವಿಧ ವಿಷಯಗಳ ಬಗ್ಗೆ ವಿಸ್ತೃತ ಹಾಗೂ ಆರೋಗ್ಯಕರ ಚರ್ಚೆ ನಡೆಸಿದರು. ಬ್ಯಾನರ್ಜಿ ಅವರ ಭವಿಷ್ಯದ ಪ್ರಯತ್ನಕ್ಕೆ ಪ್ರಧಾನಿ ಮೋದಿ ಶುಭ ಹಾರೈಸಿದರು.

ಅನಂತರ ಬ್ಯಾನರ್ಜಿ ಅವರೊಂದಿಗಿನ ಭೇಟಿಯನ್ನು ಟ್ವಟರ್‌ನಲ್ಲಿ ಹಂಚಿಕೊಂಡಿರುವ ಪ್ರಧಾನಿ ಮೋದಿ, ನೊಬೆಲ್ ಗೌರವಾನ್ವಿತ ಅಭಿಜಿತ್ ಬ್ಯಾನರ್ಜಿ ಅವರೊಂದಿಗಿನ ಭೇಟಿ ಶ್ರೇಷ್ಠ. ಮಾನವ ಸಬಲೀಕರಣದ ಅವರ ಉತ್ಸಾಹ ಸ್ಪಷ್ಟವಾಗಿ ಕಾಣುತ್ತಿದೆ. ನಾವು ವಿವಿಧ ವಿಷಯಗಳ ಬಗ್ಗೆ ವಿಸ್ತೃತ ಹಾಗೂ ಆರೋಗ್ಯಕರ ಚರ್ಚೆ ನಡೆಸಿದೆವು. ಅವರ ಸಾಧನೆಗೆ ಭಾರತ ಹೆಮ್ಮೆ ಪಡುತ್ತದೆ. ಅವರು ಮುಂದಿನ ಪ್ರಯತ್ನಕ್ಕೆ ಶುಭ ಹಾರೈಸುತ್ತೇನೆ ಎಂದಿದ್ದಾರೆ.

 ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿರುವುದು ನನ್ನ ಭಾಗ್ಯ. ಪ್ರಧಾನಿ ಅವರು ಭಾರತದ ಬಗ್ಗೆ ನನ್ನೊಂದಿಗೆ ಸಾಕಷ್ಟು ಸಮಯ ಮಾತನಾಡಿದರು. ಅದು ವಿಶಿಷ್ಟವಾಗಿತ್ತು. ಯಾಕೆಂದರೆ ಅವರ ನೀತಿಗಳ ಹಿಂದಿನ ಚಿಂತನೆ ಅಪೂರ್ವ ಎಂದು ಬ್ಯಾನರ್ಜಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಬಳಿಕ ಹೇಳಿದರು.

ಮೋದಿ ಅವರೊಂದಿಗಿನ ಭೇಟಿ ವಿಶಿಷ್ಟ ಅನುಭವ ಎಂದು ವ್ಯಾಖ್ಯಾನಿಸಿದ ಬ್ಯಾನರ್ಜಿ, ಪ್ರಧಾನಿ ಅವರು ಆಡಳಿತ ಹಾಗೂ ಅಧಿಕಾರಿ ವರ್ಗದ ಬಗ್ಗೆ ಮಾತನಾಡಿದರು. ಅಲ್ಲದೆ, ಜನರ ದೃಷ್ಟಿಕೋನವನ್ನು ಗಣನೆಗೆ ತೆಗೆದುಕೊಂಡು ಅಧಿಕಾರಿ ವರ್ಗವನ್ನು ಸುಧಾರಣೆ ಮಾಡಲು ಸರಕಾರ ಹೇಗೆ ಪ್ರಯತ್ನಿಸುತ್ತಿದೆ ಎಂದು ಅವರು ವಿವರಿಸಿದರು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News