ಇವಿಎಂ ದುರುಪಯೋಗದಿಂದ ಬಿಜೆಪಿ ಗೆಲುವು: ಸಿದ್ದರಾಮಯ್ಯ

Update: 2019-10-22 14:20 GMT

ಹುಬ್ಬಳ್ಳಿ, ಅ.22: ಬಿಜೆಪಿಯವರು ಇವಿಎಂ(ಎಲೆಕ್ಟ್ರಾನಿಕ್ ಮತಯಂತ್ರ) ದುರುಪಯೋಗ ಮಾಡಿಕೊಂಡು ಚುನಾವಣೆಯಲ್ಲಿ ಗೆಲ್ಲುತ್ತಿರುವ ಸಾಧ್ಯತೆಗಳೂ ಇರಬಹುದು. ಅಭಿವೃದ್ಧಿ ಕಾರ್ಯಗಳನ್ನೆ ಮಾಡದಿದ್ದರೂ ಹೇಗೆ ಚುನಾವಣೆ ಗೆಲ್ಲಲು ಸಾಧ್ಯ? ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಮಂಗಳವಾರ ನಗರದ ವಿಮಾನ ನಿಲ್ದಾಣದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರ ಹಿಡಿಯಲು ಚುನಾವಣಾ ಆಯೋಗ ಸೇರಿದಂತೆ ಎಲ್ಲ ಸ್ವಾಯತ್ತ ಸಂಸ್ಥೆಗಳನ್ನು ಬಿಜೆಪಿ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು.

ಮಹಾರಾಷ್ಟ್ರ ಚುನಾವಣಾ ಪ್ರಚಾರಕ್ಕೆಂದು ಹೋದಾಗ ಅಲ್ಲಿನ ಸರಕಾರ ಐದು ವರ್ಷ ಏನು ಅಭಿವೃದ್ಧಿ ಮಾಡಿದೆ ಎಂಬ ಬಗ್ಗೆ ಅನುಮಾನ ಮೂಡಿತು. ಹೈದರಾಬಾದ್-ಪೂನಾ ಹೆದ್ದಾರಿಯಲ್ಲಿ ವಾಹನ ಸಂಚರಿಸಲು ಪರದಾಡಬೇಕಿದೆ. ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರ ತವರು ರಾಜ್ಯದ ಸ್ಥಿತಿಯೇ ಹೀಗೆ. ಆದರೂ ಜನ ಬಿಜೆಪಿಗೆ ಮತ ನೀಡುತ್ತಾರೆಯೇ? ಎಂದು ಅವರು ಪ್ರಶ್ನಿಸಿದರು.

ಚುನಾವಣೆ ಘೋಷಣೆಯಾದ ದಿನದಿಂದ ನೀತಿ ಸಂಹಿತೆ ಜಾರಿಯಾಗಬೇಕು. ಆದರೆ, ನಮ್ಮ ರಾಜ್ಯದಲ್ಲಿ 70 ದಿನ ಮುಂಚಿತವಾಗಿ ಚುನಾವಣೆಯ ದಿನವನ್ನು ಘೋಷಿಸಿದರೂ ಇನ್ನೂ ನೀತಿಸಂಹಿತೆ ಜಾರಿಯಾಗಿಲ್ಲ. ಇವೆಲ್ಲ ಕೇಂದ್ರ ಸರಕಾರ ಚುನಾವಣಾ ಆಯೋಗದ ಮೇಲೆ ಪ್ರಭಾವ ಬೀರುತ್ತಿರುವುದಕ್ಕೆ ಸ್ಪಷ್ಟ ನಿದರ್ಶನಗಳು ಎಂದು ಸಿದ್ದರಾಮಯ್ಯ ದೂರಿದರು.

ಇವಿಎಂ ಯಂತ್ರಗಳು ನಂಬಲರ್ಹವಲ್ಲ ಎಂಬ ಕಾರಣದಿಂದ ಅಮೆರಿಕಾ, ಜಪಾನ್, ಜರ್ಮನಿಯಂತಹ ಮುಂದುವರೆದ ರಾಷ್ಟ್ರಗಳೇ ಸಾಂಪ್ರದಾಯಿಕ ಮತದಾನದ ಶೈಲಿಯಾದ ಮತಚೀಟಿ ಬಳಕೆಯನ್ನು ಮರು ಅಳವಡಿಕೆ ಮಾಡಿಕೊಂಡಿರುವಾಗ ಭಾರತ ಏಕೆ ಮಾಡಿಕೊಳ್ಳಬಾರದು? ಇಷ್ಟೊಂದು ಜನ ಇವಿಎಂ ವಿಶ್ವಾಸಾರ್ಹತೆ ಬಗ್ಗೆ ಪ್ರಶ್ನಿಸಿದರೂ ಅದರ ಮೇಲೆ ಬಿಜೆಪಿಗರ ಅತಿಯಾದ ಪ್ರೀತಿಗೆ ಕಾರಣವೇನು? ಎಂದು ಅವರು ಕೇಳಿದರು.

ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ ಪರಿಹಾರ ಧನ ನೀಡಿಲ್ಲ, ತಾತ್ಕಾಲಿಕ ಶೆಡ್ ಹಾಕಿಕೊಟ್ಟಿಲ್ಲ, ಕೆಲವರಿಗೆ ಹತ್ತು ಸಾವಿರ ರೂ.ಕೊಟ್ಟಿದ್ದು ಬಿಟ್ಟರೆ ಇದುವರೆಗೂ ರಾಜ್ಯ ಸರಕಾರ ಬೇರೆ ಯಾವ ಗಮನಾರ್ಹ ಕೆಲಸವನ್ನು ಮಾಡಿಲ್ಲ. ಈಗ ಮತ್ತೆ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಸರಕಾರ ಜನರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಹೀಗಾದರೆ ಸಂತ್ರಸ್ತರ ಗತಿಯೇನು? ಎಂದು ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದರು.

ಯು.ಪಿ.ಎ ಅವಧಿಯಲ್ಲಿ ದೊರೆತ ಪರಿಹಾರಕ್ಕೂ, ಎನ್‌ಡಿಎ ಅವಧಿಯಲ್ಲಿ ದೊರೆತ ಪರಿಹಾರದ ಮೊತ್ತಕ್ಕೂ ತಾಳೆ ಹಾಕುವುದು ಮೂರ್ಖತನ. ಹಿಂದೆ ಸಂಭವಿಸಿದ ಪ್ರವಾಹಕ್ಕೂ, ಈ ಬಾರಿಯ ಪ್ರವಾಹಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಸಾವು, ನೋವು, ನಷ್ಟದ ಪ್ರಮಾಣ ಈ ಬಾರಿ ಅತಿ ಹೆಚ್ಚಾಗಿದೆ ಎಂದು ಅವರು ಹೇಳಿದರು.

ನಾನು ಮುಖ್ಯಮಂತ್ರಿಯಾಗಿ ಮೊದಲ ಬಜೆಟ್ ಮಂಡಿಸಿದಾಗ ಒಂದು ಲಕ್ಷ ಕೋಟಿ ರೂ.ಗಳಷ್ಟಿದ್ದ ಬಜೆಟ್ ಗಾತ್ರ, ಕೊನೆಯ ಬಜೆಟ್ ವೇಳೆಗೆ 2 ಲಕ್ಷ ಕೋಟಿ ರೂ.ಮೀರಿತ್ತು. ಅಂದರೆ ಹಣದ ಮೌಲ್ಯ ಒಂದೇ ಪ್ರಕಾರವಾಗಿ ಇಲ್ಲ. ಹಾಗಾಗಿ ಕೇಂದ್ರ ನೀಡಿರುವ ಪರಿಹಾರ ಹಣದ ಪ್ರಮಾಣದಲ್ಲಿ ಸ್ವಲ್ಪಹೆಚ್ಚಿರಬಹುದು. ಹಾಗೆಂದ ಮಾತ್ರಕ್ಕೆ ಅಗತ್ಯ ಪ್ರಮಾಣದ ನೆರವು ದೊರೆತಿದೆ ಎಂದಲ್ಲ ಎಂದು ಸಿದ್ದರಾಮಯ್ಯ ವಿವರಿಸಿದರು.

ನೆರೆ ಪರಿಹಾರ ಕಾರ್ಯಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷವಾಗಿ ನಾವು ನಿತ್ಯವೂ ಸರಕಾರವನ್ನು ಎಚ್ಚರಿಸುವ ಕಾರ್ಯ ಮಾಡುತ್ತಿದ್ದೇವೆ. ಆದರೆ, ಇದು ಭಂಡಗೆಟ್ಟ ಸರಕಾರ, ಅಧಿಕಾರದ ಹೊರತಾಗಿ ಅವರಿಗೆ ಬೇರೇನೂ ಬೇಡ. ನಿದ್ರಿಸುತ್ತಿರುವವರನ್ನು ಎಬ್ಬಿಸಬಹುದು, ಆದರೆ, ನಿದ್ರಿಸುತ್ತಿರುವಂತೆ ನಟಿಸುವವರನ್ನು ಎಬ್ಬಿಸುವುದು ಅಸಾಧ್ಯದ ಮಾತು ಎಂದು ಅವರು ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News