ಶೇ.17ರಷ್ಟು ಕುಸಿದ ಇನ್ಫೋಸಿಸ್ ಷೇರು ಬೆಲೆ; ಒಂದೇ ದಿನದಲ್ಲಿ 53,000 ಕೋಟಿ ರೂ. ಕಳೆದುಕೊಂಡ ಹೂಡಿಕೆದಾರರು

Update: 2019-10-22 15:24 GMT

ಹೊಸದಿಲ್ಲಿ,ಅ.22: ಅಲ್ಪಾವಧಿಯ ಆದಾಯ ಮತ್ತು ಲಾಭಗಳನ್ನು ಹೆಚ್ಚು ತೋರಿಸಲು ಕಂಪನಿಯ ಇಬ್ಬರು ಹಿರಿಯ ಅಧಿಕಾರಿಗಳು ನೀತಿಬಾಹಿರ ಪದ್ಧತಿ ಅನುಸರಿಸುತ್ತಿದ್ದಾರೆ ಎಂಬ ದೂರಿನಿಂದಾಗಿ ಮಂಗಳವಾರ ಮಾರುಕಟ್ಟೆಯಲ್ಲಿ ಭಾರೀ ಕಳವಳಗಳು ಸೃಷ್ಟಿಯಾಗಿದ್ದರಿಂದ ಪ್ರಮುಖ ಮಾಹಿತಿ ತಂತ್ರಜ್ಞಾನ ಸಂಸ್ಥೆ ಇನ್ಫೋಸಿಸ್‌ನ ಶೇರುಗಳ ಮೌಲ್ಯ ಸುಮಾರು ಶೇ.17ರಷ್ಟು ಕುಸಿದಿದ್ದು,ಶೇರುದಾರರು 53,451ಕೋಟಿ ರೂ.ನಷ್ಟವನ್ನು ಅನುಭವಿಸಿದ್ದಾರೆ.

 ಇನ್ಫೋಸಿಸ್ ಶೇರಿನ ಮೌಲ್ಯ ಬಾಂಬೆ ಶೇರು ವಿನಿಮಯ ಕೇಂದ್ರ (ಬಿಎಸ್‌ಇ)ದಲ್ಲಿ ಶೇ.16.21ರಷ್ಟು ಕುಸಿದು 643.30 ರೂ.ಗೆ ಮುಕ್ತಾಯಗೊಂಡರೆ,ರಾಷ್ಟ್ರೀಯ ಶೇರು ವಿನಿಮಯ ಕೇಂದ್ರ (ಎನ್‌ಎಸ್‌ಇ)ದಲ್ಲಿ ಶೇ.16.86ರಷ್ಟು ಕುಸಿದು 638.30 ರೂ.ಗೆ ತಲುಪಿ ಎಪ್ರಿಲ್ 2013ರ ಬಳಿಕ ಒಂದೇ ದಿನದಲ್ಲಿ ಶೇರಿನ ಗರಿಷ್ಠ ಕುಸಿತವನ್ನು ದಾಖಲಿಸಿತ್ತು. ಬಳಿಕ ಶೇ.16.65ಕ್ಕೆ ಚೇತರಿಸಿಕೊಂಡು 640 ರೂ.ಗೆ ಮುಕ್ತಾಯಗೊಂಡಿದೆ.

ಈ ತೀವ್ರ ಕುಸಿತವು ಕಂಪನಿಯ ಮಾರುಕಟ್ಟೆ ಮೌಲ್ಯದಲ್ಲಿ 53,450.92 ಕೋ. ರೂ.ಗಳನ್ನು ಅಳಿಸಿಹಾಕಿದ್ದು,ಅದೀಗ 2,76,300.08 ಕೋ.ರೂ.ಗೆ ಇಳಿದಿದೆ.

ಸೆನ್ಸೆಕ್ಸ್ ಮತ್ತು ನಿಫ್ಟಿ ಶೇರುಗಳ ಪೈಕಿ ಇನ್ಫೋಸಿಸ್ ಮಂಗಳವಾರ ಗರಿಷ್ಠ ನಷ್ಟ ಅನುಭವಿಸಿದ್ದು,ಬಿಎಸ್‌ಇಯಲ್ಲಿ ಕಂಪನಿಯ 117.70 ಲಕ್ಷ ಮತ್ತು ಎನ್‌ಎಸ್‌ಇಯಲ್ಲಿ ಒಂಭತ್ತು ಕೋಟಿಗೂ ಅಧಿಕ ಶೇರುಗಳ ವಹಿವಾಟು ನಡೆದಿದೆ.

ವರದಿಗಳಂತೆ ಕಂಪನಿಯ ‘ನೈತಿಕ ಉದ್ಯೋಗಿಗಳು ’ಎಂದು ಕರೆದುಕೊಂಡಿರುವ ಗುಂಪೊಂದು ಕಂಪನಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಲೀಲ್ ಪಾರೇಖ್ ಮತ್ತು ಮುಖ್ಯ ಹಣಕಾಸು ಅಧಿಕಾರಿ ನಿರಂಜನ ರಾಯ್ ಅವರು ಅಲ್ಪಾವಧಿ ಆದಾಯ ಮತ್ತು ಲಾಭವನ್ನು ಹೆಚ್ಚಿಸಲು ನೀತಿಬಾಹಿರ ಪದ್ಧತಿಗಳಲ್ಲಿ ತೊಡಗಿಕೊಂಡಿದ್ದಾರೆ ಎಂದು ಆರೋಪಿಸಿದೆ.

ಕಂಪನಿಯ ಪರಿಪಾಠದಂತೆ ಈ ದೂರನ್ನು ಆಡಿಟ್ ಕಮಿಟಿಗೆ ಸಲ್ಲಿಸಲಾಗಿದೆ ಮತ್ತು ಕಂಪನಿಯ ‘ವಿಸಲ್ ಬ್ಲೋವರ್’ ನೀತಿಗೆ ಅನುಗುಣವಾಗಿ ಈ ದೂರನ್ನು ಪರಿಶೀಲಿಸಲಾಗುವುದು ಎಂದು ಇನ್ಫೋಸಿಸ್ ಸೋಮವಾರ ತಿಳಿಸಿತ್ತು.

ದೂರಿನ ಕುರಿತು ಕಂಪನಿಯ ಆಡಿಟ್ ಕಮಿಟಿಯು ಸ್ವತಂತ್ರ ತನಿಖೆಯನ್ನು ಕೈಗೊಳ್ಳಲಿದೆ ಎಂದು ಇನ್ಫೋಸಿಸ್ ಅಧ್ಯಕ್ಷ ನಂದನ ನಿಲೇಕಣಿ ಅವರು ಮಂಗಳವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸಿಇಒ ಸಲೀಲ್ ಪಾರೇಖ್ ಅವರು ಇಬ್ಬರು ಸ್ವತಂತ್ರ ನಿರ್ದೇಶಕರಾದ ಡಿ.ಸುಂದರಂ ಮತ್ತು ಡಿ.ಎನ್.ಪ್ರಹ್ಲಾದ ಅವರನ್ನು ‘ಮದ್ರಾಸಿ’ಗಳು ಎಂದು ಅಣಕಿಸುತ್ತಿದ್ದರು ಎಂದೂ ‘ನೈತಿಕ ಉದ್ಯೋಗಿ’ಗಳ ಗುಂಪು ತನ್ನ ದೂರಿನಲ್ಲಿ ಆರೋಪಿಸಿದೆ.

ಪಾರೇಖ್ ಅವರು ಇನ್ಫೋಸಿಸ್ ಆಡಳಿತ ಮಂಡಳಿಯಲ್ಲಿ ಪ್ರಮುಖ ಸ್ವತಂತ್ರ ನಿರ್ದೇಶಕಿಯಾಗಿರುವ ಬಯೊಕಾನ್ ಅಧ್ಯಕ್ಷೆ ಕಿರಣ ಮುಝುಮ್ದಾರ್-ಶಾ ಅವರನ್ನು ‘ದಿವಾ (ದೇವತೆ)’ಎಂದು ಪ್ರಸ್ತಾಪಿಸುತ್ತಿದ್ದರು ಎಂದೂ ಗುಂಪು ಆರೋಪಿಸಿದೆ.

‘ಆಡಳಿತ ಮಂಡಳಿಯಲ್ಲಿಯ ಯಾರಿಗೂ ಈ ವಿಷಯಗಳು ಅರ್ಥವಾಗುವುದಿಲ್ಲ,ಶೇರಿನ ಬೆಲೆಗಳು ಏರುತ್ತಿರುವವರೆಗೂ ಅವರು ಖುಷಿಯಾಗಿರುತ್ತಾರೆ. ಇಬ್ಬರು ‘ಮದ್ರಾಸಿಗಳು’ ಮತ್ತು ‘ದಿವಾ’ಮೂರ್ಖ ಪ್ರಶ್ನೆಗಳನ್ನು ಎತ್ತುತ್ತಿರುತ್ತಾರೆ. ನೀವು ಸುಮ್ಮನೆ ಹೂಂ ಎಂದು ಹೇಳಿ ಕಡೆಗಣಿಸಿಬಿಡಿ ’ಎಂದು ಸಲೀಲ್ ತಮಗೆ ತಿಳಿಸಿದ್ದಾಗಿ ಗುಂಪು ದೂರಿನಲ್ಲಿ ಉಲ್ಲೇಖಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News