ಬಿಲ್ಡರ್‌ನಿಂದ ಬ್ರಾಹ್ಮಣರಿಗೆ ಮಾತ್ರ ವಸತಿ ಮಾರಾಟ ಫಲಕ: ವ್ಯಾಪಕ ಟೀಕೆ

Update: 2019-10-22 14:11 GMT

ತಿರುಚ್ಚಿ,ಅ.22: ತಮಿಳುನಾಡಿನ ಬಿಲ್ಡರ್‌ವೊಬ್ಬರು ತಾನು ಹೊಸದಾಗಿ ನಿರ್ಮಿಸಿರುವ ವಸತಿ ಸಮುಚ್ಚಯದಲ್ಲಿ ಬ್ರಾಹ್ಮಣರಿಗೆ ಮಾತ್ರ ವಸತಿ ನೀಡಲಾಗುವುದು ಎಂದು ಫಲಕ ಹಾಕಿರುವುದು ಸದ್ಯ ವ್ಯಾಪಕ ಟೀಕೆಗೆ ಗ್ರಾಸವಾಗಿದ್ದು, ತಮಿಳುನಾಡು ಅಸ್ಪಶ್ಯತೆ ನಿವಾರಣೆ ರಂಗ (ಟಿಎನ್‌ಯುಇಎಫ್) ಬಿಲ್ಡರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಡಳಿತಕ್ಕೆ ಆಗ್ರಹಿಸಿದೆ.

ತಿರುಚ್ಚಿಯ ಶ್ರೀರಂಗಂನ ಮೇಲೂರು ರಸ್ತೆಯಲ್ಲಿರುವ ಲಕ್ಷ್ಮಿನಗರದಲ್ಲಿ ಓಂ ಶಕ್ತಿ ಕನ್ಸ್‌ಸ್ಟ್ರಕ್ಷನ್ಸ್ ನೂತನವಾಗಿ ನಿರ್ಮಿಸಿರುವ ಶ್ರೀಶಕ್ತಿ ರಂಗ ಅಪಾರ್ಟ್‌ಮೆಂಟ್‌ನಲ್ಲಿ ಬ್ರಾಹ್ಮಣರಿಗೆ ಮಾತ್ರ ವಸತಿ ಮಾರಟ ಮಾಡಲಾಗುವುದು ಎಂದು ಫಲಕ ಹಾಕಲಾಗಿತ್ತು. ಇದರ ವಿರುದ್ದ ತೀವ್ರ ವಾಗ್ದಾಳಿ ನಡೆಸಿರುವ ಟಿಎನ್‌ಯುಇಎಫ್‌ನ ಜಿಲ್ಲಾ ಕಾರ್ಯದರ್ಶಿ ವಿನೋದ್ ಮಣಿ ತಿರುಚ್ಚಿ ಆಯುಕ್ತ ಎಸ್.ಶಿವರಾಸು ಅವರಿಗೆ ಮನವಿ ಸಲ್ಲಿಸಿದ್ದು, ಇದು ಅಸ್ಪೃಶ್ಯತೆಯ ಹೊಸ ರೂಪ. ವಸತಿಗಳು ಮಾರಾಟಕ್ಕಿವೆ, ಆದರೆ ಕೇವಲ ಬ್ರಾಹ್ಮಣರಿಗೆ ಮಾತ್ರ ಎಂದು ಬಿಲ್ಡರ್ ಅಷ್ಟು ಸ್ಪಷ್ಟವಾಗಿ ತಿಳಿಸಿದ್ದಾನೆ. ಇದರ ಹಿಂದಿರುವ ಮುಖ್ಯ ಉದ್ದೇಶ ವಸತಿಗಳನ್ನು ದಲಿತರು ಮತ್ತು ಅಲ್ಪಸಂಖ್ಯಾತರಿಗೆ ಮಾರಾಟ ಮಾಡದಿರುವುದೇ ಆಗಿದೆ ಎಂದು ತಿಳಿಸಿದ್ದಾರೆ. ತನ್ನ ಅಪಾರ್ಟ್‌ಮೆಂಟ್‌ಗಳಲ್ಲಿ ಸ್ವಚ್ಛತಾ ಕಾರ್ಯದಲ್ಲಿ ಯಾವ ಸಮುದಾಯದ ಜನರು ತೊಡಗಿದ್ದಾರೆ ಎನ್ನುವುದನ್ನು ತಿಳಿಸುವಂತೆ ಸಂಘಟನೆ ಬಿಲ್ಡರ್‌ಗೆ ಆಗ್ರಹಿಸಿದೆ.

ಟೀಕೆ ಹಿನ್ನೆಲೆ ಫಲಕ ತೆರವುಗೊಳಿಸಿದ ಬಿಲ್ಡರ್

ಬ್ರಾಹ್ಮಣೆ ಮಾತ್ರ ಫಲಕದ ವಿರುದ್ಧ ಟೀಕೆಗಳು ಕೇಳಿಬಂದ ಹಿನ್ನೆಲೆಯಲ್ಲಿ ಓಂ ಶಕ್ತಿ ಕನ್ಸ್‌ಸ್ಟ್ರಕ್ಷನ್ ಮಾಲಕ ಸದ್ಯ ತಾನು ಹಾಕಿಸಿದ್ದ ಫಲಕವನ್ನು ತೆರವುಗೊಳಿಸಿದ್ದಾರೆ. ತನ್ನ ವಿರುದ್ಧದ ಆರೋಪವನ್ನು ತಳ್ಳಿಹಾಕಿರುವ ಬಿಲ್ಡರ್, ನಿಜವಾಗಿ ನಾವು ಕೇವಲ ಸಸ್ಯಹಾರಿಗಳಿಗೆ ಮಾತ್ರ ವಸತಿ ನೀಡುವುದಾಗಿ ತಿಳಿಸುವ ಉದ್ದೇಶ ಹೊಂದಿದ್ದೆವು. ಆದರೆ ಮುದ್ರಣದ ಸಮಯದಲ್ಲಿ ಅದು ತಪ್ಪಾಗಿ ಬ್ರಾಹ್ಮಣ ಎಂದಾಗಿದೆ. ನಾವು ಯಾವ ಜಾತಿ ಅಥವಾ ಧರ್ಮದ ವಿರುದ್ಧವೂ ಇಲ್ಲ. ನಮ್ಮ ಫ್ಲಾಟ್‌ಗಳನ್ನು ಖರೀದಿಸಲು ಯಾರಿಗೆ ಇಷ್ಟವಿದೆಯೋ ಅವರು ಖರೀದಿಸಬಹುದು ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News