ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ, ಮಾಡುವುದೂ ಇಲ್ಲ: ಬಸವರಾಜ ಹೊರಟ್ಟಿ

Update: 2019-10-22 14:53 GMT

ಬೆಂಗಳೂರು, ಅ.22: ನನ್ನ ರಾಜಕೀಯ ಬದುಕಿನಲ್ಲಿ ಇದುವರೆಗೂ ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ, ಭವಿಷ್ಯದಲ್ಲೂ ಮಾಡುವುದಿಲ್ಲವೆಂದು ಜೆಡಿಎಸ್ ನಾಯಕ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದೊಳಗೆ ಅಸಮಾಧಾನವಿದ್ದರೆ ಬಹಿರಂಗವಾಗಿಯೇ ಹೇಳುತ್ತೇನೆ. ಅದರಲ್ಲಿ ಯಾವ ಹಿಂಜರಿಕೆಯೂ ಇಲ್ಲ. ಆದರೆ, ನಾಯಕತ್ವವನ್ನು ಪ್ರಶ್ನೆ ಮಾಡಿಲ್ಲ. ಮೈತ್ರಿ ಸರಕಾರವಿದ್ದಾಗ ನಮ್ಮನ್ನು ಸರಿಯಾಗಿ ನಡೆಸಿಕೊಂಡಿಲ್ಲ ಎಂಬ ಅಸಮಾಧಾನವಿದೆ ಎಂದರು.

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಪ್ರಮಾಣಪತ್ರ ಕೊಡುವ ಯೋಗ್ಯತೆ ನನಗಿಲ್ಲ. ಅವರು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದವರು. ಅವರ ಬಗ್ಗೆ ಮಾತನಾಡುವುದಕ್ಕೆ ಆಗುವುದಿಲ್ಲ. ನಾನು ಯಾವ ಸಂದರ್ಭದಲ್ಲೂ ಪಕ್ಷ ಬಿಡುವ ಯೋಚನೆ ಮಾಡಿಲ್ಲ. ಪಕ್ಷದ ಹಿತದೃಷ್ಟಿಯಿಂದ ಎಲ್ಲರೂ ಒಂದೆಡೆ ಸೇರಿ ಮಾತುಕತೆ ನಡೆಸಿದ್ದೇವಷ್ಟೆ ಎಂದು ಅವರು ತಿಳಿಸಿದರು.

ನಾನು ಹಿರಿಯ ವಿಧಾನಪರಿಷತ್ ಸದಸ್ಯನಾಗಿದ್ದು, ಮನೆಯ ಯಜಮಾನರ ರೀತಿ ಕೆಲವು ಮುಖಂಡರ ಜತೆ ಚರ್ಚೆ ಮಾಡಿದ್ದೇನೆ. ಆದರೆ, ಈ ಕ್ಷಣದವರೆಗೂ ಪಕ್ಷ ಬಿಡುವಂತಹ ಯೋಜನೆ ಮಾಡಿಲ್ಲ. ಒಂದು ವೇಳೆ ಪಕ್ಷ ತೊರೆದು ಹೋಗುವುದಾಗಿದ್ದಾರೆ ದೇವೇಗೌಡರು ಹಾಗೂ ಮಾಧ್ಯಮದವರೆಗೆ ತಿಳಿಸಿಯೇ ಹೋಗುತ್ತಿದ್ದೆ. ಕಳೆದ 1983ರಿಂದಲೇ ಜನತಾ ಪರಿವಾರದಲ್ಲೇ ಇದ್ದೇನೆ, ಮುಂದೆಯೂ ಇಲ್ಲೇ ಇರುತ್ತೇನೆಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ತರಾತುರಿಯಲ್ಲಿ ಪಕ್ಷ ಬಿಡುವ ಅನಿವಾರ್ಯತೆ ಇಲ್ಲ. ಶಾಸಕರು ಯಾರು ನನ್ನ ಜತೆ ಮಾತನಾಡಿಲ್ಲ. ಶಾಸಕರು ನನ್ನ ಜತೆ ಮಾತನಾಡುವಷ್ಟು ನಾನು ದೊಡ್ಡವನಲ್ಲ. ಆದರೆ, ಸಭಾಪತಿ ಸ್ಥಾನ ಕೈ ತಪ್ಪಿದಾಗ ನನಗೆ ನೋವುಂಟಾಗಿತ್ತು. ಆ ಸಂದರ್ಭದಲ್ಲಿ ಸಮಾಧಾನ ಹೇಳಿದ್ದರೆ ಸರಿಯಾಗುತ್ತಿತ್ತು. ಕಣ್ಣೀರು ಹಾಕುವಂತಹ ಪರಿಸ್ಥಿತಿ ಉಂಟಾಗಿತ್ತು. ಆ ಬಗ್ಗೆ ನೋವಿತ್ತು. ಆದರೆ, ದೇವೇಗೌಡರ ಬಗ್ಗೆ ಯಾವುದೇ ಅಸಮಾಧಾನವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News