ರಾಜ್ಯಾದ್ಯಂತ ಮಹಾ ಮಳೆ: ಆರು ಮಂದಿ ಸಾವು, ಕೋಟ್ಯಂತರ ರೂ. ಬೆಳೆ ನಾಶ

Update: 2019-10-22 16:25 GMT

ಬೆಂಗಳೂರು, ಅ.22: ಹಿಂದೆಂದೂ ಕಂಡರಿಯದ ರೀತಿಯಲ್ಲಿ ರಾಜ್ಯದ ಉತ್ತರ ಕರ್ನಾಟಕದಲ್ಲಿ ಉಂಟಾದ ನೆರೆಯಿಂದಾಗಿ ಇನ್ನೂ ಚೇತರಿಸಿಕೊಳ್ಳಲಾಗದ ಸ್ಥಿತಿಯಲ್ಲಿರುವಾಗಲೇ, ಮತ್ತೊಂದು ಭಾರೀ ಮಹಾ ಮಳೆಗೆ ಇಡೀ ಕರ್ನಾಟಕ ತತ್ತರಿಸಿ ಹೋಗಿದೆ.

ಎರಡು ತಿಂಗಳ ಹಿಂದೆ ಬದುಕನ್ನು ನುಚ್ಚುನೂರು ಮಾಡಿದ್ದ ಮಹಾಮಳೆ ಮತ್ತೆ ಕರ್ನಾಟಕ ರಾಜ್ಯದ ನಾನಾ ದಿಕ್ಕುಗಳಲ್ಲಿ ಭೋರ್ಗರೆದು ಸುರಿಯತೊಡಗಿದ್ದು, ನದಿಗಳ ಪ್ರವಾಹ ಉಕ್ಕೇರತೊಡಗಿದೆ. ಕೆಲವು ನಗರಗಳಲ್ಲಿನ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.

ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು, ಸೇತುವೆಗಳು ಮುಳುಗಡೆಯಾಗಿವೆ. ರಾಜ್ಯದ 15ಕ್ಕೂ ಅಧಿಕ ಜಿಲ್ಲೆಗಳಲ್ಲಿ ಮನೆಗಳು ಕುಸಿದಿವೆ. ರೈತರ ಕೈಗೆ ಬರುವ ಹೊತ್ತಿನಲ್ಲಿದ್ದ ಬೆಳೆ ಸಂಪೂರ್ಣ ನೆಲಕಚ್ಚಿಹೋಗಿದೆ. ದಿಕ್ಕುಗಾಣದ ಸ್ಥಿತಿಗೆ ರೈತರು ತಲುಪಿದ್ದಾರೆ. ಬೆಳೆಗಳು ಜಲಾವೃತವಾಗಿದ್ದು, ಕೋಟ್ಯಂತರ ರೂ.ಗಳಷ್ಟು ನಷ್ಟವಾಗಿದೆ.

ಉತ್ತರ ಕರ್ನಾಟಕದಲ್ಲಿ ಬಹುತೇಕ ಸೇತುವೆ ಮುಳುಗಡೆಯಾಗಿರುವ ಕಾರಣ ಕಲ್ಯಾಣ ಕರ್ನಾಟಕದ ಬೀದರ್, ಕಲಬುರ್ಗಿ, ರಾಯಚೂರು, ಮಂತ್ರಾಲಯ, ದಕ್ಷಿಣ ಕರ್ನಾಟಕ ಸೇರಿದಂತೆ ಪ್ರಮುಖ ನಗರಗಳಿಗೆ ಸಂಪರ್ಕ ಕಡಿತಗೊಂಡಿದೆ. ಈ ಕಡೆಗಳಿಂದ ಬರುವ ರೈಲುಗಳನ್ನು ತಡೆಯಲಾಗಿದ್ದು, ಸಂಪೂರ್ಣ ಸಂಪರ್ಕ ಕಡಿತಗೊಂಡಿದೆ.

ಭಾರೀ ಮಳೆಯಿಂದಾಗಿ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ನೂರಾರು ಗ್ರಾಮಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಬಳ್ಳಾರಿ, ರಾಯಚೂರು, ದಾವಣಗೆರೆ, ಹಾವೇರಿ, ಬಾಗಲಕೋಟೆ, ಚಿತ್ರದುರ್ಗ, ಮಂಡ್ಯ, ಮೈಸೂರು, ಕೊಡಗು, ಕರಾವಳಿ ಸೇರಿದಂತೆ ಹಲವು ಜಿಲ್ಲೆಗಳ ತಾಲೂಕುಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಜಾನುವಾರುಗಳಿಗೆ ಕಾಲುಬಾಯಿ ಜ್ವರದ ಲಸಿಕೆ ಹಾಕಲು ತೆರಳಿ ಹರಿಯುತ್ತಿದ್ದ ನೀರಿನಲ್ಲಿ ಅಪಾಯಕ್ಕೆ ಸಿಲುಕಿದ್ದ ಪಶು ವೈದ್ಯರಿಬ್ಬರನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಪಶುವೈದ್ಯರಾದ ಡಾ.ಅರವಿಂದ ಮತ್ತು ಡಾ.ದಿವ್ಯಾ ಅಪಾಯದಿಂದ ಪಾರಾಗಿದ್ದಾರೆ.

ದಕ್ಷಿಣ ಕರ್ನಾಟಕದ ಜಿಲ್ಲೆಗಳಾದ ಮಂಡ್ಯ, ಮೈಸೂರು, ಬೆಂಗಳೂರು ನಗರದಲ್ಲಿಯೂ ಅಪಾರವಾದ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಮಂಡ್ಯ ಹಾಗೂ ಮೈಸೂರು ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ದಾರಿಗಳು ಬಂದ್ ಆಗಿದ್ದು, ಜನರು ಪರದಾಡುತ್ತಿದ್ದಾರೆ.

ಎರಡು ತಿಂಗಳ ಹಿಂದೆ ಬದುಕನ್ನು ನುಚ್ಚುನೂರು ಮಾಡಿದ್ದ ಮಹಾಮಳೆ ಮತ್ತೆ ನಾಡಿನ ನಾನಾ ದಿಕ್ಕುಗಳಲ್ಲಿ ಭೋರ್ಗರೆದು ಸುರಿಯತೊಡಗಿದೆ. ಉತ್ತರ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಆರು ಜನ ಮೃತಪಟ್ಟಿದ್ದಾರೆ.

ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಅಧಿಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜನರು ಜಾನುವಾರುಗಳಿಗೆ ನೀರು ಕುಡಿಸಲು, ಬಟ್ಟೆ ತೊಳೆಯಲು, ಸ್ನಾನ ಅಥವಾ ಕೃಷಿ ಚಟುವಟಿಕೆ ಕೈಗೊಳ್ಳಲು ನದಿಪಾತ್ರಕ್ಕೆ ಹೋಗದಂತೆ ಸ್ಥಳೀಯ ಪಂಚಾಯತ್‌ಗಳು ಸಂದೇಶ ರವಾನಿಸಿವೆ.

ಜಿಲ್ಲೆಯಲ್ಲಿ ಪ್ರವಾಹದಿಂದಾಗಿ ಜನರು ತತ್ತರಿಸುತ್ತಿದ್ದಾರೆ. ಆದರೆ, ಸಂಕಷ್ಟದಲ್ಲಿರುವ ಜನತೆಗೆ ಧೈರ್ಯ ಹೇಳಬೇಕಾದ ಬಾಗಲಕೋಟೆ ಜಿಲ್ಲೆಯ ಉಸ್ತುವಾರಿ ಸಚಿವ ಆಗಿರುವ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಜಿಲ್ಲೆಯತ್ತ ಸುಳಿಯುತ್ತಲೇ ಇಲ್ಲ. ಶಾಲಾ ಬಾಲಕಿಯೊಬ್ಬಳು ಪ್ರವಾಹದ ನೀರಲ್ಲೇ ನಿಂತು ರಸ್ತೆಗಳ ಸುಧಾರಣೆಗೆ ಡಿಸಿಎಂ ಅವರನ್ನು ಒತ್ತಾಯಿಸಿ ಬರೆದ ಪತ್ರ ಓದಿದ್ದಾಳೆ. ಡಿಸಿಎಂ ಇದು ಯಾರೋ ಬರೆದು ಓದಿಸಿದ್ದು ಎನ್ನುವ ಉಢಾಪೆ ಉತ್ತರ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News