ಬಂಡೀಪುರ: ಆನೆ ದಾಳಿಗೆ ಇಬ್ಬರು ರೈತರ ಸ್ಥಿತಿ ಚಿಂತಾಜನಕ, ಮೂರು ಜಾನುವಾರು ಬಲಿ

Update: 2019-10-22 17:01 GMT

ಚಾಮರಾಜನಗರ, ಅ. 22: ತಮಿಳುನಾಡಿನಿಂದ ಕರ್ನಾಟಕಕ್ಕೆ ಬಂದ ಪುಂಡಾನೆ ದಾಂಧಲೆಯಿಂದ ರೈತರಿಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಮೂರು ಜಾನುವಾರು ಬಲಿಯಾಗಿರುವ ಘಟನೆ ಜಿಲ್ಲೆಯ ಗುಂಡ್ಲುಪೇಟೆಯ ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ಕಾಡಂಚಿನ ಗ್ರಾಮದಲ್ಲಿ ನಡೆದಿದೆ. 

ಕರ್ನಾಟಕ ತಮಿಳುನಾಡು ರಾಜ್ಯಗಳ ಗಡಿಯಲ್ಲಿರುವ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅಭಯಾರಣ್ಯಕ್ಕೆ ತಮಿಳುನಾಡಿನಿಂದ ಕಾಲರ್ ಐಡಿ ಹಾಕಿರುವ ಆನೆ ಆಗಮಿಸಿ ದಾಂಧಲೆ ನಡೆಸಿದ ಪರಿಣಾಮ ಇಬ್ಬರು ರೈತರು ಗಂಭೀರ ಗಾಯಗೊಂಡಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಆನೆ ದಾಳಿಗೆ ಮೂರು ಜಾನುವಾರುಗಳೂ ಬಲಿಯಾಗಿದ್ದು, ಈ ಘಟನೆ ಗುಂಡ್ಲುಪೇಟೆ ತಾಲೂಕಿನ ಶಿವಪುರ ಮತ್ತು ಹಂಗಳ ಗ್ರಾಮದಲ್ಲಿ ನಡೆದಿದೆ.

ಬಂಡೀಪುರ ಅಭಯಾರಣ್ಯಕ್ಕೆ ಹೊಂದಿಕೊಂಡಂತಿರುವ ತಮಿಳುನಾಡಿನ ಮದುಮಲೈ ಅರಣ್ಯದಿಂದ ಕಾಲರ್ ಐಡಿ ಹಾಕಿಕೊಂಡಿರುವ ಆನೆಯು ಹಾದಿ ತಪ್ಪಿ ಕರ್ನಾಟಕದ ಬಂಡೀಪುರದ ಅರಣ್ಯದಂಚಿನ ಶಿವಪುರ ಗ್ರಾಮಕ್ಕೆ ಬಂದಿದ್ದು, ಗ್ರಾಮದ ಹೊರವಲಯದಲ್ಲಿರುವ ಜಮೀನಿನಲ್ಲಿ ಸಿದ್ದಯ್ಯವರವರ ಮೇಲೆ ದಾಳಿ ನಡೆಸಿದೆ. ಪರಿಣಾಮ ಸಿದ್ದಯ್ಯರವರ ಸ್ಥಿತಿ ಚಿಂತಾಜನಕವಾಗಿದ್ದು, ಸಿದ್ದಪ್ಪರವರ ಜಾನುವಾರು ಸಾವನ್ನಪ್ಪಿದೆ.

ಬಳಿಕ ಶಿವಪುರದಿಂದ ಹಂಗಳದತ್ತ ಬಂದ ಪುಂಡಾನೆ ಹಂಗಳದ ಕೆರೆ ಹಾಗೂ ಕಾಡಂಚಿನ ಗ್ರಾಮದ ಜಮೀನಿನಲ್ಲಿ ಸ್ವಾಮಿ ಎಂಬವರ ಮೇಲೆ ದಾಳಿ ನಡೆಸಿದೆ. ಗಾಯಗೊಂಡ ಇಬ್ಬರಿಗೂ ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಕಳುಹಿಸಲಾಯಿತು. 

ಹಂಗಳ ಗ್ರಾಮದ ನಾಗಪ್ಪ ಮತ್ತು ಮಂಜುರವರಿಗೆ ಸೇರಿದ ಹಸುಗಳ ಮೇಲೆಯೂ ಆನೆ ದಾಳಿ ನಡೆಸಿದ್ದು, ಪರಿಣಾಮ ಎರಡು ಹಸುಗಳು ಬಲಿಯಾಗಿದೆ. ಬಂಡೀಪುರದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಆನೆಯನ್ನು ತಮಿಳುನಾಡಿನತ್ತ ಕಳುಹಿಸಲು ಪ್ರಯತ್ನಿಸುತ್ತಿದ್ದಾರೆ. ಕೂಬಿಂಗ್ ಸ್ಪೆಷಲಿಸ್ಟ್ ಅಭಿಮನ್ಯು ಆನೆಯನ್ನು ಸಹ ಆನೆ ಶಿಬಿರದಿಂದ ಕರೆಸಲು ಮುಂದಾಗಿರುವ ಅರಣ್ಯಾಧಿಕಾರಿಗಳು ಕಾಡಾನೆಗಳ ಉಪಟಳ ನಿಯಂತ್ರಣಕ್ಕೆ ಮುಂದಾಗಿದ್ದಾರೆ.

ಕಳೆದ ಕೆಲವು ದಿನಗಳ ಹಿಂದೆ ಹುಲಿ ದಾಳಿಗೆ ಇಬ್ಬರು ಅನ್ನದಾತರು ಬಲಿಯಾದ ಘಟನೆಯ ಬೆನ್ನಿಗೇ ಈಗ ತಮಿಳುನಾಡಿನಿಂದ ದಿಕ್ಕು ತಪ್ಪಿ ಬಂದ ಪುಂಡಾನೆಯಿಂದ ಇಬ್ಬರು ರೈತರು ಗಂಭೀರ ಗಾಯಗೊಂಡಿದ್ದಾರೆ.

ಆನೆ ಮರಿ ಸಾವು: ಈ ನಡುವೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಎಸಿಎಫ್ ನಿವಾಸದ ಹಿಂಭಾಗದಲ್ಲಿ ಎರಡು ವರ್ಷದ ಆನೆ ಮರಿಯೊಂದು ಹೊಟ್ಟೆ ನೋವಿನಿಂದ ಸಾವನ್ನಪ್ಪಿದ ಘಟನೆ ನಡೆದಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳು ಆನೆಯ ಶವವನ್ನು ನುರಿತ ವೈದ್ಯರಿಂದ ಪರೀಕ್ಷೆ ನಡೆಸಿದ ಬಳಿಕ ಆನೆ ಮರಿಯನ್ನು ಅಂತ್ಯ ಸಂಸ್ಕಾರ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News