18 ಜಿಲ್ಲೆಗಳ 49 ತಾಲೂಕುಗಳು ಬರಪೀಡಿತ: ಸಚಿವ ಆರ್.ಅಶೋಕ್

Update: 2019-10-22 17:20 GMT

ಬೆಂಗಳೂರು, ಅ.22: 2019ರ ಮುಂಗಾರು ಋತುವಿನಲ್ಲಿ 18 ಜಿಲ್ಲೆಗಳಲ್ಲಿನ 49 ತಾಲೂಕುಗಳನ್ನು ‘ಬರಪೀಡಿತ ತಾಲೂಕು’ಗಳೆಂದು ಘೋಷಿಸುತ್ತಿರುವುದಾಗಿ ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರು ನಗರ ಜಿಲ್ಲೆಯ ಆನೇಕಲ್, ಬೆಂಗಳೂರು ಉತ್ತರ, ಬೆಂಗಳೂರು ಪೂರ್ವ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ಹೊಸಕೋಟೆ, ನೆಲಮಂಗಲ ತಾಲೂಕು. ರಾಮನಗರ ಜಿಲ್ಲೆಯ ಕನಕಪುರ ಹಾಗೂ ರಾಮನಗರ ತಾಲೂಕು, ಕೋಲಾರ ಜಿಲ್ಲೆಯ ಬಂಗಾರಪೇಟೆ, ಕೋಲಾರ, ಮಾಲೂರು, ಮುಳಬಾಗಿಲು, ಶ್ರೀನಿವಾಸಪುರ ತಾಲೂಕು, ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ, ಚಿಂತಾಮಣಿ, ಗುಡಿಬಂಡೆ ತಾಲೂಕು.

ತುಮಕೂರು ಜಿಲ್ಲೆಯ ಗುಬ್ಬಿ, ಕೊರಟಗೆರೆ, ಕುಣಿಗಲ್, ಮಧುಗಿರಿ, ಪಾವಗಡ, ತುಮಕೂರು, ತುರುವೇಕೆರೆ ತಾಲೂಕು, ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ, ಚಿತ್ರದುರ್ಗ, ಮೊಳಕಾಲ್ಮೂರು ತಾಲೂಕು, ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕು ಹಾಗೂ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕು.

ಬಳ್ಳಾರಿ ಜಿಲ್ಲೆಯ ಬಳ್ಳಾರಿ, ಹೊಸಪೇಟೆ, ಸಂಡೂರು, ಸಿರಗುಪ್ಪ ತಾಲೂಕು, ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕು, ರಾಯಚೂರು ಜಿಲ್ಲೆಯ ಮಾನ್ವಿ, ರಾಯಚೂರು, ಸಿಂಧನೂರು ತಾಲೂಕು, ಕಲಬುರಗಿ ಜಿಲ್ಲೆಯ ಚಿಂಚೋಳಿ, ಜೇವರ್ಗಿ, ಸೇಡಂ ತಾಲೂಕು, ಯಾದಗಿರಿ ಜಿಲ್ಲೆಯ ಯಾದಗಿರಿ, ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕು.

ಬಾಗಲಕೋಟೆ ಜಿಲ್ಲೆಯ ಬಾದಾಮಿ, ಬಿಳಗಿ, ಜಮಖಂಡಿ ತಾಲೂಕು, ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ, ವಿಜಯಪುರ, ಇಂಡಿ ಹಾಗೂ ಸಿಂಧಗಿ ತಾಲೂಕು, ಗದಗ ಜಿಲ್ಲೆಯ ನರಗುಂದ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಲಾಗುತ್ತಿದೆ ಎಂದು ಅಶೋಕ್ ಹೇಳಿದರು.

ಆಗಸ್ಟ್ ಅಂತ್ಯದವರೆಗೆ 30 ತಾಲೂಕುಗಳನ್ನು ಬರಪೀಡಿತವೆಂದು ಗುರುತಿಸಲಾಗಿತ್ತು, ಸೆಪ್ಟಂಬರ್ ಅಂತ್ಯಕ್ಕೆ ಇನ್ನೂ 19 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಪರಿಗಣಿಸಲಾಯಿತು ಎಂದು ಅಶೋಕ್ ಹೇಳಿದರು.

ಪ್ರವಾಹ ಪರಿಸ್ಥಿತಿ: ರಾಜ್ಯದ ಉತ್ತರ ಒಳನಾಡು ಜಿಲ್ಲೆಗಳಾದ ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ ಮತ್ತು ಕೊಪ್ಪಳದಲ್ಲಿ ಸಾಧಾರಣ ಹಾಗೂ ಭಾರಿ ಮಳೆ ದಾಖಲಾಗಿದೆ. ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಮುಂದಿನ 4-5 ದಿನಗಳವರೆಗೆ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದರು.

ಹವಾಮಾನ ಇಲಾಖೆ ಪ್ರಕಾರ ಮಹಾರಾಷ್ಟ್ರ ರಾಜ್ಯದ ಕೃಷ್ಣ ನದಿ ಪಾತ್ರದಲ್ಲಿ ಮುಂದಿನ 4-5 ದಿನಗಳಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆಯಿದ್ದು, ಒಳ ಹರಿವು ಹೆಚ್ಚಾಗುವ ಸಾಧ್ಯತೆಯಿದೆ. ಕರಾವಳಿ ಮತ್ತು ಮಲೆನಾಡು ಪ್ರದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಭಾರಿ ಮಳೆ ದಾಖಲಾಗಿದೆ. ಮುಂದಿನ ಐದು ದಿನಗಳವರೆಗೆ ಈ ಭಾಗಕ್ಕೆ ಆರೆಂಜ್ ಮತ್ತು ರೆಡ್ ಅಲರ್ಟ್ ನೀಡಲಾಗಿದೆ ಎಂದು ಅಶೋಕ್ ಹೇಳಿದರು.

ರಾಜ್ಯದ ಕೃಷ್ಣ ನದಿ ಹಾಗೂ ಕಾವೇರಿ ನದಿ ಪಾತ್ರದ ಎಲ್ಲ ಜಲಾಶಯಗಳು ಭರ್ತಿಯಾಗುವ ಹಂತಕ್ಕೆ ತಲುಪಿದ್ದು, ಜಲಾಶಯದ ಸೂಕ್ತ ನಿರ್ವಹಣೆಗಾಗಿ ಜಲಾಶಯಗಳಿಂದ ಹೊರಹರಿವನ್ನು ಹೆಚ್ಚಿಸಲಾಗಿದೆ. ಬೆಳಗಾವಿ ಗಡಿಭಾಗದ ಕಲ್ಲೋಳ ಅಣೆಕಟ್ಟಿಗೆ 104259 ಕ್ಯೂಸೆಕ್ಸ್ ಒಳಹರಿವಿದೆ ಎಂದು ಅವರು ತಿಳಿಸಿದರು.

ಕೃಷ್ಣ ನದಿ ಪಾತ್ರದ ಜಲಾಶಯಗಳಾದ ಆಲಮಟ್ಟಿ ಜಲಾಶಯಕ್ಕೆ ಒಳಹರಿವು 1.20 ಲಕ್ಷ ಕ್ಯೂಸೆಕ್ಸ್, ಹೊರ ಹರಿವು 1.60 ಲಕ್ಷ ಕ್ಯೂಸೆಕ್ಸ್, ನಾರಾಯಣಪುರ ಜಲಾಶಯಕ್ಕೆ 1.60 ಲಕ್ಷ ಕ್ಯೂಸೆಕ್ಸ್ ಒಳಹರಿವು ಹಾಗೂ 1.82 ಲಕ್ಷ ಕ್ಯೂಸೆಕ್ಸ್ ಹೊರ ಹರಿವು, ಮಲಪ್ರಭಾ ಜಲಾಶಯಕ್ಕೆ 36,094 ಕ್ಯೂಸೆಕ್ಸ್ ಒಳ ಹರಿವು ಬರುತ್ತಿದ್ದು, ಅಷ್ಟೇ ಪ್ರಮಾಣದ ನೀರನ್ನು ಹೊರ ಹರಿವು ಬಿಡಲಾಗುತ್ತಿದೆ ಎಂದು ಅಶೋಕ್ ಹೇಳಿದರು.

ಎನ್‌ಡಿಆರ್‌ಎಫ್‌ನ ಎರಡು ತಂಡಗಳನ್ನು ಬೆಳಗಾವಿಗೆ ಹಾಗೂ ಒಂದು ತಂಡವನ್ನು ಗದಗ ಜಿಲ್ಲೆಗೆ ಕಳುಹಿಸಲಾಗಿದೆ. ಎಸ್‌ಡಿಆರ್‌ಫ್‌ನ ಎರಡು ತಂಡಗಳನ್ನು ಈಗಾಗಲೇ ಬೆಳಗಾವಿ ಜಿಲ್ಲೆಯಲ್ಲಿ ನಿಯೋಜಿಸಲಾಗಿದೆ. ಇದಲ್ಲದೇ. ರಾಜ್ಯ ಸರಕಾರದ ಅಗ್ನಿಶಾಮಕ ದಳದ ತಂಡಗಳನ್ನು ಅಗತ್ಯ ರಕ್ಷಣಾ ಕಾರ್ಯಕ್ಕಾಗಿ ಸನ್ನದ್ಧ ಸ್ಥಿತಿಯಲ್ಲಿರಿಸಲಾಗಿದೆ ಎಂದು ಅವರು ತಿಳಿಸಿದರು.

ಮುಖ್ಯಮಂತ್ರಿ ಸೂಚನೆ ಹಿನ್ನೆಲೆಯಲ್ಲಿ ಎಲ್ಲ ಸಚಿವರು ನೆರೆ ಪೀಡಿತ ಜಿಲ್ಲೆಗಳಿಗೆ ಪ್ರತ್ಯೇಕ ತಂಡಗಳಾಗಿ ತೆರಳಿ ಪರಿಹಾರ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ನಾನು ನಾಳೆ ಬೆಳಗಾವಿ ಹಾಗೂ ಯಾದಗಿರಿ ಜಿಲ್ಲೆಗಳಿಗೆ ಭೇಟಿ ನೀಡಲಿದ್ದೇನೆ. ಈಗಾಗಲೇ ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಸಂವಾದ ನಡೆಸಿ, ಅಗತ್ಯ ಮುನ್ನಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ನಿರ್ದೇಶನ ನೀಡಲಾಗಿದೆ ಎಂದು ಅಶೋಕ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News