ಕಥುವಾ ಅತ್ಯಾಚಾರ ಪ್ರಕರಣದ ಆರೋಪಿಗಳ ಮೇಲೆ ದೌರ್ಜನ್ಯದ ಆರೋಪ: ಸಿಟ್ ಅಧಿಕಾರಿಗಳ ವಿರುದ್ಧ ಎಫ್‌ಐಆರ್‌ಗೆ ಕೋರ್ಟ್ ಆದೇಶ

Update: 2019-10-22 18:45 GMT

ಹೊಸದಿಲ್ಲಿ, ಅ. 22: ಚಿತ್ರ ಹಿಂಸೆ ನೀಡಿದ ಆರೋಪಕ್ಕೆ ಸಂಬಂಧಿಸಿ ಜಮ್ಮು ಹಾಗೂ ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ 8 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಹತ್ಯೆಗೈದ ಪ್ರಕರಣದ ತನಿಖೆ ನಡೆಸಿದ ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಸದಸ್ಯರ ವಿರುದ್ಧ ಪ್ರಥಮ ಮಾಹಿತಿ ವರದಿ ದಾಖಲಿಸಲು ಜಮ್ಮು ನ್ಯಾಯಾಲಯ ಮಂಗಳವಾರ ಆದೇಶ ನೀಡಿದೆ.

ಪ್ರಥಮ ಮಾಹಿತಿ ವರದಿ ದಾಖಲಿಸುವಂತೆ ಹಾಗೂ ನವೆಂಬರ್ 7ರ ಒಳಗೆ ಅನುಸರಣಾ ವರದಿ ಸಲ್ಲಿಸುವಂತೆ ಜಮ್ಮುವಿನ ಹಿರಿಯ ಪೊಲೀಸ್ ಅಧೀಕ್ಷಕರಿಗೆ ಸೂಚಿಸಲಾಗಿದೆ. ಸುಪ್ರೀಂ ಕೋರ್ಟ್‌ನ ಆದೇಶದಂತೆ ಈ ಪ್ರಕರಣವನ್ನು ಪಂಜಾಬ್‌ನ ಪಠಾಣ್‌ಕೋಟ್ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿತ್ತು. 2018ರ ಜನವರಿಯಲ್ಲಿ ಕಥುವಾ ಬಾಲಕಿಯ ಮೇಲಿನ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪಠಾಣ್‌ಕೋಟ್ ನ್ಯಾಯಾಲಯ ಮೂವರು ಆರೋಪಿಗಳಿಗೆ ಜೀವಾವಧಿ ಹಾಗೂ ಇತರ ಮೂವರು ಆರೋಪಿಗಳಿಗೆ ಐದು ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿತ್ತು.

ಈ ಪ್ರಕರಣದ ಬಗ್ಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾದ ಬಳಿಕ ಮೆಹಬೂಬಾ ಮುಫ್ತಿ ನೇತೃತ್ವದ ಪಿಡಿಪಿ-ಬಿಜೆಪಿ ಮೈತ್ರಿ ಸರಕಾರ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡಕ್ಕೆ ಒಪ್ಪಿಸಿತ್ತು. ಜಮ್ಮು ಕ್ರೈಮ್ ಬ್ರಾಂಚ್‌ನ ಅಧಿಕಾರಿಗಳಾದ ಆಗಿನ ಎಸ್‌ಎಸ್‌ಪಿ ಆರ್.ಕೆ. ಜಲ್ಲಾ, ಹೆಚ್ಚುವರಿ ಎಸ್‌ಪಿ ಪೀರಝಾದಾ ನವೀದ್, ಡಿಎಸ್‌ಪಿಗಳಾದ ಶೇತಾಂಬರಿ ಶರ್ಮಾ, ನಾಸಿರ್ ಹುಸೈನ್ ಹಾಗೂ ಇತರ ಇಬ್ಬರನ್ನು ಸಿಟ್ ಒಳಗೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News