ಚಿಕ್ಕಮಗಳೂರಿನಾದ್ಯಂತ ಮುಂದುವರಿದ ಮಳೆಯ ಆರ್ಭಟ: ಅಲ್ಲಲ್ಲಿ ರಸ್ತೆ ಸಂಪರ್ಕ ಕಡಿತ

Update: 2019-10-22 18:45 GMT

ಚಿಕ್ಕಮಗಳೂರು, ಅ.22: ಕಳೆದೊಂದು ವಾರದಿಂದ ಮಲೆನಾಡು ಭಾಗದಲ್ಲಿ ಮಧ್ಯಾಹ್ನದ ವೇಳೆ ಧಾರಾಕಾರವಾಗಿ ಸುರಿಯುತ್ತಿದ್ದ ಮಳೆ ಇದೀಗ ಜಿಲ್ಲೆಯ ಬರಪೀಡಿತ ತಾಲೂಕುಗಳ ವ್ಯಾಪ್ತಿಯಲ್ಲೂ ಆರ್ಭಟಿಸುತ್ತಿದೆ. ಜಿಲ್ಲೆಯ ಏಳೂ ತಾಲೂಕುಗಳ ವ್ಯಾಪ್ತಿಯಲ್ಲೂ ಮಳೆ ಮುಂದುವರಿದಿದ್ದು, ಮಂಗಳವಾರ ಸಂಜೆ ವೇಳೆ ಜಿಲ್ಲೆಯ ಮಲೆನಾಡು ಹಾಗೂ ಬಯಲುಸೀಮೆ ತಾಲೂಕುಗಳ ವ್ಯಾಪ್ತಿಯಲ್ಲಿ ಮಳೆ ಧಾರಾಕಾರವಾಗಿ ಸುರಿದಿದೆ.

ಜಿಲ್ಲೆಯ ತರೀಕೆರೆ ಹಾಗೂ ಕಡೂರು ತಾಲೂಕುಗಳು ಸತತ ಬರಕ್ಕೆ ತುತ್ತಾಗಿರುವ ತಾಲೂಕುಗಳಾಗಿದ್ದು, ಜಿಲ್ಲೆಯ ಮಲೆನಾಡು ತಾಲೂಕುಗಳು ಕಳೆದ ಎರಡು ವರ್ಷಗಳಿಂದ ಸತತವಾಗಿ ಅತಿವೃಷ್ಟಿಗೆ ತುತ್ತಾಗಿದ್ದರೂ ತರೀಕೆರೆ, ಕಡೂರು ತಾಲೂಕುಗಳಲ್ಲಿ ಮಾತ್ರ ಮಳೆಯ ಸುಳಿವಿರಲಿಲ್ಲ. ಈ ಬಾರಿಯೂ ಮಲೆನಾಡು ಭಾಗದ ಮೂಡಿಗೆರೆ, ಕೊಪ್ಪ, ಶೃಂಗೇರಿ, ನರಸಿಂಹರಾಜಪುರ ಹಾಗೂ ಚಿಕ್ಕಮಗಳೂರು ತಾಲೂಕಿನಲ್ಲಿ ಧಾರಾಕಾರ ಮಳೆ ಸುರಿದು ಪ್ರಾಕೃತಿಕ ವಿಕೋಪಗಳು ಸಂಭವಿಸಿದ್ದರೂ ಕಡೂರು, ತರೀಕೆರೆ ತಾಲೂಕುಗಳ ವ್ಯಾಪ್ತಿಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿರಲಿಲ್ಲ. ತರೀಕೆರೆ ತಾಲೂಕಿನ ಕೆಲವೆಡೆ ಉತ್ತಮ ಮಳೆಯಾಗಿದ್ದರೂ ಕಡೂರು ತಾಲೂಕಿನಲ್ಲೆ ಆಗಾಗ್ಗೆ ಒಂದೆರೆಡು ಬಾರಿ ಮಳೆಯಾಗಿದ್ದೇ ಹೆಚ್ಚು ಎಂಬಂತಾಗಿದ್ದು, ಈ ಕಾರಣಕ್ಕೆ ಕಡೂರು ತಾಲೂಕನ್ನು ಈ ಬಾರಿಯೂ ಬರಪೀಡಿತ ತಾಲೂಕು ಎಂದು ಸರಕಾರ ಘೋಷಣೆ ಮಾಡಿದೆ.

ಆದರೆ ಕಳೆದ ರವಿವಾರ ರಾತ್ರಿ ಹಾಗೂ ಸೋಮವಾರ ತರೀಕೆರೆ ಹಾಗೂ ಕಡೂರು ತಾಲೂಕುಗಳ ವ್ಯಾಪ್ತಿಯಲ್ಲಿ ಮಳೆ ಆರ್ಭಟಕ್ಕೆ ಜನತೆ ಬೆಚ್ಚಿ ಬಿದ್ದಿದ್ದಾರೆ. ತರೀಕೆರೆ ತಾಲೂಕಿನಲ್ಲಿ ಭೋರ್ಗರೆದ ಮಳೆಯಿಂದಾಗಿ ತಗ್ಗು ಪ್ರದೇಶಗಳ ಗ್ರಾಮಗಳಿಗೆ ನೀರು ನುಗ್ಗಿದ್ದು, 40 ಕ್ಕೂ ಹೆಚ್ಚು ಮನೆಗಳು ಭಾಗಶಃ ಜಖಂಗೊಂಡಿವೆ ಎಂದು ತಿಳಿದು ಬಂದಿದ್ದು, ಇನ್ನು ಕೆಲ ಗ್ರಾಮಗಳ ಸಂಪರ್ಕ ರಸ್ತೆಗಳ ಮೇಲೆ ನೀರು ನಿಂತು ಸಂಪರ್ಕ ಕಡಿತಗೊಂಡಿವೆ. 

ಕಡೂರು, ತರೀಕೆರೆ ತಾಲೂಕುಗಳ ವ್ಯಾಪ್ತಿಯಲ್ಲಿ ರವಿವಾರ, ಸೋಮವಾರ ಭಾರೀ ಮಳೆಯಾಗಿದ್ದು, ಮಂಗಳವಾರ ಸಂಜೆ ವೇಳೆ ಮತ್ತೆ ಸಾಧಾರಣ ಮಳೆ ಸುರಿದಿದೆ. ಮೂರು ದಿನಗಳಿಂದ ಈ ಭಾಗದಲ್ಲಿ ಸುರಿದ ಮಳೆಯಿಂದಾಗಿ ತರೀಕೆರೆ ತಾಲೂಕಿನ ಗಡಿಹಳ್ಳಿ-ಅಣ್ಣಾಪುರ, ಹೊಸೂರು, ನಂದೀಪುರ ಗ್ರಾಮಗಳ ಸಂಪರ್ಕ ಬಂದ್ ಆಗಿದೆ. ಇನ್ನು ತಾಲೂಕಿನ ಕಾಟಿಗನೆರೆ, ಬೇಗೂರು, ಸಿದ್ದಾಪುರ ಸೇರಿದಂತೆ ಹಲವು ಗ್ರಾಮಗಳು ಜಲಾವೃತಗೊಂಡಿದ್ದು, ಈ ಗ್ರಾಮಗಳ ಸಂಪರ್ಕ ರಸ್ತೆಗಳು, ತೆಂಗು, ಅಡಿಕೆ ತೋಟಗಳೂ ಜಲಾವೃತಗೊಂಡಿವೆ.

ಚಿಕ್ಕಮಗಳೂರು ತಾಲೂಕಿನಲ್ಲಿ ಸೋಮವಾರ ರಾತ್ರಿ ಸುರಿದ ಮಳೆಗೆ ಶಿರಗೋಳ-ಕೋದಿ ಗ್ರಾಮಗಳ ಸಂಪರ್ಕ ರಸ್ತೆಯೊಂದು ಕೊಚ್ಚಿ ಹೋಗಿದ್ದು, ಈ ರಸ್ತೆಯಲ್ಲಿ ಬರುತ್ತಿದ್ದ ಎರಡು ಜಾನುವಾರುಗಳ ಮಳೆ ನೀರಿಗೆ ಕೊಚ್ಚಿ ಹೋಗಿದ್ದಲ್ಲದೇ ಗ್ರಾಮದಲ್ಲಿ ಎರಡು ಮನೆಗಳು ಕುಸಿದು ಬಿದ್ದಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ರಸ್ತೆ ಕೊಚ್ಚಿ ಹೋಗಿರುವುದರಿಂದ ಈ ಭಾಗದಲ್ಲಿ ಸಂಚರಿಸುತ್ತಿದ್ದ ಸಾರಿಗೆ ಬಸ್ ಸ್ಥಗಿತಗೊಂಡಿದ್ದು, ಸಾರ್ವಜನಿಕರು, ವಿದ್ಯಾರ್ಥಿಗಳು ತೀವ್ರ ಸಮಸ್ಯೆ ಎದುರಿಸುತ್ತಿದ್ದಾ.

ಇನ್ನು ಜಿಲ್ಲೆಯ ಮಲೆನಾಡು ಭಾಗದಲ್ಲಿ ಸತತವಾಗಿ ಒಂದು ವಾರದಿಂದ ಮಧ್ಯಾಹ್ನ, ಸಂಜೆ ವೇಳೆ ಧಾರಾಕಾರ ಮಳೆಯಾಗುತ್ತಿದ್ದು, ಮಂಗಳವಾರವೂ ಸಂಜೆ ವೇಳೆ ಜಿಲ್ಲೆಯ ಮೂಡಿಗೆರೆ, ಕೊಪ್ಪ, ಶೃಂಗೇರಿ, ಬಾಳೆಹೊನ್ನೂರು, ಜಯಪುರ, ಕಳಸ, ನರಸಿಂಹರಾಜಪುರ, ಕುದುರೆಮುಖ, ಅಗಳಗಂಡಿ, ಹೇರೂರು, ಬಸರಿಕಟ್ಟೆ ಭಾಗದಲ್ಲಿ ಭಾರೀ ಮಳೆಯಾಗಿದೆ. ಜಿಲ್ಲೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News