ಆರ್.ಸಿ.ಇ.ಪಿ. ಒಪ್ಪಂದ ಕುಸಿದ ಭಾರತವನ್ನು ಪಾತಾಳ ಕಾಣುವಂತೆ ಮಾಡಲಿದೆ: ದೇವನೂರು ಮಹಾದೇವ ಕಿಡಿ

Update: 2019-10-23 08:58 GMT

ಮೈಸೂರು, ಅ.23: ಕುಸಿಯುತ್ತಿರುವ ಭಾರತದ ಮೇಲೆ ಮೋದಿ, ಅಮಿತ್ ಶಾ ಅವರು ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಮುಕ್ತ ವ್ಯಪಾರ ಒಪ್ಪಂದ(ಆರ್.ಸಿ.ಇ.ಪಿ.)ಕ್ಕೆ ಹೆಬ್ಬೆಟ್ಟು ಒತ್ತಿ ಪೂತನಿ (ಕ್ರೋನಿ) ಬಂಡವಾಳಶಾಯಿ ಜೊತೆಗೂಡಿಕೊಂಡು ಕುಣಿದು ಕುಪ್ಪಳಿಸಿ ತುಳಿದು ಕುಸಿತವನ್ನು ಪಾತಾಳ ಕಾಣುವಂತೆ ಮಾಡುತ್ತಿದ್ದಾರೆ ಎಂದು ಹಿರಿಯ ಸಾಹಿತಿ ದೇವನೂರು ಮಹಾದೇವ ಕಿಡಿಕಾರಿದ್ದಾರೆ.

ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಜನಾಂದೋಲನಗಳ ಮಹಾಮೈತ್ರಿ ವತಿಯಿಂದ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಕುಸಿಯುತ್ತಿರುವ ಭಾರತದ ಆರ್ಥಿಕ ವ್ಯವಸ್ಥೆ, ಉದ್ಯೋಗಗಳ ನಡುವೆ ಕೇಂದ್ರದ ಮೋದಿ ಸರಕಾರ 16 ರಾಷ್ಟ್ರಗಳೊಡಗೂಡಿ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಮುಕ್ತ ವ್ಯಪಾರ ಒಪ್ಪಂದಕ್ಕೆ ಹೆಬ್ಬೆಟ್ಟು ಒತ್ತಿ ಪಾತಾಳ ಕಾಣುವಂತೆ ಮಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಾರ್ವಜನಿಕ ಸಂಪತ್ತನ್ನು ಖಾಸಗಿಗೆ ಮಾರಾಟ ಮಾಡಿಕೊಂಡು ಸರ್ಕಾರ ಜೀವನ ಸಾಗಿಸುವುದು ಹೆಚ್ಚುತ್ತಿದೆ. ಇದರಿಂದ ಉದ್ಯೋಗ ಉದುರಿ ಹೋಗುತ್ತಿದೆ, ಆತ್ಮಹತ್ಯೆ ಹೆಚ್ಚುತ್ತಿದೆ. ಕೇಂದ್ರ ಸರಕಾರ ಆ.ಸಿ.ಇ.ಪಿ. ಒಪ್ಪಂದದ ಮೂಲಕ ಗುಟ್ಟಾಗಿ ಕೊಲೆ ಸಂಚು ರೂಪಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

   ಈ ಎಲ್ಲ ಒಪ್ಪಂದವನ್ನು ಪಾರದರ್ಶಕವಾಗಿ ಮಾಡುತ್ತಿಲ್ಲ. ಹಾಗಾಗಿ ಪಾರ್ಲಿಮೆಂಟ್ ಮುಂದೆ ಇಟ್ಟಿಲ್ಲ. ರಾಜ್ಯಗಳನ್ನು ಕ್ಯಾರೆ ಎನ್ನುತ್ತಿಲ್ಲ, ಇದಕ್ಕೆ ಹೆಬ್ಬೆಟ್ಟು ಒತ್ತಿದರೆ ಏನಾಗುತ್ತದೆ? ಎಂದ ಅವರು, ಭಾರತದಲ್ಲಿ ಸಣ್ಣ ಸಣ್ಣ ರೈತರು ಮತ್ತು ಹಾಲು ಉದ್ಪಾದನೆಯಲ್ಲಿ ತೊಡಗಿ ಇದನ್ನೇ ಜೀವನಾಧಾರ ಮಾಡಿಕೊಂಡಿರುವ ಜನರ ಬುದುಕು ಧೂಳೀಪಟವಾಗಲಿದೆ. ಸುಮಾರು 5 ಕೋಟಿ ಗ್ರಾಮೀಣ ಕಡುಬಡವರು ಹಾಲಿನ ವ್ಯಾಪಾರದಿಂದಲೇ ಬದುಕು ಕಟ್ಟಿಕೊಂಡಿದ್ದಾರೆ. ಹೆಚ್ಚಾಗಿ ಮಹಿಳೆಯರ ಬದುಕು ಇದನ್ನು ಅವಲಂಬಿಸಿದೆ. ಮುಕ್ತ ವ್ಯಾಪಾರಕ್ಕೆ ಭಾರತ ಹೆಬ್ಬೆಟ್ಟು ಒತ್ತಿದರೆ ನ್ಯೂಝಿಲೆಂಡ್ ಮತ್ತು ಆಸ್ಟ್ರೇಲಿಯಾಗಳ ಹಾಲು ಉತ್ಪನ್ನಗಳು ಭಾರತಕ್ಕೆ ಲಗ್ಗೆ ಇಡುತ್ತವೆ. ಹಾಲನ್ನೇ ಜೀವನಾಧಾರ ಮಾಡಿಕೊಂಡವರ ಬದುಕು ದುಸ್ತರವಾಗುತ್ತದೆ. ಮಹೆಳೆಯರೂ ಆತ್ಮಹತ್ಯೆಗೆ ಶರಣಾಗುವ ಪರಿಸ್ಥಿತಿ ಎದುರಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.

ದೇಶದಲ್ಲಿ ಈಗ ಹೆಚ್ಚು ಪುರುಷರೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಮಹಿಳೆಯರು ಏಕೆ ಮಾಡಿಕೊಳ್ಳುತ್ತಿಲ್ಲ ಎಂದು ಸರಕಾರ ಚಿಂತಿಸಿ ಈ ಆರ್.ಸಿ.ಇ.ಪಿ ಒಪ್ಪಂದಕ್ಕೆ ರುಜು ಹಾಕುತ್ತಿರಬಹದುದೇನೊ ಎಂಬ ಅನುಮಾನ ಮೂಡುತ್ತಿದೆ ಎಂದು ಅವರು ಹೇಳಿದರು.

ದೇಶವನ್ನು ಅಭಿವೃದ್ಧಿ ಪಡಿಸಲು 52 ಇಂಚಿನ ಎದೆ ಬೇಕಾಗಿಲ್ಲ, ಎದೆಯೊಳಗಿನ ಹೃದಯದೊಳಗೆ ಮಾನವೀಯ ಸ್ಪಂದನ ಬೇಕು ಎಂದು ಪ್ರಧಾನಿ ನರೇಂದ್ರ ಮೋದಿಗೆ ಅವರು ಸಲಹೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಜನಾಂದೋಲನ ಮಹಾಮೈತ್ರಿಯ ಎಸ್.ಆರ್.ಹಿರೇಮಠ್, ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಸಿಐಟಿಯು ಕಾರ್ಯದರ್ಶಿ ಚಂದ್ರಶೇಖರ ಮೇಟಿ, ಹೊಸಕೋಟೆ ಬಸವರಾಜು, ಅಭಿರುಚಿ ಗಣೇಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News