ಸೊಗಡು ಶಿವಣ್ಣ ವಿರುದ್ಧ ಕುರುಬರ ಪ್ರತಿಭಟನೆ: ಅಣಕು ಶವಯಾತ್ರೆ, ಪ್ರತಿಕೃತಿ ದಹಿಸಿ ಆಕ್ರೋಶ

Update: 2019-10-23 11:39 GMT

ತುಮಕೂರು,ಅ.23: ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆಂದು ಆರೋಪಿಸಿ ಮಾಜಿ ಸಚಿವ ಸೊಗಡು ಶಿವಣ್ಣ ವಿರುದ್ಧ ಕುರುಬ ಸಂಘಟನೆಗಳ ಒಕ್ಕೂಟ ಹಾಗೂ ಸಿದ್ದರಾಮಯ್ಯ ಅಭಿಮಾನಿಗಳು ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಬಿ.ಎಚ್.ರಸ್ತೆಯಲ್ಲಿರುವ ಕುರುಬರ ವಿದ್ಯಾರ್ಥಿ ನಿಲಯದಿಂದ ಟೌನ್‍ಹಾಲ್ ವೃತ್ತದವರೆಗೆ ಮಾಜಿ ಸಚಿವ ಸೊಗಡು ಶಿವಣ್ಣ ಅವರ ಪ್ರತಿಕೃತಿಯ ಅಣಕು ಶವಯಾತ್ರೆ ನಡೆಸಿ, ಟೌನ್‍ಹಾಲ್‍ನಲ್ಲಿ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿ, ಮಾಜಿ ಸಚಿವ ಸೊಗಡು ಶಿವಣ್ಣ ಕ್ಷಮೆಯಾಚನೆಗೆ ಒತ್ತಾಯಿಸಿದರು.

ಈ ವೇಳೆ ಮಾತನಾಡಿದ ಮುಖಂಡ ಕೆಂಪರಾಜು ಅವರು, ತುಮಕೂರು ನಗರದಲ್ಲಿ ಇಪ್ಪತ್ತು ವರ್ಷ ಅಧಿಕಾರ ನಡೆಸಿ, ಅಭಿವೃದ್ಧಿಯಲ್ಲಿ 50 ವರ್ಷ ಹಿಂದಕ್ಕೆ ತಳ್ಳಿದವರು, ಭಾರತಕ್ಕೆ ಅಭಿವೃದ್ಧಿಯನ್ನು ತೋರಿಸಿದ ಸಿದ್ದರಾಮಯ್ಯ ವಿರುದ್ಧ ಮಾತನಾಡುವ ಮೂಲಕ ಹೈಕಮಾಂಡ್ ಬಕೆಟ್ ಹಿಡಿಯಲು ಹೊರಟಿದ್ದಾರೆ. ಅಧಿಕಾರವಿದ್ದಾಗ ಅಭಿವೃದ್ಧಿ ಬಗ್ಗೆ ವಿಧಾನಸಭೆಯಲ್ಲಿ ಒಂದು ದಿನವೂ ಮಾತನಾಡಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಧಿಕಾರವಿಲ್ಲದೇ ಅರೆಹುಚ್ಚರಂತಾಗಿರುವ ಶಿವಣ್ಣ ಅವರು, ಕಳೆದ ಚುನಾವಣೆಯಲ್ಲಿ ಠೇವಣಿಯನ್ನು ಪಡೆಯಲಿಲ್ಲ. ಜನರು ತಿರಸ್ಕಾರ ಮಾಡಿದವರು, ಜನರ ಬೆಂಬಲವಿರುವ ಸಿದ್ದರಾಮಯ್ಯ ವಿರುದ್ಧ ಮಾತನಾಡುತ್ತಿದ್ದಾರೆ. ಸೊಗಡು ಅವರಿಗೆ ತಾಕತ್ ಇದ್ದರೆ ಶಿವಕುಮಾರ ಸ್ವಾಮೀಜಿ ಅವರಿಗೆ ಭಾರತ ರತ್ನ ಕೊಡಿಸಲಿ ಎಂದು ಸವಾಲು ಹಾಕಿದ ಅವರು, ಸೊಗಡು ಶಿವಣ್ಣ ಅವರು ಬಹಿರಂಗವಾಗಿ ಕ್ಷಮೆಯಾಚಿಸದೇ ಇದ್ದಲ್ಲಿ ತಾಲೂಕು ಮಟ್ಟದಲ್ಲಿ ಹೋರಾಟ ನಡೆಸುವುದಾಗಿ ಹೇಳಿದರು.

ಮಾಜಿ ಶಾಸಕ ಬಿ.ಲಕ್ಕಪ್ಪ ಮಾತನಾಡಿ, ಸಿದ್ದರಾಮಯ್ಯ ಅವರು ಜನಪರ ಕಾರ್ಯಕ್ರಮದಿಂದ ಎಲ್ಲ ವರ್ಗಗಳ ನಾಯಕರಾಗಿರುವ ಅವರನ್ನು ಏಕ ವಚನದಲ್ಲಿ ನಿಂದಿಸಿ ಮಾತನಾಡಿರುವುದು ಸರಿಯಲ್ಲ. ಎಲ್ಲ ಮುಖಂಡರ ಹಿಂದೆಯೂ ಒಂದು ಜಾತಿ ಇರುತ್ತದೆ. ಸಿದ್ದರಾಮಯ್ಯ ಅವರ ಹಿಂದೆ ಅಹಿಂದ ವರ್ಗವಿದ್ದು, ಅಂತಹ ಧೀಮಂತ ನಾಯಕನ ಬಗ್ಗೆ ತುಚ್ಛವಾಗಿ ಮಾತನಾಡುವುದು ಸರಿಯಲ್ಲ ಎಂದರು.

ಪ್ರಜಾಪ್ರಭುತ್ವದಲ್ಲಿ ಟೀಕಿಸುವ ಹಕ್ಕು ಎಲ್ಲರಿಗೂ ಇದೆ, ಸಿದ್ದರಾಮಯ್ಯ ಅವರು ಮಾತನಾಡಿದ್ದರಲ್ಲಿ ತಪ್ಪಿದ್ದರೆ ಅವರನ್ನು ಟೀಕಿಸಲಿ. ಸತ್ಯವನ್ನು ಮರೆಮಾಚುವುದಕ್ಕಾಗಿ, ಟೀಕೆ ಮಾಡುವುದನ್ನು ಬಿಡಬೇಕು. ರಾಜಕಾರಣದಲ್ಲಿ ವ್ಯಕ್ತಿಗತ ಟೀಕೆ ಮಾಡುವುದನ್ನು ಬಿಟ್ಟು ಸೈದ್ಧಾಂತಿಕ ವಿಚಾರಗಳಿಗೆ ಟೀಕೆ ಮಾಡಲಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಾಜಿ ಶಾಸಕ ಶಫೀ ಅಹ್ಮದ್ ಮಾತನಾಡಿ, ಮಹಾತ್ಮರನ್ನು ಕೊಂದವರಿಗೆ ಭಾರತ ರತ್ನ ಕೊಡಿಸುವ ಬದಲಾಗಿ, ಶಿವಕುಮಾರ ಸ್ವಾಮೀಜಿ ಅವರಿಗೆ ಕೊಡಿಸಿ ಎನ್ನುವುದರಲ್ಲಿ ತಪ್ಪೇನಿದೆ, ಸಿದ್ದರಾಮಯ್ಯ ಅವರು ಅಹಿಂದ ವರ್ಗದ ಪರಮೋಚ್ಛ ನಾಯಕ. ಅಂತಹವರ ಬಗ್ಗೆ ತುಚ್ಛವಾಗಿ ಮಾತನಾಡುವುದು ಸರಿಯಲ್ಲ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಕುರುಬ ಸಮುದಾಯದ ಮುಖಂಡರಾದ ಟಿ.ಆರ್.ರಘುರಾಂ, ಧ್ರುವಕುಮಾರ್, ಶಂಕರ್, ಟಿ.ಡಿ.ಯೋಗೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಮಾಜಿ ಸಚಿವ ಸೊಗಡು ಶಿವಣ್ಣ ಅವರ ವಿರುದ್ಧ ಕುರುಬ ಸಮುದಾಯ ಒಕ್ಕೂಟ ಕರೆ ನೀಡಿದ್ದ ಪ್ರತಿಭಟನೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಸಮುದಾಯದ ಮುಖಂಡರು ಭಾಗಿಯಾಗಲಿಲ್ಲ. ಜಿಲ್ಲೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿರುವ ಕುರುಬ ಸಮುದಾಯದವರು, ಸಿದ್ದರಾಮಯ್ಯ ಅವರ ವಿರುದ್ಧ ಪ್ರತಿಭಟನೆಯಲ್ಲಿ ಭಾಗವಹಿಸಲು ಮುಂದೆ ಬಂದಿಲ್ಲ. ಸಿರಾಗೇಟ್‍ನಲ್ಲಿರು ಕನಕ ವೃತ್ತ ನಿರ್ಮಾಣದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದ ಸೊಗಡು ಶಿವಣ್ಣ ವಿರುದ್ಧ ಪ್ರತಿಭಟಿಸಲು ಮುಂದಾಗಲಿಲ್ಲ ಎನ್ನುವ ಮಾತುಗಳು ಕೇಳಿಬಂದಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News