ಬಿಎಸ್ಸೆನ್ನೆಲ್-ಎಂಟಿಎನ್‍ಎಲ್ ವಿಲೀನಕ್ಕೆ ಕೇಂದ್ರ ಸಂಪುಟದ ತಾತ್ವಿಕ ಒಪ್ಪಿಗೆ

Update: 2019-10-23 16:51 GMT

►ದೇಶಾದ್ಯಂತ ಬಿಎಸ್‌ಎನ್‌ಎಲ್‌ನ 4 ಜಿ ಸೇವೆ ವಿಸ್ತರಣೆ

►ಉದ್ಯೋಗಿಗಳಿಗೆ ವಿಆರ್‌ಎಸ್ ಕೊಡುಗೆ

    ಹೊಸದಿಲ್ಲಿ,ಅ.24: ತೀವ್ರ ನಷ್ಟದಿಂದ ತತ್ತರಿಸುತ್ತಿರುವ ಸಾರ್ವಜನಿಕರಂಗದ ಟೆಲಿಕಾಂ ಸಂಸ್ಥೆಗಳಾದ ಮಹಾನಗರ್ ಟೆಲಿಫೋನ್ ನಿಗಮ್ ಲಿಮಿಟೆಡ್ (ಎಂಟಿಎನ್‌ಎಲ್) ಹಾಗೂ ಭಾರತೀಯ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ಸೆನ್ನೆಲ್) ಅನ್ನು ವಿಲೀನಗೊಳಿಸುವ ಪ್ರಸ್ತಾವನೆಗೆ ಕೇಂದ್ರ ಸರಕಾರದ ಅರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಬುಧವಾರ ತಾತ್ವಿಕ ಸಮ್ಮತಿ ನೀಡಿದೆ. ಸಾಲದಹೊರೆಯಿಂದ ಬಾಧಿತವಾಗಿರುವ ಈ ಎರಡು ಟೆಲಿಕಾಂ ಸಂಸ್ಥೆಗಳ ಪುನರುಜ್ಜೀವನಕ್ಕಾಗಿ ಅದು ವಿಶೇಷ ಪ್ಯಾಕೇಜ್ ಕೂಡಾ ಪ್ರಕಟಿಸಿದೆ.

    ಕೇಂದ್ರ ಸರಕಾರವು ಎಂಟಿಎನ್‌ಎಲ್ ಹಾಗೂ ಬಿಎಸ್‌ಎನ್‌ಎಲ್‌ನ್ನು ಮುಚ್ಚುಗಡೆಗೊಳಿಸುವುದೂ ಇಲ್ಲ ಅಥವಾ ಆ ಸಂಸ್ಥೆಗಳಲ್ಲಿ ತಾನು ಹೊಂದಿರುವ ಪಾಲನ್ನು ಹಿಂತೆಗೆದುಕೊಳ್ಳುವುದೂ ಇಲ್ಲ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಬುಧವಾರ ಸಂಪುಟ ಸಭೆಯ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ವಿಲೀನದಿಂದಾಗಿ ಖಾಸಗಿರಂಗದ ಟೆಲಿಕಾಂ ಸಂಸ್ಥೆಗಳಿಗೆ ಪ್ರಬಲವಾದ ಪೈಪೋಟಿಯನ್ನು ನೀಡಲು ಬಿಎಸ್ಸೆನ್ನೆಲ್ -ಎಂಟಿಎನ್‌ಎಲ್‌ಗೆ ಸಾಧ್ಯವಾಗಲಿದೆ ಎಂದು ಅವರು ಹೇಳಿದ್ದಾರೆ.

 ಈ ಎರಡು ಸಾರ್ವಜನಿಕರಂಗದ ಟೆಲಿಕಾಂ ಸಂಸ್ಥೆಗಳ ವಿಲೀನದಿಂದಾಗಿ ಗ್ರಾಮಾಂತರ ಹಾಗೂ ದುರ್ಗಮ ಪ್ರದೇಶಗಳು ಸೇರಿದಂತೆ ದೇಶದಾದ್ಯಂತ ದೃಢವಾದ ದೂರಸಂಪರ್ಕ ಜಾಲದ ಮೂಲಕ ವಿಶ್ವಸನೀಯ ಹಾಗೂ ಗುಣಮಟ್ಟದ ಸೇವೆಗಳನ್ನು ಒದಗಿಸುವುದಕ್ಕೆ ಈ ಕಂಪೆನಿಗಳನ್ನು ಸಮರ್ಥವಾಗುವಂತೆ ಮಾಡಲಿದೆಯೆಂದು ಸಂಪುಟ ಸಮಿತಿಯ ಅಧಿಕೃತ ಹೇಳಿಕೆಯು ತಿಳಿಸಿದೆ. ಎಂಟಿಎನ್‌ಎಲ್ ಹಾಗೂ ಬಿಎಸ್ಸೆನ್ನೆಲ್ ಗಳು ಹೆಚ್ಚುವರಿ ತರಂಗಗುಚ್ಚಗಳನ್ನು ಹೊಂದುವಂತೆ ಮಾಡಲು ಅವುಗಳಿಗೆ 20,140 ಕೋಟಿ ರೂ.ಗಳ ಬಂಡವಾಳ ಒದಗಿಸಲು ಸಂಪುಟವು ಅನುಮೋದನೆ ನೀಡಿದೆ. ಇದರಿಂದಾಗಿ ಅವುಗಳಿಗೆ ತಮ್ಮ ಗ್ರಾಹಕರಿಗೆ 4ಜಿ ಸೇವೆಗಳನ್ನು ಒದಗಿಸಲು ಸಾಧ್ಯವಾಗಲಿದೆ. 4ಜಿ ತರಂಗಗುಚ್ಛವನ್ನು ಹೊಂದುವ ಮೂಲಕ ಬಿಎಸ್ಸೆನ್ನೆಲ್ ಹಾಗೂ ಎಂಟಿಎನ್‌ಎಲ್‌ಗಳು ಖಾಸಗಿ ಟೆಲಿಕಾಂ ಸಂಸ್ಥೆಗಳೊಂದಿಗೆ ಸ್ಪರ್ಧಿಸಲು ಸಾಧ್ಯವಾಗಲಿದೆ ಮತ್ತು ತಮ್ಮ ವಿಶಾಲವಾದ ಟೆಲಿಕಾಂ ಜಾಲವನ್ನು ಬಳಸಿಕೊಂಡು ಗ್ರಾಹಕರಿಗೆ ಅಧಿಕ ವೇಗದ ಡೇಟಾಗಳನ್ನು ನೀಡುವುದಕ್ಕೆ ಅವಕಾಶ ದೊರೆಯಲಿದೆ.

ಇದೇ ವೇಳೆ ಕೇಂದ್ರ ಸರಕಾರವು ಎಂಟಿಎನ್‌ಎಲ್ ಹಾಗೂ ಬಿಎಸ್ಸೆನ್ನೆಲ್ ಉದ್ಯೋಗಿಗಳಿಗೆ 29,937 ಕೋಟಿ ರೂ. ವೆಚ್ಚದಲ್ಲಿ ಸ್ವಯಂ ನಿವೃತ್ತಿ ಯೋಜನೆ (ವಿಆರ್‌ಎಸ್)ಯ ಪ್ರಸ್ತಾವನೆಯನ್ನು ಕೂಡಾ ಸಲ್ಲಿಸಿದೆ. ಎಂದು ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದರು.

ಸರಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆಗಳಾದ ಬಿಎಸ್‌ಎನ್‌ಎಲ್ ಹಾಗೂ ಎಂಟಿಎನ್‌ಎಲ್ ಇವೆರಡೂ 2010ರಿಂದೀಚೆಗೆ ನಷ್ಟದಲ್ಲೇ ನಡೆಯುತ್ತಿವೆ. ಎಂಟಿಎನ್‌ಎಲ್ ನಿರಂತರವಾಗಿ ನಷ್ಟವನ್ನು ಅನುಭವಿಸುತ್ತಾ ಬಂದಿದ್ದು, ಚೇತರಿಕೆಯ ಯಾವುದೇ ಲಕ್ಷಣಗಳನ್ನು ಪ್ರದರ್ಶಿಸುತ್ತಿಲ್ಲ. ಆದರೆ ಬಿಎಸ್‌ಎನ್‌ಎಲ್ 2014-15ರ ಅವಧಿಯಲ್ಲಿ ಬಿಎಸ್‌ಎನ್‌ಎಲ್ 672 ಕೋಟಿ ರೂ.,2015-16ರಲ್ಲಿ 3885 ಕೋಟಿ ರೂ. ಹಾಗೂ 2016-17ರಲ್ಲಿ 1684 ಕೋಟಿ ರೂ. ಲಾಭವನ್ನು ಪ್ರದರ್ಶಿಸಿತ್ತು.

  2018-19ರ ಸಾಲಿನಲ್ಲಿ ಬಿಎಸ್‌ಎನ್‌ಎಲ್ ಅಂದಾಜು 14 ಸಾವಿರ ಕೋಟಿ ರೂ. ನಷ್ಟವನ್ನು ಕಂಡಿದ್ದು, ಅದರ ಆದಾಯದಲ್ಲಿ 19,308 ಕೋಟಿ ರೂ. ಕುಸಿತವುಂಟಾಗಿತ್ತು. ಆನಂತರ ಅದರ ನಷ್ಟದಲ್ಲಿ 2016-17ರಲ್ಲಿ 4793 ಕೋಟಿ ರೂ.ಗಳಿಂದ ಹಿಡಿದು 2017-18ರಲ್ಲಿ 7993 ಕೋಟಿ ರೂ.ವರೆಗೆ ಸ್ಥಿರವಾದ ಏರಿಕೆಯುಂಟಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News