ರಾಣಿ ಚೆನ್ನಮ್ಮನ ಶೌರ್ಯ ನಾಡು-ನುಡಿಗೆ ಸ್ಫೂರ್ತಿ: ಸಚಿವ ಸಿ.ಟಿ.ರವಿ

Update: 2019-10-23 17:21 GMT

ಧಾರವಾಡ, ಅ.23: ಕಿತ್ತೂರು ರಾಣಿ ಚೆನ್ನಮ್ಮನ ಶೌರ್ಯ, ಸಾಹಸ, ತ್ಯಾಗದ ಪರಂಪರೆಯು ವರ್ತಮಾನ ಹಾಗೂ ಭವಿಷ್ಯದ ಪೀಳಿಗೆಗೆ ಮತ್ತು ನಮ್ಮ ನಾಡು, ನುಡಿಗೆ ಸ್ಫೂರ್ತಿಯಾಗಬೇಕು ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಹೇಳಿದರು.

ಬುಧವಾರ ನಗರದ ಆಲೂರು ವೆಂಕಟರಾವ್ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಕಿತ್ತೂರು ರಾಣಿ ಚನ್ನಮ್ಮ ಜಯಂತ್ಯುತ್ಸವ-2019 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಭಾರತದ ನಾಗರಿಕತೆ ಸಹಸ್ರಾರು ವರ್ಷಗಳಿಂದ ಉಳಿದಿದೆಯೆಂದರೆ ಅದು ನಮ್ಮ ಶೌರ್ಯ, ಇತಿಹಾಸ ಹಾಗೂ ಸಾವಿಲ್ಲದ ನಾಗರಿಕತೆಗೆ ಸಾಕ್ಷಿಯಾಗಿದೆ. ನಾವು ಆಚರಿಸುವ ವಿವಿಧ ಜಯಂತಿ, ಉತ್ಸವ ಹಾಗೂ ಆಚರಣೆಗಳು ಕೇವಲ ಜಾತಿಗೆ ಸೀಮಿತವಾಗಿ ಜಾತಿಪ್ರೇಮ ಗಟ್ಟಿಗೊಳಿಸುತ್ತೇವೆ ಎಂಬ ಮನೋಭಾವ ಮೂಡುತ್ತಿದೆ ಎಂದು ಅವರು ಹೇಳಿದರು.

ಈ ಬಗ್ಗೆ ನಾವೆಲ್ಲರೂ ಗಂಭೀರ ಚಿಂತನೆ ಮಾಡುವ ಅಗತ್ಯವಿದೆ. ಮಹಾತ್ಮರ, ಶೂರರ, ವೀರರ ಹಾಗೂ ಮಹಾ ಪುರುಷರ ಜೀವನ ಸಾಧನೆಗಳನ್ನು ಸಮಾಜದ ಪ್ರೇರಕ ಶಕ್ತಿಯಾಗಿ ಮಾರ್ಪಡಿಸುವ ಕುರಿತು ಚಿಂತಿಸಬೇಕಿದೆ ಎಂದು ರವಿ ಹೇಳಿದರು.

ಹುಬ್ಬಳ್ಳಿಯ ವೈಷ್ಣದೇವಸ್ಥಾನದ ದೇವಪ್ಪಜ್ಜ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು. ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಡಾ. ಮೈತ್ರೇಯಣಿ ಗದಿಗೆಪ್ಪಗೌಡರ ರಾಣಿ ಕಿತ್ತೂರು ಚನ್ನಮ್ಮ ಕುರಿತು ವಿಶೇಷ ಉಪನ್ಯಾಸ ನೀಡಿದರು. ಶಾಸಕ ಅರವಿಂದ ಬೆಲ್ಲದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿ.ಪಂ.ಅಧ್ಯಕ್ಷೆ ವಿಜಯಲಕ್ಷ್ಮಿ ಕೆಂಪೇಗೌಡ ಪಾಟೀಲ್, ಮಾಜಿ ಶಾಸಕ ಚಂದ್ರಕಾಂತ್ ಬೆಲ್ಲದ, ಹಿರಿಯರಾದ ಎಸ್.ಎಲ್. ಬೀಳಗಿ, ನಿಂಗಣ್ಣ ಕರಿಕಟ್ಟಿ, ಈರಣ್ಣ ಏಣಗಿ ಹಾಗೂ ಸಮಾಜದ ಮುಖಂಡರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News