ಇವಿಎಂ ದುರ್ಬಳಕೆ ಮೂಲಕ ಹರ್ಯಾಣ, ಮಹಾರಾಷ್ಟ್ರದಲ್ಲಿ ಬಿಜೆಪಿ ಅಧಿಕಾರಕ್ಕೆ: ಮಲ್ಲಿಕಾರ್ಜುನ್ ಖರ್ಗೆ

Update: 2019-10-23 18:30 GMT

ಕಲಬುರಗಿ, ಅ.23: ವಿದ್ಯುನ್ಮಾನ ಮತಯಂತ್ರಗಳ ದುರ್ಬಳಕೆ ಮಾಡಿಕೊಂಡು ಬಿಜೆಪಿ ಮಹಾರಾಷ್ಟ್ರ ಮತ್ತು ಹರ್ಯಾಣದಲ್ಲಿ ಅಧಿಕಾರಕ್ಕೆ ಬರುತ್ತಿದೆ ಎಂದು ಕೇಂದ್ರದ ಮಾಜಿ ಸಚಿವ, ಎಐಸಿಸಿಐ ಪ್ರಧಾನ ಕಾರ್ಯದರ್ಶಿ ಹಾಗೂ ಮಹಾರಾಷ್ಟ್ರ ರಾಜ್ಯದ ಕಾಂಗ್ರೆಸ್ ಪಕ್ಷದ ಉಸ್ತುವಾರಿ ಡಾ.ಮಲ್ಲಿಕಾರ್ಜುನ್ ಖರ್ಗೆ ಅವರು ಆರೋಪಿಸಿದರು.

ತಮ್ಮ ನಿವಾಸದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಭಯ ರಾಜ್ಯಗಳಲ್ಲಿ ಎಲ್ಲಿ ಬಿಜೆಪಿಯನ್ನು ಗೆಲ್ಲಿಸಲು ಅಗತ್ಯವಿದೆಯೋ ಅಂತಹ ಕಡೆಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ದೂರಿದರು.

ಮಹಾರಾಷ್ಟ್ರ ಮತ್ತು ಹರ್ಯಾಣ ರಾಜ್ಯಗಳ ವಿಧಾನಸಭಾ ಚುನಾವಣೆಯ ಕುರಿತಂತೆ ಮತದಾನೋತ್ತರ ಸಮೀಕ್ಷೆಗಳ ಕುರಿತು ತೀವ್ರ ಅಸಮಾಧಾನ ಮುಂದುವರೆಸಿದ ಖರ್ಗೆಯವರು, ಎರಡೂ ರಾಜ್ಯಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನು ಬಿಜೆಪಿ ದುರ್ಬಳಕೆ ಮಾಡಿಕೊಂಡಿದೆ ಎಂದು ಪುನರುಚ್ಛರಿಸಿದರು.
ಎಲ್ಲ ಕ್ಷೇತ್ರಗಳಲ್ಲಿಯೂ ವಿದ್ಯುನ್ಮಾನ ಮತಯಂತ್ರಗಳು ದುರ್ಬಳಕೆ ಆಗುತ್ತವೆ ಎಂದು ನಾನು ಆರೋಪಿಸುವುದಿಲ್ಲ. ಬದಲಾಗಿ ಕೆಲವು ಗುರುತಿಸಲ್ಪಟ್ಟ ಕ್ಷೇತ್ರಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ದೂರಿದರು.

ಎಲ್ಲಿ ಬಿಜೆಪಿಯನ್ನು ಗೆಲ್ಲಿಸಲು ಅಗತ್ಯವಿದೆಯೋ ಆ ಕ್ಷೇತ್ರಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳ ದುರ್ಬಳಕೆ ಆಗಿದೆ. ಸೋತಾಗ ಹೇಳಿದರೆ ಸೋತ ಕಾರಣಕ್ಕೆ ಹೇಳುತ್ತಾರೆ ಎನ್ನುತ್ತಾರೆ. ಆದಾಗ್ಯೂ, ಈ ಮುಂಚಿನಿಂದಲೂ ನಾವು ವಿದ್ಯುನ್ಮಾನ ಮತಯಂತ್ರಗಳ ದುರ್ಬಳಕೆ ಕುರಿತು ಹೇಳುತ್ತಲೇ ಬಂದಿದ್ದೇವೆ. ವಿರೋಧ ಪಕ್ಷಗಳು ಚುನಾವಣಾ ಆಯೋಗಕ್ಕೂ ಮನವಿ ಮಾಡಿವೆ. ಆದಾಗ್ಯೂ, ಚುನಾವಣಾ ಆಯೋಗವು ಇದನ್ನು ಒಪ್ಪುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಭಾರತವನ್ನು ಹೊರತುಪಡಿಸಿ ಇಡೀ ಜಗತ್ತೇ ವಿದ್ಯುನ್ಮಾನ ಮತಯಂತ್ರಗಳನ್ನು ಕೈಬಿಟ್ಟು ಮತಪತ್ರಗಳ ಮೂಲಕ ಚುನಾವಣೆಗಳನ್ನು ಕೈಗೊಳ್ಳುತ್ತಿವೆ. ಅಮೇರಿಕದಂತಹ ದೊಡ್ಡ ದೇಶವೇ ಮತಪತ್ರ ಬಳಸುತ್ತಿದೆ. ಭಾರತದಲ್ಲಿ 110 ಕೋಟಿ ಜನಸಂಖ್ಯೆ ಇರುವಾಗ ಮತಪತ್ರ ಬಳಸಲಾಗುತ್ತಿತ್ತು. ಈಗ ಇರುವ 130 ಕೋಟಿ ಜನಸಂಖ್ಯೆಗೆ ಮತಪತ್ರ ಬಳಸಲು ದೊಡ್ಡ ತೊಂದರೆಯೇನೂ ಆಗದು. ಚುನಾವಣಾ ಆಯೋಗ ಮತಪತ್ರ ಬಳಸಲು ಮುಂದಾಗುತ್ತಿಲ್ಲ. ಅದನ್ನೇ ಬಿಜೆಪಿ ಬಂಡವಾಳ ಮಾಡಿಕೊಂಡು ಅಧಿಕಾರದ ಗದ್ದುಗೆ ಏರುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರದಲ್ಲಿನ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಎನ್‌ಡಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಖರ್ಗೆಯವರು, ದೇಶದ ಆರ್ಥಿಕ ಪರಿಸ್ಥಿತಿ ಹಿಂದೆಂದೂ ಕಂಡರಿಯದಂತೆ ಬಿಕ್ಕಟ್ಟು ಎದುರಿಸುತ್ತಿದೆ. ನಿರುದ್ಯೋಗ ಸಮಸ್ಯೆ ಮತ್ತಷ್ಟು ಉಲ್ಬಣಿಸಿದೆ. ಕೈಗಾರಿಕೆಗಳು ಮುಚ್ಚಿವೆ ಎಂದು ಆರೋಪಿಸಿದರು.
ಕೇವಲ ಸುಳ್ಳುಗಳನ್ನು ಹೇಳಿಕೊಂಡು ಆಡಳಿತ ನಡೆಸಲಾಗುತ್ತಿದೆ. ಸಮಸ್ಯೆಗಳಿಗೆ ಸ್ಪಂದಿಸದೇ ಜನರ ಗಮನವನ್ನು ಬೇರೆಡೆ ಸೆಳೆಯಲು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ವಿಷಯಗಳನ್ನು ಬಿಜೆಪಿ ನಾಯಕರು ಚುನಾವಣಾ ಸಂದರ್ಭದಲ್ಲಿ ಮುಂದೆ ಮಾಡುತ್ತಾರೆ ಎಂದು ಅವರು ದೂರಿದರು.

ಅಭಿವೃದ್ಧಿ ವಿಷಯದಲ್ಲಿ ರಾಜ್ಯ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ. ಸ್ವತ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ ಅನುದಾನ ಹಂಚಿಕೆಯಲ್ಲಾದ ತಾರತಮ್ಯವನ್ನು ಸದನದಲ್ಲಿ ಒಪ್ಪಿಕೊಳ್ಳುವುದರೊಂದಿಗೆ ಅದನ್ನು ಸರಿಪಡಿಸುವುದಾಗಿ ಭರವಸೆ ನೀಡಿದ್ದರು. ಆದಾಗ್ಯೂ, ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಈ ಹಿಂದೆ ನಿಗದಿಯಾಗಿದ್ದ ಹಣವನ್ನು ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಬಳಕೆ ಮಾಡಲಾಗುತ್ತಿದೆ. ಅಭಿವೃದ್ಧಿಯಲ್ಲಿ ರಾಜಕೀಯ ಮಾಡುವುದು ಯಾರಿಗೂ ಶೋಭೆ ತರುವುದಿಲ್ಲ ಎಂದು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಖರ್ಗೆಯವರು ಕಿಡಿಕಾರಿದರು.

ರಾಜ್ಯ ಸರ್ಕಾರ ಕೊಡುವ ಅನುದಾನ ಯಾವುದೋ ವ್ಯಕ್ತಿ ಅಥವಾ ಪಕ್ಷಕ್ಕೆ ಹೋಗಲ್ಲ. ಆಯಾ ಕ್ಷೇತ್ರದ ಜನತೆಯ ಅಭಿವೃದ್ಧಿಗೆ ನೆರವಾಗುತ್ತದೆ. ರಸ್ತೆ, ಕುಡಿಯುವ ನೀರು ಇತ್ಯಾದಿ ಸಾರ್ವಜನಿಕರಿಗೆ ಉಪಯೋಗವಾಗುವ ಕೆಲಸಗಳು, ಯಾವ ಶಾಸಕರಿಗೆ ಎಷ್ಟು ಅನುದಾನ ಕೊಡಬೇಕು ಅದನ್ನು ಕೊಡಬೇಕು. ಅದನ್ನು ಬಿಟ್ಟು ಈ ಹಿಂದೆ ನಿಗದಿಯಾದ ಹಣವನ್ನು ಮರಳಿ ಪಡೆಯೋದು ಕಾಂಗ್ರೆಸ್, ಬಿಜೆಪಿ ಶಾಸಕರೆಂದು ತಾರತಮ್ಯ ಮಾಡುವುದು ಸರಿಯಲ್ಲ. ಅಭಿವೃದ್ಧಿ ವಿಷಯದಲ್ಲಿ ರಾಜಕಾರಣ ಮಾಡುವುದು ಬಿಡಬೇಕು. ತಾರತಮ್ಯ ಸರಿಪಡಿಸುವುದಾಗಿ ಹೇಳಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನುಡಿದಂತೆ ನಡೆಯಬೇಕು ಎಂದು ಅವರು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News