ಬಾಳೆಹೊನ್ನೂರು: ಬ್ರಿಟಿಷರ ಕಾಲದ ಸೇತುವೆಯ ಸಾಮರ್ಥ್ಯ ಪರಿಶೀಲನೆ

Update: 2019-10-23 18:39 GMT

ಚಿಕ್ಕಮಗಳೂರು, ಅ.23: ಜಿಲ್ಲೆಯ ಪ್ರಸಿದ್ಧ ಪ್ರವಾಸಿತಾಣಗಳಾದ ಶೃಂಗೇರಿ, ಕಳಸ, ಹೊರನಾಡು ಪಟ್ಟಣಗಳಿಗೆ ನಗರದಿಂದ ಸಂಪರ್ಕ ಕಲ್ಪಿಸುವ ಬಾಳೆಹೊನ್ನೂರು ಪಟ್ಟಣದಲ್ಲಿರುವ ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾದ ಸೇತುವೆಯ ಬಾಳಿಕೆ ಸಾಮರ್ಥ್ಯವನ್ನು ಬುಧವಾರ 20ಕ್ಕೂ ಹೆಚ್ಚು ಅಧಿಕಾರಿಗಳ ತಂಡ ಪರಿಶೀಲಿಸಿತು.

ಬುಧವಾರ ಬೆಳಗ್ಗೆ 10ರಿಂದ 1ರವರೆಗೆ ಬ್ರಿಡ್ಜ್ ಟೆಸ್ಟಿಂಗ್ ಯಂತ್ರದ ಮೂಲಕ ತಪಾಸಣೆ ಸೇತುವೆ ಸ್ಥಿತಿಗತಿಯ ಬಗ್ಗೆ ಪರಿಶೀಲನಾ ಕಾರ್ಯ ಹಮ್ಮಿಕೊಂಡಿದ್ದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೆ ಮೂರು ಗಂಟೆಗಳ ಕಾಲ ಬಾಳೆಹೊನ್ನೂರು ಮಾರ್ಗವಾಗಿ ಸಂಚರಿಸುವ ಚಿಕ್ಕಮಗಳೂರು, ಶೃಂಗೇರಿ, ಕಳಸ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿಷೇಧಿಸಿತ್ತು. ಸುಮಾರು 20 ಅಧಿಕಾರಿಗಳ ತಂಡ ವಿಶೇಷ ಯಂತ್ರದ ಸಹಾಯದಿಂದ ಸುಮಾರು ಮೂರು ಗಂಟೆಗಳ ಕಾಲ ಬಾಳೆಹೊನ್ನೂರು ಪಟ್ಟಣದಲ್ಲಿ ಭದ್ರಾನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಸೇತುವೆಯನ್ನು ಪರಿಶೀಲಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಧಿಕಾರಿಗಳು, ಈ ಸೇತುವೆ ನಿರ್ಮಿಸಿ ಸುಮಾರು 100 ವರ್ಷಗಳು ಕಳೆದಿವೆ. ಇತ್ತೀಚೆಗೆ ಭಾರೀ ಮಳೆಯಾದ ಹಿನ್ನೆಲೆಯಲ್ಲಿ ಭದ್ರಾನದಿಯಲ್ಲಿ ಭಾರೀ ಪ್ರಮಾಣದಲ್ಲಿ ನೀರು ಹರಿದು ಸೇತುವೆಗೆ ಕೆಲವೆಡೆ ಹಾಣಿಯಾಗಿದೆ. ಈ ಹಿನ್ನೆಲೆಯಲ್ಲಿ ರಸ್ತೆಯ ಸಾಮರ್ಥ್ಯವನ್ನು ಪರಿಶೀಲಿಸಲು ಜಿಲ್ಲಾಧಿಕಾರಿಗಳು ಕೋರಿದ್ದ ಮೇರೆಗೆ ಪರಿಶೀಲಿಸಿದ್ದೇವೆ. ಸೇತುವೆ ಬ್ರಿಟಿಷರ ಕಾಲದಲ್ಲಿ ನಿರ್ಮಾಣಗೊಂಡಿದ್ದರೂ ಇನ್ನೂ ಗಟ್ಟಿಮುಟ್ಟಾಗಿದೆ. ವಾಹನಗಳ ಸಂಚಾರಕ್ಕೆ ಯಾವುದೇ ತೊಂದರೆ ಇಲ್ಲ. ಈ ಸಂಬಂಧ ಶೀಘ್ರ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News