ಮಹಾರಾಷ್ಟ್ರ, ಕರ್ನಾಟಕ ಕರಾವಳಿಯಲ್ಲಿ ಭಾರೀ ಮಳೆ ಸಾಧ್ಯತೆ

Update: 2019-10-24 18:05 GMT

ಮುಂಬೈ, ಅ. 23: ಕೊಂಕಣ ಕರಾವಳಿ, ಗೋವಾ ಹಾಗೂ ಕರ್ನಾಟಕ ಕರಾವಳಿಯಲ್ಲಿ ಶುಕ್ರವಾರ ಭಾರೀ ಮಳೆ ಸುರಿಯು ಸಾಧ್ಯತೆ ಇದ್ದು, ಭಾರತೀಯ ಹವಾಮಾನ ಇಲಾಖೆ ಬುಧವಾರ ರೆಡ್ ಅಲರ್ಟ್ ಘೋಷಿಸಿದೆ.

ಅರಬ್ಬಿ ಸಮುದ್ರದಲ್ಲಿ ವಾಯು ಭಾರ ಕುಸಿತದಿಂದ ಚಂಡಮಾರುತ ಸೃಷ್ಟಿಯಾಗುವ ಸಾಧ್ಯತೆ ಇದ್ದು, ಕೊಂಕಣ, ಗೋವಾ ಹಾಗೂ ಕರ್ನಾಟಕ ಕರಾವಳಿಯಲ್ಲಿ ಭಾರೀ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಮುಂಬೈ ಕೇಂದ್ರ ಮುನ್ನೆಚ್ಚರಿಕೆ ನೀಡಿದೆ.

ಈ ನಡುವೆ ಹವಾಮಾನ ಇಲಾಖೆಯ ಗೋವಾ ಕೇಂದ್ರ ಬುಧವಾರ ರೆಡ್ ಅಲರ್ಟ್ ಘೋಷಿಸಿದೆ.

ಚಂಡಮಾರುತದ ಪರಿಚಲನ ಮರಾಠವಾಡ ವಲಯ ಸಹಿತ ಮಹಾರಾಷ್ಟ್ರದ ಕೇಂದ್ರ ಭಾಗಗಳಲ್ಲಿ ಹಾಗೂ ಪಶ್ಚಿಮ ಮಹಾರಾಷ್ಟ್ರ, ಕೊಂಕಣದಲ್ಲಿ ಕಳೆದ ಕೆಲವು ದಿನಗಳಿಗೆ ಮಳೆ ಸುರಿಯಲು ಕಾರಣವಾಗಿದೆ.

ಅರಬ್ಬಿ ಸಮುದ್ರದಲ್ಲಿ ಮುಂದಿನ 24 ಗಂಟೆಗಳಲ್ಲಿ ವಾಯು ಭಾರ ಕುಸಿತದಿಂದ ಚಂಡ ಮಾರುತ ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುಂಬೈ ಕೇಂದ್ರ ಹೇಳಿದೆ.

ಭಾರಿ ಮಳೆ ಸುರಿಯಲಿರುವ ಮಹಾರಾಷ್ಟ್ರದ ಕೊಂಕಣ ವಲಯದ ಸಿಂಧುದುರ್ಗ ಹಾಗೂ ರತ್ನಗಿರಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಇತರ ಪ್ರದೇಶಗಳಲ್ಲಿ ಗುರುವಾರ ಹಾಗೂ ಶುಕ್ರವಾರ ಕಡಿಮೆ ತೀವ್ರತೆಯಿಂದ ಕೂಡಿ ಮಳೆ ಸುರಿದಿದೆ.

ಭಾರತೀಯ ಹವಾಮಾನ ಇಲಾಖೆಯ ಗೋವಾ ತನ್ನ ಪತ್ರಿಕಾ ಹೇಳಿಕೆಯಲ್ಲಿ ಕೇಂದ್ರ ಪ್ರತಿಕೂಲ ಹವಾಮಾನ ಇರುವುದರಿಂದ ಮನೆಯಿಂದ ಹೊರಗಿಳಿಯದಂತೆ ಹಾಗೂ ಮೀನುಗಾರರು ಸಮುದ್ರದಲ್ಲಿ ಮೀನುಗಾರಿಕೆ ನಡೆಸದಂತೆ ಮುನ್ನೆಚ್ಚರಿಕೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News